ADVERTISEMENT

ಮೈಸೂರು | ಹೆಲ್ಮೆಟ್‌ ರಹಿತ ಪ್ರಯಾಣ: ಎರಡು ವಾರದಲ್ಲಿ 28 ಸಾವಿರ ಪ್ರಕರಣ

ದಂಡ ಪಾವತಿಸದಿದ್ದರೆ ಪ್ರಕರಣ ದಾಖಲಿಸಲು ಚಿಂತನೆ

ಶಿವಪ್ರಸಾದ್ ರೈ
Published 13 ಜೂನ್ 2024, 6:08 IST
Last Updated 13 ಜೂನ್ 2024, 6:08 IST
ಮೈಸೂರಿನ ಕೆ.ಆರ್.ವೃತ್ತದಲ್ಲಿ ಸಂಚಾರ ಪೊಲೀಸರು ತಪಾಸಣೆ ಮಾಡಿದರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಕೆ.ಆರ್.ವೃತ್ತದಲ್ಲಿ ಸಂಚಾರ ಪೊಲೀಸರು ತಪಾಸಣೆ ಮಾಡಿದರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈಚೆಗೆ ಇದೇ ಕಾರಣದಿಂದ ಅಪಘಾತವಾಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಇದಕ್ಕೆ ಪೂರಕವೆಂಬಂತೆ ಜೂನ್‌ 1ರಿಂದ 7ರವರೆಗೆ ಸಂಚಾರ ಪೊಲೀಸರು ನಡೆಸಿದ ತಪಾಸಣೆಯಲ್ಲಿ, ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸುತ್ತಿದ್ದ 28,703 ಸವಾರರು ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿದ್ದಾರೆ.

ಈಚೆಗೆ ಮಾನಸಗಂಗೋತ್ರಿಯ ಚದುರಂಗ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹೆಲ್ಮೆಟ್‌ ಧರಿಸದೇ ಇದ್ದ ಕಾರಣ ಟಿ.ಕೆ. ಬಡಾವಣೆಯಲ್ಲಿನ ಮಹಾವೀರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದರು. ವಿ.ವಿ. ಪುರಂ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳ ನಡುವೆ ಸಂಭವಿಸಿದ್ದ ಅಪಘಾತದಲ್ಲೂ ಇಬ್ಬರು ಸವಾರರು ಮೃತಪಟ್ಟಿದ್ದು, ಅವರೂ ಹೆಲ್ಮೆಟ್‌ ಧರಿಸಿರಲಿಲ್ಲ. ಈ ರೀತಿಯ ಘಟನೆಗಳ ನಡುವೆಯೂ ಇಷ್ಟೊಂದು ಸಂಖ್ಯೆಯ ಸವಾರರು ಹೆಲ್ಮೆಟ್‌ ಧರಿಸದಿರುವುದು ಆತಂಕ ಮೂಡಿಸುವಂತಿದೆ.

ಸಂಚಾರ ನಿಯಮ ಉಲ್ಲಂಘನೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ರಾತ್ರಿ ಪಾರ್ಟಿಗಳಲ್ಲಿ ಪಾಲ್ಗೊಂಡು ಪಾನಮತ್ತರಾಗಿ ವಾಹನ ಚಲಾಯಿಸುತ್ತಾರೆ ಎನ್ನುತ್ತಾರೆ ಸಂಚಾರ ಪೊಲೀಸರು. ದ್ವಿಚಕ್ರ ವಾಹನಗಳಲ್ಲಿ ‘ತ್ರಿಬಲ್‌ ರೈಡ್‌’ ತೆರಳುವುದು ಸರ್ವೇ ಸಾಮಾನ್ಯವಾಗುತ್ತಿದ್ದು, ಈ ಬಗ್ಗೆಯೂ 643 ಪ್ರಕರಣಗಳು ದಾಖಲಾಗಿವೆ.

ADVERTISEMENT

‘ಹೆಲ್ಮೆಟ್‌ ಇಲ್ಲದೆ ಸವಾರಿ ಮಾಡುತ್ತಿದ್ದವರ ವಿರುದ್ಧ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಈಚೆಗೆ ನಡೆಯುತ್ತಿರುವ ಅಪಘಾತಗಳಲ್ಲಿ ಹೆಲ್ಮೆಟ್‌ ಧರಿಸದ ಕಾರಣ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ದಂಡ ವಿಧಿಸುವುದೊಂದೇ ನಮ್ಮ ಉದ್ದೇಶವಲ್ಲ. ಜನರಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ದಂಡ ಹಾಕುತ್ತಿದ್ದೇವೆ. ಇವನ್ನು ಸವಾರರು ಅರ್ಥೈಸಿಕೊಂಡು, ತಮ್ಮ ಜೀವ ಕಾಪಾಡಲು ನಿಯಮ ಪಾಲಿಸಬೇಕು’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಸಲಹೆ ನೀಡಿದರು.

‘ದಂಡ ಪಾವತಿಸದಿದ್ದರೆ ಕ್ರಮ’
‘ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಮೂಲಕ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸವಾರರು ಅದನ್ನು ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದು ರಮೇಶ್‌ ಬಾನೋತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.