ಮೈಸೂರು: ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ನಗರಕ್ಕೆ ಬರುವ ಪ್ರವಾಸಿಗರು, ಸಂದರ್ಶಕರು ಹಾಗೂ ಸಾರ್ವಜನಿಕರಿಗೆ ಇಲ್ಲಿನ ಪರಂಪರೆಯನ್ನು ತಿಳಿಸಿಕೊಡುವುದಕ್ಕಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಮೈಸೂರು ಸಾಂಸ್ಕೃತಿಕ ನಗರಿಯೊಂದಿಗೆ ಪಾರಂಪರಿಕ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿನ ಬಹಳಷ್ಟು ಕಟ್ಟಡಗಳು ಹಿಂದಿನ ವೈಭವ, ಪರಂಪರೆಯನ್ನು ಸಾರುತ್ತವೆ. ಪ್ರತಿಯೊಂದಕ್ಕೂ ತನ್ನದೇ ಆದ ವಿಶೇಷತೆ–ಹಿನ್ನೆಲೆ ಇದೆ. ಅವುಗಳ ಮಹತ್ವವೇನು ಎಂದು ಅರಿಯುವವರಿಗೆ ನೆರವಾಗುವ ಉದ್ದೇಶವನ್ನು ಇಲಾಖೆಯು ಹೊಂದಿದೆ. ಈ ಮೂಲಕ ‘ಪರಂಪರೆ ಸಂರಕ್ಷಣೆ ಪ್ರಜ್ಞೆ’ ಮೂಡಿಸುವುದಕ್ಕಾಗಿ ನಾಡಹಬ್ಬದ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಒಳಗೊಳಿಸಿಕೊಳ್ಳಲು:ದಸರೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಜನಸಾಮಾನ್ಯರು, ಕಲಾವಿದರು ಹಾಗೂ ಪ್ರವಾಸಿಗರನ್ನು ಒಳಗೊಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ನಗರದಲ್ಲಿ, 129 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅಧಿಸೂಚನೆ ಹೊರಡಿಸಲಾಗಿದೆ. ಇವುಗಳಲ್ಲಿ ಕೆಲವು ಪ್ರಮುಖ ಕಟ್ಟಡಗಳ ಐತಿಹ್ಯವನ್ನು ಪರಿಚಯಿಸಲು ಯೋಜಿಸಲಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಪುರಭವನ ಆವರಣದಿಂದ ಚಾಲನೆ ನೀಡಲಾಗುತ್ತದೆ. ದಸರೆಯ ಮುಂಜಾವಿಗೆ ಪರಂಪರೆಯ ಸ್ಪರ್ಶ ನೀಡಲಿದೆ.
‘ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ, ಶೈಲಿಯ ಮಹತ್ವದ ಬಗ್ಗೆ ಪರಿಚಯಿಸುವ ಉದ್ದೇಶವನ್ನು ಹೊಂದಲಾಗಿದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಡಾ.ಸಿ.ಎನ್.ಮಂಜುಳಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸೆ.26ರಿಂದ ಆರಂಭ:‘ಪಾರಂಪರಿಕ ನಡಿಗೆ, ಸೈಕಲ್ ಸವಾರಿ, ಟಾಂಗಾ ಸವಾರಿ ಹಾಗೂ ದಂಪತಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. 4–5 ಮಾರ್ಗಗಳಲ್ಲಿ ಸಂಚರಿಸಲಿವೆ. ದಸರಾ ಉದ್ಘಾಟನೆಯ ದಿನವಾದ ಸೆ.26ರಿಂದಲೇ ಇಲಾಖೆಯ ದಸರಾ ಚಟುವಟಿಕೆಗಳು ಆರಂಭಗೊಳ್ಳಲಿವೆ’ ಎನ್ನುತ್ತಾರೆ ಅವರು.
‘ಪುರಭವನದಿಂದ ಚಾಮರಾಜ ವೃತ್ತ, ಮೈಸೂರು ಅರಮನೆ, ಕೆ.ಆರ್. ವೃತ್ತ, ಜಗನ್ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮಹಾರಾಣಿ ಕಾಲೇಜು, ರೈಲು ನಿಲ್ದಾಣ ಹಾಗೂ ಕೆ.ಆರ್.ಆಸ್ಪತ್ರೆಯವರೆಗೆ ಸಂಚರಿಸುತ್ತಾ ಆ ಕಟ್ಟಡಗಳ ಕುರಿತು ತಿಳಿಸಿಕೊಡಲಾಗುತ್ತದೆ. ಸಾರ್ವಜನಿಕರು ಉಚಿತವಾಗಿ ಭಾಗವಹಿಸಬಹುದು. ನೋಂದಾಯಿಸಿಕೊಂಡು ಭಾಗವಹಿಸಿದವರಿಗೆ ಉಪಹಾರಾದ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಸೆ.26ರಂದು ಬೆಳಿಗ್ಗೆ 10ಕ್ಕೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರ ಇಲಾಖೆ ಆವರಣದಲ್ಲಿ ಸ್ಮಾರಕಗಳ ಸಂರಕ್ಷಣಾ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಸ್ಮಾರಕಗಳು ಸಂಕರಕ್ಷಣೆಗೆ ಮುನ್ನ ಹೇಗಿದ್ದವು, ನಂತರ ಹೇಗಾದವು ಹಾಗೂ ಸಂರಕ್ಷಣೆ ಕಾರ್ಯ ಕೈಗೊಂಡಿದ್ದು ಹೇಗೆ ಎಂಬುದನ್ನು ಬಿಂಬಿಸುವ ‘ಫ್ರೇಮ್’ಗಳು ಅಲ್ಲಿರಲಿವೆ. ಬಹಳ ಅಪರೂಪ ಎನಿಸುವಂತಹ ಹಾಗೂ ತುಂಬಾ ಶಿಥಿಲಾವಸ್ಥೆಯಲ್ಲಿದ್ದ ಸ್ಮಾರಕಗಳ ಚಿತ್ರಣವನ್ನು ಅಲ್ಲಿ ಕಟ್ಟಿಕೊಡಲಾಗುತ್ತದೆ’ ಎನ್ನುತ್ತಾರೆ ಅವರು.
