ADVERTISEMENT

ಮೈಸೂರು ವಿ.ವಿ ಘಟಿಕೋತ್ಸವ: ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ

ಅಂದು ರಾಜ್‌, ಇಂದು ಪುನೀತ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 16:50 IST
Last Updated 22 ಮಾರ್ಚ್ 2022, 16:50 IST
ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಮಂಗಳವಾರ ಜನಪದ ಕಲಾವಿದ ಎಂ.ಮಹದೇವಸ್ವಾಮಿ, ನಟ ಪುನೀತ್‌ ರಾಜ್‌ಕುಮಾರ್‌ (ಮರಣೋತ್ತರ) ಪರವಾಗಿ ಪತ್ನಿ ಅಶ್ವಿನಿ ಹಾಗೂ ವಿಜ್ಞಾನಿ ‌‌ಡಾ.ವಿ.ಕೆ.ಆತ್ರೆ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ‘ಗೌರವ ಡಾಕ್ಟರೇಟ್‌’ ಪ್ರದಾನ ಮಾಡಿದರು. ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ, ಕುಲಸಚಿವರಾದ ಪೊ.ಎ.ಪಿ.ಜ್ಞಾನಪ್ರಕಾಶ್‌ ಹಾಗೂ ಪ್ರೊ.ಆರ್‌.ಶಿವಪ್ಪ ಇದ್ದಾರೆ
ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಮಂಗಳವಾರ ಜನಪದ ಕಲಾವಿದ ಎಂ.ಮಹದೇವಸ್ವಾಮಿ, ನಟ ಪುನೀತ್‌ ರಾಜ್‌ಕುಮಾರ್‌ (ಮರಣೋತ್ತರ) ಪರವಾಗಿ ಪತ್ನಿ ಅಶ್ವಿನಿ ಹಾಗೂ ವಿಜ್ಞಾನಿ ‌‌ಡಾ.ವಿ.ಕೆ.ಆತ್ರೆ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ‘ಗೌರವ ಡಾಕ್ಟರೇಟ್‌’ ಪ್ರದಾನ ಮಾಡಿದರು. ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ, ಕುಲಸಚಿವರಾದ ಪೊ.ಎ.ಪಿ.ಜ್ಞಾನಪ್ರಕಾಶ್‌ ಹಾಗೂ ಪ್ರೊ.ಆರ್‌.ಶಿವಪ್ಪ ಇದ್ದಾರೆ   

ಮೈಸೂರು: ಕ್ರಾಫರ್ಡ್‌ ಭವನದಲ್ಲಿ ಮಂಗಳವಾರ ಬೆಳಿಗ್ಗೆ ಭಾವುಕ ವಾತಾವರಣ. ಮರಣೋತ್ತರವಾಗಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾದ ನಟ ಪುನೀತ್‌ ರಾಜ್‌ಕುಮಾರ್‌ ಹೆಸರು ಹೇಳುತ್ತಿದ್ದಂತೆ ಜೋರು ಕರತಾಡನ. ಎಲ್‌ಇಡಿ ಪರದೆ ಮೇಲೆ ಅವರ ಸಾಧನೆ ಅನಾವರಣಗೊಳ್ಳುತ್ತಿದ್ದಂತೆ ಹಲವರ ಕಂಗಳಲ್ಲಿ ನೀರು.

ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಪುನೀತ್‌ ಪರವಾಗಿ ಅವರ ಪತ್ನಿ ಅಶ್ವಿನಿ ಉಕ್ಕುವ ಭಾವನೆಗಳನ್ನು ಅದುಮಿಟ್ಟುಕೊಂಡು ಗೌರವ ಡಾಕ್ಟರೇಟ್‌ ಸ್ವೀಕರಿಸಿದರು. ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಪುನೀತ್‌ ಅವರ ನಟನೆ ಹಾಗೂ ಸಮಾಜ ಸೇವಾ ಕಾರ್ಯ ಶ್ಲಾಘಿಸಿದರು. ‘ಅವರ ನಿಸ್ವಾರ್ಥ ಸೇವೆಯು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ’ ಎಂದರು.

46 ವರ್ಷಗಳ ಹಿಂದೆ ನಟ ಡಾ.ರಾಜ್‌ಕುಮಾರ್‌ ಅವರಿಗೆ ಇದೇ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿತ್ತು. ಈಗ ಅವರ ಪುತ್ರ ಪುನೀತ್‌ ಅವರಿಗೆ ಒಲಿದಿದೆ. ಆ ಗೌರವ ಸ್ವೀಕರಿಸಿ ಖುಷಿಪಡಲು ಅವರೇ ಇಲ್ಲ. ಆದರೆ, ಅವರ ಅಭಿಮಾನಿಗಳು ಜೋರು ಕರತಾಡನದ ಮೂಲಕ ಸಂಭ್ರಮಿಸಿದರು. ತಮಗೆ ಬಂದಷ್ಟೇ ಖುಷಿಪಟ್ಟರು.

