ಮೈಸೂರು: ‘ಡಿಸೆಂಬರ್ ಮತ್ತು ಜನವರಿಯ ಒಂದು ಭಾನುವಾರವನ್ನು ಗುರುತು ಮಾಡಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ರೀತಿಯಲ್ಲೇ ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಒಂದು ವರ್ಷದೊಳಗೆ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಬೇಕು’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಸಲಹೆ ನೀಡಿದರು.
ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್)ಯಲ್ಲಿ ಶುಕ್ರವಾರ ಉಚಿತ ಶ್ರವಣ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ವಾಕ್– ಶ್ರವಣ ಪರೀಕ್ಷೆ ಮಾಡಿಸುವಂತೆ ಕೇವಲ ಜಾಗೃತಿ ಮೂಡಿಸಿದರೆ ಅದು ಕಟ್ಟ ಕಡೆಯ ವ್ಯಕ್ತಿಗೆ ತಲುಪುವುದು ಕಷ್ಟ. ಸಮಸ್ಯೆ ಪತ್ತೆ ಹಚ್ಚದೆ ಇದ್ದರೆ ಅಂಥ ಮಕ್ಕಳು ದೊಡ್ಡವರಾದ ಬಳಿಕ ಮೂಲೆಗುಂಪಾಗುತ್ತಾರೆ. ದೇಶದ 720 ಜಿಲ್ಲೆಗಳಲ್ಲೂ ಆಯಿಷ್‌ನ ಬಾಹ್ಯಕೇಂದ್ರ (ಔಟ್‌ರೀಚ್ ಸೆಂಟರ್)ವನ್ನು ಸ್ಥಾಪಿಸುವುದರಿಂದ ಮೂಲದಲ್ಲೇ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ. ಪ್ರತಿ ತಾಲ್ಲೂಕುಗಳಲ್ಲೂ ಶಾಲಾ ಮಕ್ಕಳಿಗೆ ವಾಕ್– ಶ್ರವಣ ತಪಾಸಣೆ ಮಾಡಬೇಕು ಎಂದು ಅವರು ಹೇಳಿದರು.
ಸಂಸ್ಥೆಗೆ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಮಾನ್ಯತೆ ಲಭಿಸಿದ ಬಳಿಕ ಕೇಂದ್ರ ಸರ್ಕಾರದಿಂದ ನೀಡಲಾದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಗೆ ಡಾ.ಹರ್ಷವರ್ಧನ್ ಬಂದಿದ್ದರು. ಉದ್ಘಾಟನೆಯನ್ನೂ ಅವರಿಂದಲೇ ನೆರವೇರಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ, ವಿಶ್ವ ಶ್ರವಣ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರ ಶ್ರವಣ ಶಕ್ತಿಯ ಬಗ್ಗೆ ಸಂಸ್ಥೆ ಕಾಳಜಿ ವಹಿಸುತ್ತಿದೆ. ಹಿರಿಯರ ಶ್ರವಣ ದೋಷವನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು.
ಆಯಿಷ್‌ನ ಕಾನ್ಪುರದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಛತ್ತೀಸ್‌ಗಢ, ತ್ರಿಪುರಾದ ಸಂಸ್ಥೆಗಳಿಗೂ ಒಪ್ಪಿಗೆ ಸಿಕ್ಕಿದೆ. ಎಲ್ಲ ಜಿಲ್ಲೆಗಳಲ್ಲೂ ಬಾಹ್ಯ ಕೇಂದ್ರ ಸ್ಥಾಪನೆಗೆ ಸಂಬಂಧಿಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗಿದೆ. ಅದಕ್ಕೆ ಅನುಗುಣವಾಗಿ ಬಾಹ್ಯ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದರು.
ಆರೋಗ್ಯ ಇಲಾಖೆ ರಾಜ್ಯದಲ್ಲಿ ನೀಡುವ ತಾಯಿ ಕಾರ್ಡ್‌ನಲ್ಲಿ ಮಗುವಿಗೆ ನೀಡಬೇಕಾದ ಲಸಿಕೆಗಳ ಮಾಹಿತಿ ಇರುತ್ತದೆ. ಅದರಲ್ಲಿ ಕಿವಿ ಪರೀಕ್ಷೆಯನ್ನೂ ಮಾಡಿಸಬೇಕು ಎಂಬುದನ್ನು ನಮೂದಿಸಿದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕಾಗುತ್ತದೆ. ಮಗು ಹುಟ್ಟಿದ ಮೊದಲ ತಿಂಗಳಲ್ಲಿ ಶ್ರವಣ ಪರೀಕ್ಷೆ ಮಾಡಿಸಬೇಕು. ಸಂದೇಹ ಬಂದರೆ ಮೂರನೇ ತಿಂಗಳಲ್ಲೂ ಮಾಡಿಸಿ ತೊಂದರೆ ಕಂಡುಬಂದರೆ 6 ತಿಂಗಳಿನಿಂದ ಚಿಕಿತ್ಸೆ ನೀಡಿದರೆ ಸಾಮಾನ್ಯರಂತೆ ಬದುಕು ನಡೆಸಬಹುದು ಎಂದು ಅವರು ವಿವರಿಸಿದರು.
ಡಾ.ಮನೋಹರ್, ಡಾ.ಪ್ರವೀಣ್‌ಕುಮಾರ್, ಡಾ.ಎಂ.ಸಂದೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.