ADVERTISEMENT

ಮೈಸೂರು | ಹಿಂಗಾರು ಚುರುಕು; ತಂಪಾದ ಇಳೆ

ಕಳೆದೆರಡು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲು

ಆರ್.ಜಿತೇಂದ್ರ
Published 22 ಅಕ್ಟೋಬರ್ 2024, 6:51 IST
Last Updated 22 ಅಕ್ಟೋಬರ್ 2024, 6:51 IST
ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿ ಸೋಮವಾರ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದ ಪರಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿ ಸೋಮವಾರ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದ ಪರಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ಜಿಲ್ಲೆಯಾದ್ಯಂತ ಹಿಂಗಾರು ಮಳೆ ಚುರುಕಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಧರೆಗೆ ತಂಪನ್ನೆರೆದಿದೆ. ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ವರವಾಗಿದೆ.

ಈ ವರ್ಷ ಮುಂಗಾರು ಫಲಪ್ರದವಾಗಿದ್ದರೂ ನಂತರದಲ್ಲಿ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಮಳೆಯ ಕೊರತೆ ಎದುರಿಸಿದ್ದವು. ಅಣೆಕಟ್ಟೆಗಳು ಭರ್ತಿಯಾದ ಕಾರಣಕ್ಕೆ ಕಾಲುವೆಗಳಲ್ಲಿ ನೀರು ಹರಿದಿದ್ದರೂ ಮಳೆಯಾಶ್ರಿತ ಜಮೀನಿನಲ್ಲಿನ ರಾಗಿ, ಹತ್ತಿ, ತಂಬಾಕು, ತೊಗರಿ–ಅವರೆ ಮೊದಲಾದ ದ್ವಿದಳ ಧಾನ್ಯಗಳ ಬೆಳೆಗಳು ಒಣಗುತ್ತಿದ್ದವು. ಇದೀಗ ಹಿಂಗಾರಿನ ವರ್ಷಧಾರೆ ಈ ಬೆಳೆಗಳಿಗೆ ಜೀವಧಾರೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ಕೊರತೆ: ಮುಂಗಾರು ಹಂಗಾಮಿನಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ 419 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 475 ಮಿ.ಮೀ.ನಷ್ಟು ವರ್ಷಧಾರೆಯಾಗಿದ್ದು, ವಾಡಿಕೆಗಿಂತ ಶೇ 14ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಜೂನ್‌ನಿಂದ ಆಗಸ್ಟ್‌ವರೆಗೆ ಉತ್ತಮವಾಗಿ ಮಳೆ ಬಿದ್ದಿದ್ದರೂ ಸೆಪ್ಟೆಂಬರ್‌ನಲ್ಲಿ ಮಾತ್ರ ಮಳೆಯ ತೀವ್ರ ಕೊರತೆ ಆಗಿತ್ತು. ಸೆಪ್ಟೆಂಬರ್‌ನಲ್ಲಿ 109 ಮಿ.ಮೀ. ವಾಡಿಕೆಗೆ ಪ್ರತಿಯಾಗಿ ಕೇವಲ 46 ಮಿ.ಮೀ. ಮಳೆ ಸುರಿದಿದ್ದು, ಶೇ 46ರಷ್ಟು ಕೊರತೆ ಆಗಿತ್ತು. ಇದರಿಂದಾಗಿ ರೈತರು ಆತಂಕದಲ್ಲಿದ್ದರು.

ADVERTISEMENT

ಅಕ್ಟೋಬರ್‌ನಲ್ಲಿಯೂ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ತಿ.ನರಸೀಪುರ, ನಂಜನಗೂಡು, ಸರಗೂರು ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿದ್ದರೆ, ಎಚ್‌.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಹಾಗೂ ಸಾಲಿಗ್ರಾಮ ತಾಲ್ಲೂಕುಗಳು ವಾಡಿಕೆಗಿಂತ ಕಡಿಮೆ ಮಳೆ ಪಡೆದಿವೆ.

ಭಾನುವಾರ ತಡರಾತ್ರಿಯಿಂದ ಸೋಮವಾರ ರಾತ್ರಿವರೆಗೆ ಆಗಾಗ್ಗೆ ಜೋರು ಮಳೆಯಾಗಿದ್ದು, ಹೊಲಗಳಲ್ಲಿ ನೀರು ನಿಂತಿದೆ. ಆದರೆ ಬೆಳೆನಷ್ಟದ ಕುರಿತು ಇನ್ನೂ ವರದಿಯಾಗಿಲ್ಲ.

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿ ಸೋಮವಾರ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದ ಪರಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಸೆಪ್ಟೆಂಬರ್ ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಕೃಷಿಗೆ ತೊಂದರೆ ಆಗಿತ್ತು. ಇದೀಗ ಹಿಂಗಾರು ಚುರುಕಾಗಿದ್ದು ಎಲ್ಲಿಯೂ ಬೆಳೆನಷ್ಟವಾದ ವರದಿ ಆಗಿಲ್ಲ
ಕೆ.ಎಚ್‌.ರವಿ ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.