ADVERTISEMENT

KRSನಿಂದ 1.72 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ: ಉಕ್ಕಿ ಹರಿದ ನದಿಗಳು: ಆತಂಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:23 IST
Last Updated 31 ಜುಲೈ 2024, 16:23 IST
ಮೈಸೂರು–ನಂಜನಗೂಡು ಹೆದ್ದಾರಿಯಲ್ಲಿನ ಮಲ್ಲನಮೂಲೆ ಬಸವೇಶ್ವರ ಸ್ವಾಮಿ ದೇಗುಲವನ್ನು ಆವರಿಸಿದ ಕಪಿಲಾ ನದಿ ಪ್ರವಾಹ
ಮೈಸೂರು–ನಂಜನಗೂಡು ಹೆದ್ದಾರಿಯಲ್ಲಿನ ಮಲ್ಲನಮೂಲೆ ಬಸವೇಶ್ವರ ಸ್ವಾಮಿ ದೇಗುಲವನ್ನು ಆವರಿಸಿದ ಕಪಿಲಾ ನದಿ ಪ್ರವಾಹ   

ಮೈಸೂರು: ಕಾವೇರಿ ಹಾಗೂ ಕಪಿಲಾ ನದಿಗಳಲ್ಲಿ ಪ್ರವಾಹ ಇನ್ನಷ್ಟು ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ.

ಬುಧವಾರ ರಾತ್ರಿ ವೇಳೆಗೆ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 1.72 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿಬಿಡಲಾಗಿದೆ. ಇದರಿಂದ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೀರಿನ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ಕೇರಳದ ವಯನಾಡ್‌ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಸದ್ಯ 50 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದ್ದು, ಈ ಪ್ರಮಾಣವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನದಿ‍ಪಾತ್ರದ ಸೇತುವೆಗಳು ಈಗಾಗಲೇ ಮುಳುಗಿವೆ. ನುಗು ಜಲಾಶಯದಿಂದ 6,026 ಕ್ಯುಸೆಕ್ ಹಾಗೂ ತಾರಕ ಜಲಾಶಯದಿಂದ 743 ಕ್ಯುಸೆಕ್ ನೀರು ನದಿಗೆ ಹರಿದಿದೆ. ಹುಣಸೂರು ತಾಲ್ಲೂಕಿನ ಲಕ್ಷ್ಮಣತೀರ್ಥ ಪಾತ್ರದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ನದಿ ಅಂಚಿನ ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ADVERTISEMENT

10 ಪ್ರದೇಶಗಳ ಜನರ ಸ್ಥಳಾಂತರ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿನ 10ಕ್ಕೂ ಹೆಚ್ಚು ಗ್ರಾಮ, ಪ್ರದೇಶಗಳ ಜನರನ್ನು ಜಿಲ್ಲಾಡಳಿತವು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ತಿ.ನರಸೀಪುರದಲ್ಲಿ 3, ನಂಜನಗೂಡು ತಾಲ್ಲೂಕಿನ 6 ಕಡೆ, ಎಚ್.ಡಿ. ಕೋಟೆಯ ಒಂದು ಪ್ರದೇಶದ ಜನರು ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ.

ಕಾಳಜಿ ಕೇಂದ್ರದಲ್ಲಿ ಆಶ್ರಯ: ನಂಜನಗೂಡು, ತಿ.ನರಸೀಪುರ ಭಾಗದ 8 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಇಲ್ಲಿನ 134 ಕುಟುಂಬಗಳ 306 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ರವಾನಿಸಲಾಗಿದೆ. ನಂಜನಗೂಡು ತಾಲ್ಲೂಕಿನ ನಂಜನಗೂಡು ಪಟ್ಟಣ, ಹುಲ್ಲಹಳ್ಳಿ, ಬೊಕ್ಕಹಳ್ಳಿ, ಹೆಜ್ಜಿಗೆ ಹಾಗೂ ತಿ. ನರಸೀಪುರ ತಾಲ್ಲೂಕಿನ ಮಾದಾಪುರ, ಹೆಮ್ಮಿಗೆ, ಮಾಲಂಗಿ, ಕುಕ್ಕೂರುಗಳಲ್ಲಿ ಕಾಳಜಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಜಂಟಿ ಸಮೀಕ್ಷೆ: ನಂಜನಗೂಡು, ತಿ.ನರಸೀಪುರ ಭಾಗದಲ್ಲಿ ನದಿಗೆ ಹೊಂದಿಕೊಂಡಂತಿರುವ ಅಕ್ಕ ಪಕ್ಕದ ಜಮೀನುಗಳು ಪ್ರವಾಹದಿಂದ ಮುಳುಗಡೆಯಾಗಿವೆ. ಹೀಗಾಗಿ ಈ ಭಾಗದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹ ಕಡಿಮೆಯಾದ ನಂತರ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಡಳಿತವು ನಿರ್ಧರಿಸಿದೆ.

