ADVERTISEMENT

ಸರ್ಕಾರ ಆರ್ಥಿಕ ದಿವಾಳಿಯಾಗಿದೆ; ಕೂಡಲೇ ಶ್ವೇತಪತ್ರ ಹೊರಡಿಸಲಿ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 23:29 IST
Last Updated 19 ಜೂನ್ 2024, 23:29 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ದಿಕ್ಕು ತಪ್ಪಿದ್ದು, ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಕೂಡಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾದ ಹಣ ಎಷ್ಟು ಎಂಬುದನ್ನು ಜನತೆಯ ಮುಂದಿಡಬೇಕು’ ಎಂದರು.

‘ಆರ್ಥಿಕ ನೀತಿ ದುರ್ಬಲವಾಗಿದೆ. ಮಹಿಳೆಯರಿಗೆ ಉಚಿತ್ರ ಪ್ರಯಾಣ ಸೌಲಭ್ಯ ಕಲ್ಪಿಸಿದರೂ ಕೆಎಸ್‌ಆರ್‌ಟಿಸಿ ಲಾಭದಲ್ಲಿದೆ ಎನ್ನುತ್ತಾರೆ. ಜನರಿಗೆ ಟೋಪಿ ಹಾಕಲಾಗುತ್ತಿದೆ. ಹಣವಿಲ್ಲದೇ ಸರ್ಕಾರಿ ಕಟ್ಟಡಗಳನ್ನು ಅಡವಿಡಲಾಗುತ್ತಿದೆ. ನೀರು, ವಿದ್ಯುತ್‌, ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟಾಗಿದೆ’ ಎಂದು ಆರೋಪಿಸಿದರು. 

ADVERTISEMENT

‘ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿತ್ತು. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಪೋಷಕರು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಕಟ್ಟಿ ಸುಸ್ತಾಗಿದ್ದಾರೆ. 1ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು.

‘ಜನ ಸಾಲ ಮಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಿರುವ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘2014ರ ಲೋಕಸಭಾ ಚುನಾವಣೆ ವೇಳೆ ನಟ ದರ್ಶನ್ ನನ್ನ ಪರ ಪ್ರಚಾರ ಮಾಡಿದ್ದರು. ಆಗ ಅವರ ತಾಯಿ ಕಾಂಗ್ರೆಸ್‌ನಲ್ಲಿದ್ದರು. ದರ್ಶನ್ ಬಗ್ಗೆ ಮಾತನಾಡಿ ನಾನೇಕೆ ಸಾಕ್ಷಿ ಹೇಳಲು ಹೋಗಿ ನಿಲ್ಲಬೇಕು. ನಮ್ಮ ನಟರಿಗೆ ರಾಜ್‌ಕುಮಾರ್ ಮಾದರಿಯಾಗಬೇಕಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.