ಇದೀಗ ರಸ್ತೆ ಬದಿ, ಅರಣ್ಯ, ಉದ್ಯಾನ ಇಲ್ಲವೇ ಕಾಲೇಜು ಕ್ಯಾಂಪಸ್ ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನ ತುಂಬೆಲ್ಲಾ ಗುಲ್‌ಮೊಹರ್‌ನ ಬೆಡಗು, ಸೌಂದರ್ಯ ಎಲ್ಲರನ್ನು ಸೆಳೆಯುತ್ತಿದೆ. ತನ್ನ ಕೆಂಬಣ್ಣದ ಹೂವನ್ನು ಮುಡಿ ತುಂಬ ಹೊತ್ತು ನಿಂತಿರುವ ಗುಲ್‌ಮೊಹರ್ ಮರಗಳು ಚೆಲುವೆಲ್ಲ ತನ್ನದೆಂದು ನಲಿಯುತ್ತಿವೆ.
ಜನವರಿಯಿಂದಲೇ ಮರದ ಎಲೆಗಳು ಉದುರಲು ಆರಂಭವಾಗಿ ಮಾರ್ಚ್ ವೇಳೆಗೆ ಸಂಪೂರ್ಣ ಎಲೆ ಉದುರಿಸಿಕೊಂಡು ಬೋಳು ಬೋಳಾಗಿ ಕಾಣುತ್ತವೆ. ಏಪ್ರಿಲ್-ಮೇ ತಿಂಗಳು ಸಮೀಪಿಸುತ್ತಿದ್ದಂತೆ ಹೂವು ಬಿಡಲು ಶುರುವಾಗುತ್ತದೆ. ಇದೇ ತಿಂಗಳಲ್ಲಿ ವಿವಾಹಗಳು ಹೆಚ್ಚಾಗಿ ನಡೆಯುವುದರಿಂದ ಗ್ರಾಮೀಣ ಭಾಗದಲ್ಲಿ ಮದುವೆ ಚಪ್ಪರಕ್ಕೆ ಸೌಂದರ್ಯ ಹೆಚ್ಚಿಸಲು ಗುಲ್ ಮೊಹರ್ ಹೂವುಗಳಿಂದ ಅಲಂಕರಿಸಲಾಗುತ್ತದೆ. ಚಿಕ್ಕವರಿದ್ದಾಗ ಮೊಗ್ಗಿನಲ್ಲಿರುವ ದಳಗಳನ್ನು ಬಿಡಿಸಿ ಅದರಲ್ಲಿ ಕೋಳಿ ಜಗಳದಾಟ ಆಡುತ್ತಿದ್ದ ಕಾಲ ನೆನಪಿಗೆ ಬರುತ್ತದೆ.
ಗ್ರಾಮೀಣ ಭಾಗದಲ್ಲಿ ಕತ್ತಿಕಾಯಿ ಮರ ಎಂದೇ ಕರೆಯುತ್ತಾರೆ, ಆದರೆ ಇದರ ವೈಜ್ಞಾನಿಕ ಹೆಸರು ಡೆಲೊನಿಕ್ಸ್ ರೇಜಿಯಾ. ರೇಜಿಯಾ ಎಂದರೆ ಲ್ಯಾಟೀನ್‌ನಲ್ಲಿ ರಾಜಯೋಗ್ಯ ಎಂದರ್ಥ. ತನ್ನ ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತು ನಿಂತಿರುವ ಹೂವು ಚೆಲುವೆಲ್ಲಾ ನನ್ನದೇ ಎನ್ನುತ್ತಾ ನಾಚಿ ನಲಿಯುತ್ತಿವೆ.