ಸೇತುವೆ ಮುಳುಗಡೆ: ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 13 ಸೇತುವೆಗಳು ಮುಳುಗಡೆಯಾಗಿವೆ. ತಲಕಾಡು– ತಿ. ನರಸೀಪುರ ಸೇತುವೆ ಸಂಪರ್ಕ ಕಲ್ಪಿಸುವ ಹೆಮ್ಮಿಗೆ ಸೇತುವೆ ಮುಳುಗಿದ್ದು, ಸಂಚಾರ ಬಂದ್‌ ಆಗಿದೆ. ಸೇತುವೆ ಬಳಿ ನದಿ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ನಂಜನಗೂಡು ತಾಲ್ಲೂಕಿನ ಸುತ್ತೂರು ಸೇತುವೆ ಸಹ ಮುಳುಗಡೆಯಾಗಿದೆ.

ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಬಳಿ ಮೈಸೂರು–ಊಟಿ ಹೆದ್ದಾರಿಯಲ್ಲಿ 4 ಅಡಿಯಷ್ಟು ನೀರು ನಿಂತಿದ್ದು, ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಮೈಸೂರಿನಿಂದ ನಂಜನಗೂಡಿಗೆ ಬರುವ ವಾಹನಗಳು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಂಪಿಸಿದ್ದನಹುಂಡಿ ಮಾರ್ಗವಾಗಿ ಹೆಜ್ಜಿಗೆ ಸೇತುವೆ ಮೂಲಕ ಸಾಗಬೇಕಿದೆ. ನಂಜನಗೂಡಿನಿಂದ ಮೈಸೂರಿಗೆ ತೆರಳುವ ವಾಹನಗಳು ಹೆಜ್ಜಿಗೆ ಸೇತುವೆ–ತಾಂಡವಪುರ ಮಾರ್ಗವಾಗಿ ಸಾಗಬೇಕಿದೆ.

ದಕ್ಷಿಣದ ಕಾಶಿ ಎಂದೇ ಹೆಸರಾದ ಶ್ರೀಕಂಠೇಶ್ವರನ ಸನ್ನಿಧಿಯನ್ನೂ ಪ್ರವಾಹದ ನೀರು ಆವರಿಸಿದೆ. ಸ್ನಾನಘಟ್ಟ, ಮುಡಿಕಟ್ಟೆ, ಹದಿನಾರು ಕಾಲು ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಗುಂಡ್ಲು ನದಿಯ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ.

ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿ ಬುಧವಾರ ಸುರಿದ ಮಳೆಯಲ್ಲಿ ವಾಹನಗಳು ಸಾಗಿದವು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ವಯನಾಡ್‌ಗೆ ತೆರಳಿದ ವೈದ್ಯರ ತಂಡ

