ADVERTISEMENT

ಚುಂಚನಕಟ್ಟೆ ಜಾನುವಾರು ಪರಿಷೆ: ಹಳ್ಳಿಕಾರ್ ಜೋಡೆತ್ತು ಖರೀದಿ ಜೋರು

ಚುಂಚನಕಟ್ಟೆಯಲ್ಲಿ ಜಾನುವಾರು ಪರಿಷೆ; ವಿವಿಧ ಜಿಲ್ಲೆಗಳ ರೈತರ ಆಗಮನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:47 IST
Last Updated 6 ಜನವರಿ 2024, 15:47 IST
ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಾನುವಾರು ಪರಿಷೆಯಲ್ಲಿ ಮಾರಾಟಕ್ಕಿಟ್ಟ ಹಳ್ಳಿಕಾರ್ ಜೋಡೆತ್ತುಗಳು
ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಾನುವಾರು ಪರಿಷೆಯಲ್ಲಿ ಮಾರಾಟಕ್ಕಿಟ್ಟ ಹಳ್ಳಿಕಾರ್ ಜೋಡೆತ್ತುಗಳು   

ಮೈಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಜಾನುವಾರು ಪರಿಷೆಯಲ್ಲಿ ಹಳ್ಳಿಕಾರ್‌ ಜೋಡೆತ್ತುಗಳ ಖರೀದಿ ಭರಾಟೆ ಜೋರಾಗಿದೆ.

ಹಳ್ಳಿಕಾರ್ ಜೋಡೆತ್ತುಗಳ ಖರೀದಿಗಾಗಿ ರಾಜ್ಯದ ಗದಗ, ಧಾರವಾಡ, ಹಾವೇರಿ, ರಾಯಚೂರು, ಬಳ್ಳಾರಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು  ಸೇರಿದಂತೆ ಹಲವು ಜಿಲ್ಲೆಗಳ ರೈತರು ಪರಿಷೆಗೆ ಬಂದಿದ್ದಾರೆ.

ಹಾಲು ಹಲ್ಲಿನ ಜೋಡಿ ಕರುಗಳಿಗೆ ₹1.20 ಲಕ್ಷ, ಉಳುಮೆ ಮಾಡುವ ಜೋಡೆತ್ತುಗಳಿಗೆ ₹2 ಲಕ್ಷ, ಮೂರಲ್ಲಿನ ಜೋಡೆತ್ತುಗಳಿಗೆ ₹1.60 ಲಕ್ಷದವರೆಗೂ ಮಾರಾಟವಾಗುತ್ತಿದೆ.

ADVERTISEMENT
ಚುಂಚನಕಟ್ಟೆ ಜಾನುವಾರು ಪರಿಷೆಯಲ್ಲಿ ₹4 ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ಜೋಡೆತ್ತು

ಕಳೆದ ವರ್ಷ ಜಾನುವಾರುಗಳಿಗೆ ಚರ್ಮರೋಗ ಕಾಣಿಸಿಕೊಂಡಿದ್ದರಿಂದ ರೈತರು ಜಾನುವಾರುಗಳನ್ನು ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಜ.1ರಿಂದ ಪ್ರಾರಂಭಗೊಂಡಿರುವ ಪರಿಷೆ 12ರವರೆಗೆ ನಡೆಯಲಿದೆ. ಹಳ್ಳಿಕಾರ್ ಜೋಡೆತ್ತುಗಳನ್ನು ಮಾರಾಟ ಮಾಡಲು ಬಂದಿರುವ ರೈತರು ಖರೀದಿದಾರರನ್ನು ಆಕರ್ಷಿಸಲು ಎತ್ತುಗಳಿಗೆ ಅಲಂಕಾರ ಮಾಡಿದ್ದಾರೆ. ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡುತ್ತಿದ್ದಾರೆ. ಅಲ್ಲದೆ, ವಿಶಾಲವಾದ ಚಪ್ಪರದಡಿಯಲ್ಲಿ ಎತ್ತುಗಳನ್ನು ಕಟ್ಟಿ ಹಾಕಿದ್ದಾರೆ.

‘ಹುಬ್ಬಳ್ಳಿಯಿಂದ 10 ಮಂದಿ ಬಂದಿದ್ದೇವೆ. ಉಳುಮೆ ಮಾಡಲು ಜೋಡೆತ್ತುಗಳು ಬೇಕಿದ್ದು, ಪ್ರತಿಯೊಬ್ಬರೂ 2–3 ಜೊತೆ ಹಳ್ಳಿಕಾರ್ ಜೋಡೆತ್ತುಗಳನ್ನು ಖರೀದಿಸಲಿದ್ದಾರೆ’ ಎಂದು ಹುಬ್ಬಳ್ಳಿಯ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿಸಿದರು.

‘ಇಲ್ಲಿನ ಪರಿಷೆಗೆ ಅನೇಕ ವರ್ಷಗಳಿಂದ ಬರುತ್ತಿದ್ದೇನೆ. ಈಗಾಗಲೇ ತಲಾ ₹2 ಲಕ್ಷ ಬೆಲೆ ಬಾಳುವ 4 ಜೊತೆ ಜೋಡೆತ್ತುಗಳನ್ನು ಖರೀದಿಸಿದ್ದು, ಮತ್ತೆ 5 ಜೊತೆ ಖರೀದಿಸಲು ಮುಂದಾಗಿದ್ದೇವೆ’ ಎಂದು ಗದಗ ಜಿಲ್ಲೆಯ ಮಲ್ಲಪ್ಪ ತಿಳಿಸಿದರು.

ಹಾಲು ಹಲ್ಲಿನ ಹಳ್ಳಿಕಾರ್ ಜೋಡೆ ಕರುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.