ADVERTISEMENT

ರಾಜ್‌ಗೂ 47, ಪುನೀತ್‌ಗೂ 47: ಅಶ್ವಿನಿ ಬದಲಿಗೆ ಘಟಿಕೋತ್ಸವ ವೇದಿಕೆ ಯಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌, ‘ಜೀವನ ಒಂದು ಚಕ್ರ. 1976ರಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸಿದಾಗ ಅಪ್ಪಾಜಿಗೆ 47 ವರ್ಷ. ಆಗ ಪುನೀತ್‌ 9 ತಿಂಗಳ ಮಗು‌. ಇದೀಗ ಆ ಗೌರವಕ್ಕೆ ಭಾಜನರಾಗಿರುವ ಪುನೀತ್‌ಗೂ 47 ವರ್ಷ’ ಎಂದರು.

‘ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ ತಮ್ಮನಿಂದಾಗಿ ನಾವು ಕೂಡ ಧನ್ಯರಾಗಿದ್ದೇವೆ. ವಿಶ್ವವಿದ್ಯಾಲಯ ದೇಗುಲವಿದ್ದಂತೆ, ಇಲ್ಲಿ ಆಸೀನರಾಗಿರುವ ಎಲ್ಲರೂ ದೇವರ ರೀತಿ ಕಾಣುತ್ತಿದ್ದೀರಿ. ವಿಶ್ವವಿದ್ಯಾಲಯವು ಡಾಕ್ಟರೇಟ್‌ ನೀಡಿ ನಮ್ಮ ಜವಾಬ್ದಾರಿ ಹೆಚ್ಚಿಸಿದೆ’ ಎಂದರು. ಪುನೀತ್‌ ಪುತ್ರಿ ವಂದಿತಾ, ರಾಘವೇಂದ್ರ ರಾಜ್‌ಕುಮಾರ್‌ ಪತ್ನಿ ಮಂಗಳಾ, ಇಬ್ಬರು ಪುತ್ರರು ಸಂಬಂಧಿಕರು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾದರು.

ವಿಜ್ಞಾನಿ ‌‌ಡಾ.ವಿ.ಕೆ.ಆತ್ರೆ ಹಾಗೂ ಜಾನಪದ ಕಲಾವಿದ ಎಂ.ಮಹದೇವ ಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಪುನೀತ್‌, ಪಾರ್ವತಮ್ಮ ಹೆಸರಲ್ಲಿ ಚಿನ್ನದ ಪದಕ
‘ಪಾರ್ವತಮ್ಮ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಬ್ಬರು ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಲಾ ಒಂದು ಚಿನ್ನದ ಪದಕ ನೀಡುವುದಾಗಿ ಅಶ್ವಿನಿ ಪುನೀತ್‌ ರಾಜ್‌‍ಕುಮಾರ್ ಘೋಷಿಸಿದ್ದಾರೆ’ ಎಂದು ಘಟಿಕೋತ್ಸವದ ನಿರೂಪಕ ಪ್ರೊ.ಸಿ.ನಾಗಣ್ಣ ಹೇಳಿದರು.

ಮುಂದಿನ ವರ್ಷದಿಂದ, ‘ಲಲಿತ ಕಲೆ’ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವವರಿಗೆ ಪುನೀತ್‌ ಪದಕ ಹಾಗೂ ‘ವ್ಯವಹಾರ ನಿರ್ವಹಣೆ’ ವಿಷಯದಲ್ಲಿ ಪಾರ್ವತಮ್ಮ ಪದಕ ಲಭಿಸಲಿದೆ.

*
ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತೆ ನೀಡಬೇಕು. ವಿಶ್ವದರ್ಜೆಯ ಸೌಲಭ್ಯ ಬೇಕಿದ್ದು, ಸರ್ಕಾರ ಅಥವಾ ಇತರ ಮೂಲಗಳಿಂದ ಹೆಚ್ಚಿನ ಹೂಡಿಕೆ ಮಾಡಬೇಕಿದೆ
-ಡಾ.ವಿ.ಕೆ.ಆತ್ರೆ, ವಿಜ್ಞಾನಿ ‌

*
ಹೊಟ್ಟೆಪಾಡಿಗಾಗಿ ಹಳ್ಳಿ ಹಳ್ಳಿ ತಿರುಗಿ ಕಥೆ ಹೇಳುತ್ತಿದ್ದೆ, ಹಾಡು ಹಾಡುತ್ತಿದ್ದೆ. ಈ ಕಥೆ, ಹಾಡು ನನಗೆ ಈ ಗೌರವ ತಂದುಕೊಟ್ಟಿವೆ
-ಎಂ.ಮಹದೇವಸ್ವಾಮಿ,ಜನಪದ ಕಲಾವಿದ

ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರಾಘವೇಂದ್ರ ರಾಜ್‌ಕುಮಾರ್‌, ಅವರ ಪತ್ನಿ ಮಂಗಳಾ, ಪುತ್ರರು, ಪುನೀತ್‌ ಪುತ್ರಿ ವಂದಿತಾ ಹಾಗೂ ಸಂಬಂಧಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.