ವಸ್ತುಪ್ರದರ್ಶನ ಆವರಣದಲ್ಲಿ ‘ಕಿನ್ನಾಳ ಕಲೆ’
‘ಕಾವಾ ಸಹಯೋಗದಲ್ಲಿ ಇಲಾಖೆಯ ಆವರಣದಲ್ಲಿ ‘ಕಿನ್ನಾಳ ಕಲೆ’ಯ ಕಾರ್ಯಾಗಾರ ನಡೆಸಲು ಯೋಜಿಸಲಾಗಿದೆ. ಮೂರು ದಿನಗಳ ಈ ಶಿಬಿರದಲ್ಲಿ 15 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಲೆಯ ರೂಪ ಕೊಡಲಿದ್ದಾರೆ. ಆ ಕಲಾಕೃತಿಗಳನ್ನು ಇಲಾಖೆಯ ಮ್ಯೂಸಿಯಂನಲ್ಲಿ ಪ್ರದರ್ಶರ್ಶಿಸಲಾಗುವುದು’ ಎನ್ನುತ್ತಾರೆ ಮಂಜುಳಾ.
‘ದಸರಾ ಮತ್ತು ಪಾರಂಪರಿಕ ತಾಣಗಳ ಬಗ್ಗೆ ಸರಾಸರಿ 20 ನಿಮಿಷಗಳ ಸಾಕ್ಷ್ಯಚಿತ್ರಗಳಿದ್ದು, ಅವುಗಳನ್ನು ಆಸಕ್ತರು ಬಂದು ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.
ಪಾಲ್ಗೊಳ್ಳುವುದು ಹೇಗೆ?
* ಸೆ.29ರಂದು ಬೆಳಿಗ್ಗೆ 7ಕ್ಕೆ: ಪುರಭವನದ ಆವರಣದಿಂದ ಪಾರಂಪರಿಕ ಸೈಕಲ್ ಸವಾರಿ (ಟ್ರಿನ್ ಟ್ರಿನ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 100 ಮಂದಿಗೆ ಅವಕಾಶವಿರಲಿದೆ.
* ಸೆ.30ರಂದು ಬೆಳಿಗ್ಗೆ 7ಕ್ಕೆ: ಪುರಭವನದ ಆವರಣದಿಂದ ದಂಪತಿಗಳಿಗೆ ಪಾರಂಪರಿಕ ಟಾಂಗಾ ಸವಾರಿಯನ್ನು ಹಮ್ಮಿಕೊಳ್ಳಲಾಗಿದೆ. ಪಾಲ್ಗೊಳ್ಳುವವರು ಪಾರಂಪರಿಕ ಉಡುಗೆಯಲ್ಲಿ ಬರಬೇಕು. 35ರಿಂದ 40 ದಂಪತಿ ಭಾಗವಹಿಸಬಹುದು.
* ಅ.1ರಂದು ಬೆಳಿಗ್ಗೆ 7ಕ್ಕೆ: ಪುರಭವನದ ಆವರಣದಿಂದ ದೇವರಾಜ ಮಾರುಕಟ್ಟೆ–ಕೆ.ಆರ್.ಆಸ್ಪತ್ರೆವರೆಗೆ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 100 ಮಂದಿಗೆ ಅವಕಾಶವಿದೆ.
ಆಸಕ್ತರು ಸೆ.21ರ ಒಳಗೆ ನೋಂದಾಯಿಸಬೇಕು. ದೂ.ಸಂಖ್ಯೆ:0821-2424671, 2424673, ಇ-ಮೇಲ್ commr_amh@yahoo.in ಮತ್ತು ddheritagemysore@gmail.com ಮೂಲಕವೂ ನೋಂದಾಯಿಸಿಕೊಳ್ಳಬಹುದು.
ಜಾಗೃತಿ ಮೂಡಿಸುವ ಉದ್ದೇಶ
ನಾಡಿನ ಐತಿಹ್ಯ ಬಿಂಬಿಸುವ ಪಾರಂಪರಿಕ ಸ್ಥಳಗಳು ಹಾಗೂ ಸ್ಮಾರಕಗಳ ಸಂರಕ್ಷಣೆಯ ಜಾಗೃತಿ ಮೂಡಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ.
–ಡಾ.ಸಿ.ಎನ್.ಮಂಜುಳಾ, ಉಪ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.