ವಯನಾಡ್‌ನಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಡಳಿತವು ಅಗತ್ಯ ಔಷಧಗಳೊಂದಿಗೆ ತಜ್ಞ ವೈದ್ಯರ ತಂಡವನ್ನು ಬುಧವಾರ ವಯನಾಡ್‌ಗೆ ಕಳುಹಿಸಿಕೊಟ್ಟಿತು. 1 ಫಿಸಿಶಿಯನ್ 1 ಆರ್ಥೊ ಫಿಸಿಶಿಯನ್ ಒಬ್ಬರು ಸಾಮಾನ್ಯ ವೈದ್ಯ ಫಾರ್ಮಸಿ ಅಧಿಕಾರಿಗಳನ್ನು ಒಳಗೊಂಡಂತೆ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ಔಷಧಗಳನ್ನು ಒಳಗೊಂಡಿರುವ ಒಂದು ವಿಶೇಷ ವಾಹನವನ್ನು ಕಳುಹಿಸಲಾಗಿದೆ. ಗಡಿಭಾಗವಾದ ಎಚ್‌.ಡಿ. ಕೋಟೆಯಲ್ಲಿ ಐದು ಆಂಬುಲೆನ್ಸ್‌ಗಳನ್ನು ಸನ್ನದ್ಧವಾಗಿ ಇಟ್ಟುಕೊಳ್ಳಲಾಗಿದ್ದು ಕೇರಳದಿಂದ ಬರುವ ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯಕೀಯ ತಂಡವನ್ನೂ ಸಿದ್ಧಪಡಿಸಿ ಇಡಲಾಗಿದೆ. ಇದಲ್ಲದೇ ತುರ್ತು ಸಂದರ್ಭದಲ್ಲಿ ವಿಕೋಪಕ್ಕೆ ಒಳಗಾಗಿರುವ ಸ್ಥಳಕ್ಕೆ ತೆರಳಿ ಕಾರ್ಯನಿರ್ವಹಿಸಲು ಸ್ವಯಂ ಪ್ರೇರಿತವಾಗಿ 25 ವೈದ್ಯರು ಪಿಎಚ್‌ಸಿಒ ನರ್ಸ್‌ಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಡಿಎಚ್‌ಒ ಕುಮಾರಸ್ವಾಮಿ ಮಾಹಿತಿ ನೀಡಿದರು.

ವಯನಾಡ್‌ ದುರಂತ: ತಿ.ನರಸೀಪುರದ ಇಬ್ಬರು

ಸಾವು ವಯನಾಡ್ ಭೂಕುಸಿತದಲ್ಲಿ ತಿ. ನರಸೀಪುರ ಮೂಲದ ಶ್ರೇಯಾ ಹಾಗೂ ಶಿವಣ್ಣ (45) ಎಂಬ ಇಬ್ಬರು ಮೃತಪಟ್ಟಿದ್ದು ಉಳಿದ ಆರು ಮಂದಿ ನಾಪತ್ತೆ ಆಗಿದ್ದಾರೆ. ವಯನಾಡ್‌ನ ಹೆಪ್ಪಾಡಿ ಗ್ರಾಮ ಪಂಚಾಯಿತಿಯ ಕಾಳಜಿ ಕೇಂದ್ರದಲ್ಲಿ ಉಕ್ಕಳಗೆರೆ ಮೂಲದ 25 ಮಂದಿ ಆಸರೆ ಪಡೆದಿದ್ದಾರೆ. ಅವರೆಲ್ಲ ದಶಕಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಜೊತೆಗಿದ್ದ ಸಾವಿತ್ರಿ (52) ಗುರುಮಲ್ಲ (57) ಸವಿತಾ (44) ಸಿದ್ದರಾಜು (45) ದಿವ್ಯಾ (35) ಅಶ್ವಿನಿ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಅಲ್ಲಿನ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಕೇರಳದ ವಯನಾಡ್‌ನಲ್ಲಿ ಇವರಂತೆಯೇ ಮೈಸೂರಿನ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದು ಅವರನ್ನು ಗುರುತಿಸಿ ಕರೆತರಲು ಅಧಿಕಾರಿಗಳ ತಂಡವು ತೆರಳಿದೆ. ಅನೇಕರು ನಾಪತ್ತೆ ಆಗಿದ್ದಾರೆ. ಇನ್ನೂ ಅನೇಕ ಕುಟುಂಬಗಳು ಉದ್ಯೋಗ ಹರಸಿ ಪ್ರವಾಸಕ್ಕೆಂದು ಕೇರಳಕ್ಕೆ ತೆರಳಿದ್ದು ಅವರ ಪತ್ತೆಯೇ ಅಧಿಕಾರಿಗಳಿಗೆ ಸವಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.