ADVERTISEMENT

ಆದಿವಾಸಿಗಳ ಕೇಶ ತೈಲಕ್ಕೆ ಬ್ರ್ಯಾಂಡ್‌ ಅಗತ್ಯ: ಸಚಿವ ಸಲಹೆ

ಪಕ್ಷಿರಾಜಪುರ ಆದಿವಾಸಿಗಳ ಕೇಶ ತೈಲಕ್ಕೆ ಅಂತರಾಷ್ಟ್ರೀಯ ಮನ್ನಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:28 IST
Last Updated 27 ನವೆಂಬರ್ 2020, 6:28 IST
ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಆದಿವಾಸಿಗಳ ಕಾಲೊನಿಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಗುರುವಾರ ಭೇಟಿ ನೀಡಿ ಸ್ಥಳೀಯರು ಸಿದ್ಧಪಡಿಸುವ ವಿವಿಧ ಕೇಶ ತೈಲದ ಕುರಿತು ಮಾಹಿತಿ ಸಂಗ್ರಹಿಸಿದರು
ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಆದಿವಾಸಿಗಳ ಕಾಲೊನಿಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಗುರುವಾರ ಭೇಟಿ ನೀಡಿ ಸ್ಥಳೀಯರು ಸಿದ್ಧಪಡಿಸುವ ವಿವಿಧ ಕೇಶ ತೈಲದ ಕುರಿತು ಮಾಹಿತಿ ಸಂಗ್ರಹಿಸಿದರು   

ಹುಣಸೂರು: ಹಕ್ಕಿಪಿಕ್ಕಿ ಸಮುದಾಯದವರು ಉತ್ಪಾದಿಸುತ್ತಿರುವ ಆಯುರ್ವೇದ ಗುಣವುಳ್ಳ ಕೇಶ ತೈಲಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಅವಕಾಶ ಕಲ್ಪಿಸಲು ಬ್ರ್ಯಾಂಡ್ ಅಗತ್ಯವಿದೆ ಎಂದು ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಪಕ್ಷಿರಾಜಪುರ ಆದಿವಾಸಿ ಕಾಲೊನಿಗೆ ಭೇಟಿ ನೀಡಿ ಆದಿವಾಸಿ ಸಮುದಾಯದವರು ಹಮ್ಮಿಕೊಂಡಿದ್ದ ಗಿಡಮೂಲಿಕ ಹಾಗೂ ವಿವಿಧ ತೈಲ ಪ್ರದರ್ಶನ ವೀಕ್ಷಿಸಿ ಉತ್ಪಾದಕರೊಂದಿಗೆ ಚರ್ಚಿಸಿದರು.

ರಾಜ್ಯದಲ್ಲಿ ಆದಿವಾಸಿಗಳು ಪಾರಂಪರಿಕವಾಗಿ ಸಿದ್ಧಗೊಳಿಸುವ ಗುಡಿ ಉತ್ಪನ್ನ ಸಂರಕ್ಷಣೆಗೆ ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಯ ಹಾಡಿ ಆಯ್ಕೆಗೊಂಡಿದೆ. ಮೈಸೂರು ಜಿಲ್ಲೆಯ ಪಕ್ಷಿರಾಜಪುರ ಆದಿ ವಾಸಿ ಕಾಲೊನಿಯೂ ಸೇರಿದೆ ಎಂದರು.

ADVERTISEMENT

ಈ ಸಮುದಾಯ ಸಿದ್ಧಪಡಿಸುವ ತೈಲಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಹಾಗೂ ಮಾರುಕಟ್ಟೆಗೆ ಅಗತ್ಯ. ಅದಕ್ಕೆ ಬೇಕಿರುವ ಬ್ರ್ಯಾಂಡ್ ಅನ್ನು ಸರ್ಕಾರದಿಂದ ಕಲ್ಪಿಸಿ ವಾಣಿಜ್ಯ ವ್ಯವಹಾರಕ್ಕೆ ಸಹಕರಿಸಿ ಆರ್ಥಿಕ ಸ್ವಾವಲಂಬಿಗಳಾಗಲು ನೆರವಾಗಲು ಬದ್ಧ ಎಂದರು.

₹ 2 ಕೋಟಿ: ಕೇಂದ್ರ ಸರ್ಕಾರದಿಂದ ಬುಡಕಟ್ಟು ಜನರ ಪಾರಂಪರಿಕವೈದ್ಯ ಪದ್ಧತಿ ಸಂಸ್ಕರಣೆ ಮತ್ತು ಸಂಪ್ರದಾಯವನ್ನು ಮತ್ತಷ್ಟು ಬೆಳೆಸುವ ದಿಕ್ಕಿನಲ್ಲಿ ಸ್ಥಳೀಯವಾಗಿ ಗುಡಿ ಕೈಗಾರಿಕೆ ಸ್ಥಾಪನೆ ಹಾಗೂ ಮೂಲ ಸವಲತ್ತು ಕಲ್ಪಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಅತಿ ಶೀಘ್ರದಲ್ಲೇ ತೈಲಗಳಿಗೆ ಮೌಲ್ಯವರ್ಧನೆ ಕಲ್ಪಿಸುವ ದಿಕ್ಕಿನಲ್ಲಿ ಕೆಲಸ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರದರ್ಶನ: ಪಕ್ಷಿರಾಜಪುರ ಕಾಲೊನಿಯಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಮನೆಯಲ್ಲಿ ಗಿಡಮೂಲಿಕೆಯಿಂದ ಸಿದ್ಧಪಡಿಸಿದ ತೈಲ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ತೈಲ ಉತ್ಪತ್ತಿಗೆ ಸ್ಥಳೀಯವಾಗಿ ಸಿಗುವ ಗಿಡಮೂಲಕೆ ಕುರಿತು ಮಾಹಿತಿ ನೀಡಿದರು.

ಶಾಸಕ ಮಂಜುನಾಥ್, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಂ, ತಾ.ಪಂ.ಅಧ್ಯಕ್ಷೆ ಪದ್ಮಮ್ಮ, ಮಾಜಿ ಶಾಸಕರಾದ ಸಿದ್ದರಾಜು, ಶಿವಣ್ಣ, ಕಟ್ಟನಾಯಕ, ರವಿಪ್ರಸನ್ನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯ ನಿರ್ದೇಶಕ ಸಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.