ಮೈಸೂರು: ಇಲ್ಲಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬಳಿ ನಿರ್ಮಿಸಿದ್ದ, ಮಸೀದಿಯ ಗುಂಬಜ್ ಮಾದರಿಯಲ್ಲಿದೆ ಎಂಬ ಕಾರಣದಿಂದ ವಿವಾದಕ್ಕೀಡಾಗಿದ್ದ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿದೆ.
ಸ್ವತಃ ಶಾಸಕ ಎಸ್.ಎ.ರಾಮದಾಸ್ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. 'ಮೈಸೂರು ಪಾರಂಪರಿಕ ನಗರಿಯಾಗಿದ್ದು, ವಿಶ್ವವಿಖ್ಯಾತ ಮೈಸೂರು ಅರಮನೆಯ ಮಾದರಿಯಲ್ಲಿ ಪಾರಂಪರಿಕ ಬಸ್ ತಂಗುದಾಣ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅದಕ್ಕೆ ಅನವಶ್ಯಕ ಧರ್ಮದ ಲೇಪನ ನೀಡಿ ಅದನ್ನು ವಿವಾದದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಆದ್ದರಿಂದ ಹಿರಿಯರು, ಸಲಹೆಗಾರರ ಜೊತೆಯಲ್ಲಿ ನನ್ನ ಅಳಲು ತೋಡಿಕೊಂಡು ಮುಂದೆ ಎಂದೂ ಇದೊಂದು ವಿವಾದ ಕೇಂದ್ರ ಎಂಬ ಕಪ್ಪು ಚುಕ್ಕೆಯನ್ನು ಕೆಲವರು ಇಡಬಾರದೆಂದು, ನಿಲ್ದಾಣದ ಮೇಲಿನ ಎರಡು ಗುಂಬಜ್‌ಗಳನ್ನು ತೆಗೆಯಲಾಗಿದೆ. ಮಧ್ಯದ ಗುಂಬಜ್ ಅನ್ನು ಮಾತ್ರವೇ ಯಥಾಸ್ಥಿತಿಯಲ್ಲಿ ಬಿಡಲಾಗಿದೆ. ಮುಂದೆ ಇದೇ ಮಾದರಿಯಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಪಡೆಯಲಾಗಿದೆ. ಇದನ್ನು ಯಾರೂ ಅನ್ಯಥಾ ಭಾವಿಸಬಾರದು' ಎಂದು ಮಾಹಿತಿ ನೀಡಿದ್ದಾರೆ.
'ಬಸ್ ನಿಲ್ದಾಣವನ್ನು ಮಸೀದಿಯ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಅದನ್ನು ನಾಲ್ಕು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾನೇ ತೆರವುಗೊಳಿಸುತ್ತೇನೆ' ಎಂದು ಇತ್ತೀಚಿಗೆ ರಂಗಾಯಣದಲ್ಲಿ ನಡೆದಿದ್ದ 'ಟಿಪ್ಪು ನಿಜಕನಸುಗಳು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿಯ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಪರ ವಿರೋಧ ಚರ್ಚೆಗಳು ನಡೆದಿದ್ದವು. ಶಾಸಕ- ಸಂಸದರ ನಡುವಿನ ಮುಸುಕಿನ ಗುದ್ದಾಟವೂ ಬಹಿರಂಗಗೊಂಡಿತ್ತು. ಈ ಬಗ್ಗೆ ಶಾಸಕ ರಾಮದಾಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದರು. ನಿಲ್ದಾಣವನ್ನು ಅನುಮತಿ ಪಡೆಯದೇ ನಿರ್ಮಿಸಲಾಗಿದ್ದು, ಏಳು ದಿನಗಳ ಒಳಗೆ ತೆರವುಗೊಳಿಸಬೇಕು, ಮೂರು ದಿನಗಳ ಒಳಗೆ ವಿವರಣೆ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಮಹಾನಗರ ಪಾಲಿಕೆ ಹಾಗೂ ನಿಲ್ದಾಣ ನಿರ್ಮಿಸಿದ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು.
ಈ ನಡುವೆ, ಗುಂಬಜ್‌ಗಳಿಗೆ ಕಡುಗೆಂಪು ಬಣ್ಣವನ್ನು ಬಳಿಯಲಾಗಿತ್ತು. (ಅದಕ್ಕೆ ಮೊದಲು ಬಂಗಾರದ ಬಣ್ಣವಿತ್ತು). ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣ ಎಂಬ ಫಲಕ ಹಾಕಿ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುತ್ತೂರು ಶ್ರೀಗಳ ಫೋಟೊ ಹಾಕಲಾಗಿತ್ತು.
'ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ. ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.