ADVERTISEMENT

ಹನಗೋಡು | ಮಳೆ ಆರ್ಭಟ: ಅಪಾರ ಪ್ರಮಾಣದ ಬೆಳೆ ನಷ್ಟ

ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ, ಮನೆ ಚಾವಣಿ ಸಂಪೂರ್ಣ ಹಾನಿ

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:32 IST
Last Updated 21 ಮೇ 2024, 15:32 IST
ಹನಗೋಡು ಹೋಬಳಿಯ ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮ ಎಂಬುವವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡ ಮಳೆಯಿಂದ ಕುಸಿದು ಬಿದ್ದಿರುವುದು
ಹನಗೋಡು ಹೋಬಳಿಯ ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮ ಎಂಬುವವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡ ಮಳೆಯಿಂದ ಕುಸಿದು ಬಿದ್ದಿರುವುದು   

ಹನಗೋಡು: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಳೆ ಆರ್ಭಟ ಮುಂದುವರಿದಿದೆ.

ಸೋಮವಾರ ರಾತ್ರಿ ಬಿದ್ದ ಭಾರಿ ಮಳೆಗೆ ಹನಗೋಡು ಹೋಬಳಿಯ ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮ ಎಂಬುವವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾ‌ರ್ ಅವರಿಗೆ ಸೇರಿದ ವಾಸದ ಮನೆ ಬಿದ್ದು ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕಿರಂಗೂರಿನ ಶಿವು ಎಂಬುವರ ಶುಂಠಿ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.

ADVERTISEMENT

ಬಿರುಗಾಳಿಗೆ ಹಾರಿ ಹೋದ ಮೇಲ್ಚಾವಣಿ: ಚಿಲ್ಕುಂದದಲ್ಲಿ ಬಿರುಗಾಳಿಗೆ ರಾಮಶೆಟ್ಟರ ಮನೆ ಚಾವಣಿ ಹಾಗೂ ಚಂದ್ರು ಅವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿದೆ. ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ, ಮತ್ತಿತರ ಪದಾರ್ಥಗಳು ಮಳೆನೀರಿನಲ್ಲಿ ತೋಯ್ದು ಹಾಳಾಗಿವೆ.

ಬಿ.ಆರ್ ಕಾವಲ್ ಬೋವಿ ಕಾಲೊನಿಯ ಮಾದೇವ ಬೋವಿ, ಕೂಡ್ಲೂರಿನ ಅಲ್ಪೋನ್ಸ್ಮೇರಿ, ಅತ್ತಿಗುಪ್ಪೆಯರಂಗಯ್ಯ ಅವರ ವಾಸದ ಮನೆಗಳ ಸಹ ಮಳೆಯಿಂದ ಹಾನಿಗೊಂಡಿವೆ.

ಜೋಳದ ಬಿತ್ತನೆ ನಾಶ: ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗುಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು, ಎರಡು ದಿನಗಳ ಹಿಂದಷ್ಟೇ ಬಿತ್ತನೆ ಮಾಡಿದ್ದ ನಟೇಶ್, ಶ್ರೀನಿವಾಸ, ಆನಂದ, ಕಲೀಂ ಮತ್ತಿತರ ರೈತರಿಗೆ ಸೇರಿದ ಮುಸುಕಿನ ಜೋಳ ಹಾಗೂ ರಸಗೊಬ್ಬರ ಸಹಿತ ನೀರುಪಾಲಾಗಿದೆ.

ಕೋಡಿ ಒಡೆದ ನಾಗಮಂಗಲ ಕೆಂಪಿ ಕೆರೆ: ನಾಗಮಂಗಲ ಗ್ರಾಮದ ಕೆಂಪಿ ಕೆರೆ ತುಂಬಿ ಕೋಡಿ ಒಡೆದು ಹೋಗಿ ಅಪಾರ ಪ್ರಮಾಣದ ನೀರು ಜಮೀನುಗಳಲ್ಲಿ ಹರಿದು ಬೆಳೆ ನಾಶವಾಗಿದೆ. ಅಲ್ಲದ ಅತ್ತಿಕುಪ್ಪೆ ಕೆರೆಯ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಜಮೀನಿನ ಮೇಲೆ ಹರಿದಿದೆ. ಕೆರೆ ಕೆಳ ಭಾಗದ ಅಡಕೆ, ತೆಂಗಿನತೋಟ, ಶುಂಠಿ, ತಂಬಾಕು ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆ ಜಮೀನು ಕೆರೆಗಳಂತೆ ಗೋಚರಿಸುತ್ತಿವೆ.

ಅಧಿಕಾರಿಗಳ ಭೇಟಿ: ಹನಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತ ರಾಜೇಅರಸ್, ಗ್ರಾಮ ಆಡಳಿತಾಧಿಕಾರಿ ಸುಮಂತ್, ಸುನೀಲ್ ಅಂತೋಣಿರಾಜ್, ಮಲ್ಲೇಶ್, ಶಿವಕುಮಾರ್ ಅವರು ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಕಚುವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹನಗೋಡು ಹೋಬಳಿಯ ಕಣಗಾಲು ಗ್ರಾಮದ ರೈತ ಮಲ್ಲೇಶ್ ರವರ ಜಮೀನಿನಲ್ಲಿ ತಂಬಾಕು ಗಿಡ ಮಳೆ ನೀರಿನಿಂದ ಜೋತು ಬಿದ್ದಿರುವುದು
ನಾಗಮಂಗಲ ಕೆಂಪಿ ಕೆರೆ ಕೋಡಿ ಒಡೆದಿರುವುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು
ಹನಗೋಡು ಹೋಬಳಿಯ ಕಿರಂಗೂರಿನ ಶಿವುರವರ ಶುಂಠಿ ಜಮೀನಿನಲ್ಲಿ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.