ADVERTISEMENT

ಹೇಮಾವತಿ, ಕೆಆರ್‌ಎಸ್‌: ಪ್ರವಾಹದ ಮುನ್ನೆಚ್ಚರಿಕೆ

ಕೊಡಗು, ಹಾಸನದಲ್ಲಿ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 20:30 IST
Last Updated 25 ಜುಲೈ 2024, 20:30 IST
ಸಕಲೇಶಪುರ ತಾಲ್ಲೂಕಿನಲ್ಲಿ ಗುರುವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಮೆಟ್ಟಿಲಿನವರೆಗೆ ಹೇಮಾವತಿ ನದಿ ನೀರು ನುಗ್ಗಿದೆ. ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್ 
ಸಕಲೇಶಪುರ ತಾಲ್ಲೂಕಿನಲ್ಲಿ ಗುರುವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಮೆಟ್ಟಿಲಿನವರೆಗೆ ಹೇಮಾವತಿ ನದಿ ನೀರು ನುಗ್ಗಿದೆ. ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್     

ಮೈಸೂರು: ಮೈಸೂರು ಭಾಗದ ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಮಳೆ–ಗಾಳಿ ಮುಂದುವರಿದಿದೆ.

ಮಂಡ್ಯದ ಕೆಆರ್‌ಎಸ್‌ ಮತ್ತು ಹಾಸನದ ಹೇಮಾವತಿ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಾವೇರಿ ಮತ್ತು ಹೇಮಾವತಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಕೊಡಗು ಜಿಲ್ಲೆಯ ಎಲ್ಲ ಶಾಲೆ– ಪಿಯು ಕಾಲೇಜುಗಳಿಗೆ, ಹಾಸನ ಜಿಲ್ಲೆಯ ಹಾಸನ, ಅರಕಲಗೂಡು, ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ ತಾಲ್ಲೂಕಿನ ಶಾಲೆಗಳಿಗೆ ಜುಲೈ 26ರಂದು ರಜೆ ಘೋಷಿಸಲಾಗಿದೆ.

ADVERTISEMENT

ಮಳೆ–ಗಾಳಿಯಿಂದ ವಿದ್ಯುತ್‌ ಕಂಬ, ಮರಗಳು ಉರುಳಿವೆ. ಕೆಲವೆಡೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಭತ್ತದ ಬೆಳೆಗೆ ಹಾನಿಯಾಗಿದೆ. ರಸ್ತೆಗೆ ಮಣ್ಣು ಕುಸಿದು, ಸೇತುವೆಗಳಲ್ಲಿ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿದೆ.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯವೂ ಭರ್ತಿಯಾಗಿದ್ದು, ಐದು ಕ್ರಸ್ಟ್‌ ಗೇಟ್‌ಗಳ ಮೂಲಕ 1ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗಿದೆ. ತಾಲ್ಲೂಕಿನ ಅರೇಹಳ್ಳಿಯಲ್ಲಿ ಕೆರೆ ಒಡೆದು, 12 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಸಕಲೇಶಪುರ ಹೊರವಲಯದ ಭತ್ತದ ಗದ್ದೆಗಳಲ್ಲಿ ನೀರು ಆವರಿಸಿದೆ. ಮಳಲಿ ಬಳಿ ಮಣ್ಣು ಕುಸಿದು ಐದು ಕುಟುಂಬಗಳು ಆತಂಕದಲ್ಲಿವೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು- ಕುಂಬ್ರಹಳ್ಳಿ ರಸ್ತೆಯ ಯಡಕೆರೆ ಗ್ರಾಮ ಸಮೀಪದ ಸೇತುವೆ, ಮಠಸಾಗರ–ಕೆಂಪೆನಾಲ್‌ ನಡುವಿನ ಸೇತುವೆ ಹಾಗೂ ಸಂಕಲಾಪುರ ಮಠದ ಸಮೀಪದ ಸೇತುವೆಯ ನೀರು ಹರಿಯುತ್ತಿದ್ದು, ಸಂಚಾರ ನಿರ್ಬಂಧಿಸಲಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ಮತ್ತು ಪೊನ್ನಂಪೇಟೆ ಭಾಗದ ಅಲ್ಲಲ್ಲಿ ರಸ್ತೆಗೆ ಮಣ್ಣು ಕುಸಿದಿದ್ದು, ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. 8 ಮನೆಗಳು ಕುಸಿದಿವೆ.

