ಮೈಸೂರು: ‘ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನ್ಯಾಯಯುತವಾದ ಹೋರಾಟ–ಬೇಡಿಕೆಗಳಿಗೆ ನನ್ನ ಸಹಕಾರ– ಬೆಂಬಲ ಸದಾ ಇರುತ್ತದೆ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ರಾಜ್ಯ ಅನುದಾನಿತ ಐಟಿಐ ನೌಕರರ ಸಂಘ ಮತ್ತು ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾ ಅನುದಾನಿತ ಐಟಿಐ ನೌಕರರ ಸಂಘ ಹಾಗೂ ಎಸ್.ಆರ್.ರವಿ ಅಭಿಮಾನಿಗಳು ಮತ್ತು ಗೆಳೆಯರ ಬಳಗದಿಂದ ಇಲ್ಲಿನ ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಐಟಿಐ ಕಲಿತವರು ಸ್ವಂತ ಕಾಲ ಮೇಲೆ ನಿಲ್ಲಬಹುದು. ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವ ಕೋರ್ಸ್ ಇದು. ಇಂತಹ ಸಂಸ್ಥೆಗಳನ್ನು ನಡೆಸುತ್ತಿರುವವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಿಂದಿನಿಂದಲೂ ಸಹಕಾರ ನೀಡಿಕೊಂಡು ಬಂದಿದ್ದೇನೆ. ಸಭಾಪತಿಯಾಗಿ, ಹಲವು ಸಂದರ್ಭಗಳಲ್ಲಿ ಶಾಸಕನಂತೆ ಮಾತನಾಡಲಾಗದು. ಆದರೆ, ಅನ್ಯಾಯವಾದಾಗ ಸಹಿಸುವುದಿಲ್ಲ’ ಎಂದರು.
ಖಾಸಗಿಯವರಿಗೆ ಸಾಥ್ ಕೊಡಿ:
‘ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಐಟಿಐಗಳಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಏಕೆಂದರೆ, ಸರ್ಕಾರಗಳ ನೀತಿಗಳು ಬದಲಾಗುತ್ತಿರುತ್ತವೆ. ಆದ್ದರಿಂದ, ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಗಟ್ಟಿಯಾಗಿರಬೇಕು’ ಎಂದು ತಿಳಿಸಿದರು.
‘ಹಿಂದೆ ಖಾಸಗಿ ಐಟಿಐಗಳಿಗೆ ಅನುದಾನ ಬರುತ್ತಿರಲಿಲ್ಲ. ನೌಕರರಿಗೆ ಉದ್ಯೋಗ ಭದ್ರತೆಯೇ ಇರಲಿಲ್ಲ. ಹೋರಾಟದಿಂದಾಗಿ ನೀವು ಕೆಲಸ ಉಳಿಸಿಕೊಂಡಿದ್ದೀರಿ. ಹೋರಾಟದ ಮನೋಭಾವವನ್ನು ಬಿಡಬಾರದು. ಅನುದಾನರಹಿತ ಐಟಿಐನವರಿಗೂ ನೀವು ಸಾಥ್ ಕೊಡಬೇಕು’ ಎಂದು ಕಿವಿಮಾತು ಹೇಳಿದರು.
‘ಹಳೆಯ ಪಿಂಚಣಿ ವ್ಯವಸ್ಥೆ(ಒಪಿಎಸ್) ಜಾರಿಗೆ ತರಲಾಗುವುದಿಲ್ಲ ಎಂದು ಮುಖ್ಯಮಂತ್ರಿಯೇ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಹೋರಾಟ ನಡೆಯುತ್ತಿಲ್ಲವಲ್ಲ?! ಒಪಿಎಸ್‌ನಿಂದ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಅನ್ಯಾಯ ಸರಿಪಡಿಸಲು ನಿಮ್ಮೊಂದಿಗೆ ಇರುತ್ತೇನೆ’ ಎಂದರು.
ಹೋರಾಟದ ಫಲವಾಗಿ:
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ‘ಹೋರಾಟದ ಫಲವಾಗಿ ನೀವು ಐಟಿಐಗಳಿಗೆ ಅನುದಾನ ಪಡೆದುಕೊಂಡಿದ್ದೀರಿ. ನೀವು ಪ್ರಬಲವಾಗಿ ನಮ್ಮ ಹಿಂದೆ ಇದ್ದ ಕಾರಣದಿಂದಾಗಿಯೇ ನಾವು ನಿಮ್ಮ ಕೆಲಸಗಳನ್ನು ಮಾಡಿಸಿಕೊಟ್ಟಿದ್ದೇವೆ. ಮುಂದೆಯೂ ನಿಮ್ಮ ಪರ ನಿಲ್ಲುತ್ತೇನೆ’ ಎಂದು ನೌಕರರಿಗೆ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ‘ಥಾಮಸ್ ಆಯೋಗದ ವರದಿ ಪ್ರಕಾರ, ಐಟಿಐಗಳಿಗೆ ಶೇ 100ರಷ್ಟು ಅನುದಾನ ಕೊಟ್ಟ ಮೇಲೆ ನೌಕರರಿಗೆ ಇತರ ಸೌಲಭ್ಯಗಳನ್ನೂ ಕೊಡಬೇಕು ಎಂದು ಒತ್ತಾಯಿಸಿದ್ದೇವೆ. ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ವ್ಯವಸ್ಥೆಗೆ ನಮ್ಮ ವಿರೋಧವಿದೆ. ಖಾಸಗಿ ಐಟಿಐಗಳು ಉಳಿಯಬೇಕೆಂದರೆ ವೇತನಾನುದಾನವೇ ಇರಬೇಕು’ ಎಂದು ಪ್ರತಿಪಾದಿಸಿದರು.
‘ರಾಜ್ಯದಲ್ಲಿ 52ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ’ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಐಟಿಐ ಶಿಕ್ಷಣ ಆರಂಭಿಸಬೇಕು’ ಎಂದರು.
2006ರ ನಂತರ ಅನುದಾನಕ್ಕೆ ಒಳಪಟ್ಟ ಐಟಿಐಗಳ ನೌಕರರು ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಸಭಾಪತಿಗೆ ಮನವಿ ಸಲ್ಲಿಸಿದರು.
ರಾಜ್ಯ ಅನುದಾನಿತ ಐಟಿಐ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ರವಿ ಅವರನ್ನು ಅಭಿನಂದಿಸಲಾಯಿತು.
ಉದ್ಯಮಿ ವಿ.ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.