ಉಷ್ಣವಲಯ ವಾತಾವರಣದಲ್ಲಿ ಬೆಳೆಯುವ ಗುಲ್‌ಮೊಹರ್‌ಗೆ ಕೆಂಪು ತುರಾಯಿ, ಫ್ಲಾಂಬೋಯಾಂಟ್, ರಾಯಲ್ ಫಿಕಾಕ್ ಫ್ಲವರ್ ಎಂಬ ಹೆಸರುಗಳೂ ಇವೆ. ಬಂಗಾಳದಲ್ಲಿ ಇದನ್ನು ಕೃಷ್ಣಚುರ ಎಂತಲೂ ಕರೆಯುತ್ತಾರೆ. ದೂರದಿಂದ ನೋಡಿದಾಗ ಬೆಂಕಿಯ ಜ್ವಾಲೆಯಂತೆ ಕಂಡುಬರುವ ತನ್ನ ಕೆಂಬಣ್ಣದ ಹೂಗಳಿಂದ ಇದನ್ನು ಬೆಂಕಿಮರ ಅಥವಾ ಫೈರ್‌ಟ್ರೀ ಅಂತಲೂ ಕರೆಯುವುದುಂಟು. ಭಾರತದಲ್ಲಿ ಇದು ಮೇ ತಿಂಗಳಲ್ಲಿ ಹೂ ಬಿಡುವುದರಿಂದ ಮೇ ಫ್ಲವರ್ ಎನ್ನುತ್ತಾರೆ. ಹಾಗೆಯೇ, ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಈ ಹೂವು ಬಿಡುವುದರಿಂದ ಹೋರಾಟ, ಶ್ರಮಾದಾನ ಮತ್ತು ಕಾರ್ಮಿಕರ ಸಂಕೇತವನ್ನು ಪ್ರತಿನಿಧಿಸುತ್ತವೆ ಎಂದೂ ಕಾರ್ಮಿಕರು ಹೇಳುತ್ತಾರೆ. ಇದು ಭಾರತ ಮಾತ್ರವಲ್ಲದೇ, ಆಸ್ಟ್ರೇಲಿಯಾ, ಕೆರಿಬಿಯನ್, ದಕ್ಷಿಣ ಫ್ಲೋರಿಡಾ, ಚೀನಾ ಮತ್ತು ತೈವಾನ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಗುಲ್ ಮೊಹರ್ ಸುಮಾರು 15ರಿಂದ 18 ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ಫಲವತ್ತಾದ ನೆಲ ಮತ್ತು ನೀರಿನ ಸೌಲಭ್ಯವಿದ್ದರೆ ಇನ್ನೂ ಎತ್ತರವಾಗಿಯೂ ಬೆಳೆಯಬಹುದು.
ಗುಲ್ ಮೊಹರ್ ಹೂಗಳು ಸಾಕಷ್ಟು ದೊಡ್ಡವೂ, ಕಿತ್ತಳೆ ಮಿಶ್ರಿತ ಕೆಂಪುಬಣ್ಣದಿಂದ ಹಿಡಿದು ಕಡು ಕೆಂಪು ಬಣ್ಣದವರೆಗೂ ಹಲವಾರು ಬಗೆಗಳಿಂದ ಕೂಡಿ ಬಹುಸುಂದರವಾಗಿರುತ್ತವೆ. ಇದರ ಹೂಗಳು 5 ಪುಷ್ಪಪತ್ರಗಳನ್ನು ಹೊಂದಿರುತ್ತವೆ. ಅವುಗಳ ಹೊರಭಾಗ ಹಸಿರು ಹಾಗೂ ಒಳಭಾಗ ಕೆಂಪುಬಣ್ಣದಿಂದ ಕೂಡಿವೆ. ಪ್ರತಿಯೊಂದು ಹೂ 5 ದಳಗಳನ್ನು ಹೊಂದಿವೆ. ಅವುಗಳಲ್ಲಿ ನಾಲ್ಕು ಒಂದೇ ಬಗೆಯವಾಗಿದ್ದು ಕೆಂಪು ಬಣ್ಣದಿಂದ ಕೂಡಿರುತ್ತವೆ. ಉಳಿದ ಒಂದು ದಳ ಬಿಳಿ ಅಥವಾ ನೀಲಿ ಬಣ್ಣದಾಗಿದ್ದು, ಅದರ ಮೇಲೆಲ್ಲ ಕೆಂಪು ಮಚ್ಚೆಗಳಿವೆ. ಎಲ್ಲಾ ದಳಗಳ ಅಂಚುಗಳೂ ಕೊಂಚ ಮಡಿಚಿದಂತಿದೆ. ಹೂ 10 ಕೇಸರಗಳನ್ನು ಹೊಂದಿದ್ದು, ಕೆಂಪುಬಣ್ಣದಿಂದ ಕೂಡಿರುತ್ತವೆ. ಆದರೆ, ಹೂ ಬಿಡುವ ಮುನ್ನ ಎಲೆಗಳೆಲ್ಲ ಉದುರಿಹೋಗುತ್ತವೆ.
ಒಟ್ಟಿನಲ್ಲಿ ರಾಶಿ–ರಾಶಿಯಾಗಿ ಕಂಡುಬರುವ ಗುಲ್‌ಮೊಹರ್ ಹೂಗಳು ಪರಿಸರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವನ್ನು ಉಂಟುಮಾಡುತ್ತವೆ. ರಂಗುರಂಗಿನ ಬಣ್ಣಗಳಿಂದ ಎಲ್ಲರ ಕಣ್ಮನ ಸೆಳೆಯುವ ಗುಲ್‌ಮೊಹರ್ ಹೂ ‘ಮಡ್ ಗಾಸ್ಕರ್’, ‘ಫೆಡರೇಷನ್ ಆಫ್ ಸೆಂಟ್ ಕಿಟ್ಸ್’ ಮತ್ತು ‘ನೇವಿಸ್’ ಎಂಬ ವೆಸ್ಟ್ ಇಂಡೀಸ್‌ನ ದ್ವೀಪರಾಷ್ಟ್ರವೊಂದರ ರಾಪ್ಟ್ರೀಯ ಪುಷ್ಪ ಎನ್ನುವ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.