ಸೋಮವಾರಪೇಟೆ– ಸಕಲೇಶಪುರ ರಾಜ್ಯಹೆದ್ದಾರಿಯಲ್ಲಿ ಶಾಂತಳ್ಳಿಯ ಜೇಡಿಗುಂಡಿ ಬಳಿ ಮಣ್ಣು ಕುಸಿದಿದೆ. ನಗರಳ್ಳಿ– ಸೋಮವಾರಪೇಟೆ ಮಾರ್ಗದಲ್ಲಿ ಗುಡ್ಡದಿಂದ ಮಣ್ಣು ಜಾರುತ್ತಿರುವುದನ್ನು ಕಂಡು ರಾಜ್ಯ ಸಾರಿಗೆ ಬಸ್‌ ಅನ್ನು ಚಾಲಕ ತಕ್ಷಣ ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 21 ಸೆಂ.ಮೀ ಮಳೆ ಸುರಿದಿದೆ. ‍ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ 12, ಸೋಮವಾರಪೇಟೆಯಲ್ಲಿ 11, ಭಾಗಮಂಡಲ, ಕೊಡ್ಲಿಪೇಟೆಯಲ್ಲಿ ತಲಾ 10,  ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ 15.4 ಸೆಂ.ಮೀ., ಯಸಳೂರು 13.3, ಹಾನಬಾಳು 12.7, ಸಕಲೇಶಪುರ 10.4 ಸೆಂ.ಮೀ. ಮಳೆ ದಾಖಲಾಗಿದೆ.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದ ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲಾಯಿತು.
ಸಕಲೇಶಪುರ ತಾಲ್ಲೂಕಿನ ಹೆತ್ತೂರು- ಕುಂಬ್ರಹಳ್ಳಿ ಸಂಪರ್ಕ ರಸ್ತೆಯ ಯಡಕೆರೆ ಗ್ರಾಮದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರಜಾವಾಣಿ ಚಿತ್ರ/ಜಗದೀಶ್‌ ಆರ್‌.ಹೊರಟ್ಟಿ
ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದ್ದು ನೂರಾರು ಜನ ಈ ದೃಶ್ಯವನ್ನು ಕಣ್ತುಂಬಿಕೊಂಡರು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪ ರಾಜ್ಯಹೆದ್ದಾರಿಗೆ ಗುರುವಾರ ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯಿಂದ 70 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದ್ದು ಅಣೆಕಟ್ಟೆಯ ತಗ್ಗಿನಲ್ಲಿರುವ ಸಂಗೀತ ಕಾರಂಜಿ ಸೇತುವೆ ಜಲಾವೃತವಾಗಿದೆ

- ಕಾವೇರಿ ನದಿ ತಗ್ಗಿನ ಪ್ರದೇಶ ಜಲಾವೃತ

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ 70 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದ್ದು ಅಷ್ಟೇ ನೀರನ್ನು ಹರಿಸುತ್ತಿರುವುದರಿಂದ ಕಾವೇರಿ ನದಿಯ ತಗ್ಗಿನಲ್ಲಿರುವ ಪ್ರದೇಶಗಳು ಜಲಾವೃತವಾಗಿವೆ. ಬೃಂದಾವನದ ಸಂಗೀತ ಕಾರಂಜಿಯ ಸೇತುವೆ ರಂಗನತಿಟ್ಟು ಪಕ್ಷಿಧಾಮದ ಪಾದಚಾರಿ ಮಾರ್ಗ ದೋಣಿ ವಿಹಾರ ಕೇಂದ್ರ ವೀಕ್ಷಣಾ ಗೋಪುರ ರಸ್ತೆಯಲ್ಲಿ ನೀರು ತುಂಬಿದೆ. ಸಂಗೀತ ಕಾರಂಜಿ ಪ್ರದರ್ಶನ ಮತ್ತು ದೋಣಿ ವಿಹಾರವನ್ನು ಸ್ಥಗಿತಗೊಳಿಸಿ ಪಕ್ಷಿ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದೆ. ಪ್ರವಾಹ ಪರಿಸ್ಥಿತಿ ಉಲ್ಬಣಿಸಿದರೆ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ. ಪ್ರವಾಹದಿಂದ ನದಿ ತೀರದ ಕೃಷಿ ಜಮೀನು ಮತ್ತು ದೇವಾಲಯಗಳು ಮುಳುಗುವ ಸಂಭವವಿದೆ. ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.