ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಕಣ್ಣಿನ ಆಸ್ಪತ್ರೆಗಳು ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ.
ಕೆ.ಆರ್. ಆಸ್ಪತ್ರೆ, ಸುಶ್ರತಾ, ನೇತ್ರಧಾಮ, ಅನ್ನಪೂರ್ಣ, ಅಗರ್ವಾಲ್ಸ್, ಮಣಿಪಾಲ್ ಕಣ್ಣಿನ ಆಸ್ಪತ್ರೆಗಳಲ್ಲಿ ವೈದ್ಯರ ತಂಡ ಸಜ್ಜಾಗಿದೆ. ಹೆಚ್ಚುವರಿ ಔಷಧಿ ದಾಸ್ತಾನು ಮಾಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯು ಆಸ್ಪತ್ರೆಯ ಸಿದ್ಧತೆ ಬಗ್ಗೆ ಮೇಲ್ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದೆ.
35 ಹಾಸಿಗೆ ವ್ಯವಸ್ಥೆ: ‘ಕೆ.ಆರ್. ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ನಲ್ಲಿ 35 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಮಾಡಲೂ ಯೋಜನೆ ರೂಪಿಸಿದ್ದೇವೆ. ಚಿಕಿತ್ಸೆ ನೀಡಲು ವೈದ್ಯರ ತಂಡವೂ ಸಿದ್ಧವಿದ್ದು, ರೋಗಿಗಳಿಗೆ ತೊಂದರೆಯಾಗದಂತೆ ಮುತುವರ್ಜಿ ವಹಿಸಲಾಗುವುದು’ ಎಂದು ಆಸ್ಪತ್ರೆಯ ಮೇಲ್ವಿಚಾರಕಿ ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗುವ ಜತೆಗೆ ಸುಟ್ಟ ಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಪಟಾಕಿಯ ಜೋರಾದ ಶಬ್ದದಿಂದ ಶ್ರವಣ ಸಮಸ್ಯೆ ಕೂಡ ಉಂಟಾಗುತ್ತದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಉಸಿರಾಟದ (ಆಸ್ತಮಾ) ಹಾಗೂ ಚರ್ಮದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದು ಹೇಳಿದರು.
‘ಪಟಾಕಿಗಳಿಂದ ಹೊರಹೊಮ್ಮುವ ಹೊಗೆಯಲ್ಲಿ ಸೀಸದಂತಹ ಹಾನಿಕಾರಕ ಅಂಶಗಳು ಇರುತ್ತವೆ. ಇದು ಕಣ್ಣುಗಳಲ್ಲಿ ಅಲರ್ಜಿ ಉಂಟುಮಾಡುವ ಮೂಲಕ ಕಾರ್ನಿಯಾವನ್ನು ಹಾನಿಗೊಳಿಸುತ್ತದೆ. ಮಕ್ಕಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳ ದೃಷ್ಟಿ ಸಾಮರ್ಥ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ’ ಎಂದು ಮಾಹಿತಿ ನೀಡಿದರು.
‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದರು.
ನಿಶ್ಯಬ್ದ ವಲಯದಲ್ಲಿ ಪಟಾಕಿ ನಿಷೇಧ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗುರುತಿಸಿರುವ ನಿಶ್ಯಬ್ದ ವಲಯದಲ್ಲಿ ಪಟಾಕಿ ಸಿಡಿಸಬಾರದು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.
ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಕೆರೆ ಪ್ರದೇಶ, ಕಾರಂಜಿ ಕೆರೆ ಪ್ರದೇಶ, ಸಾರ್ವಜನಿಕ ಉದ್ಯಾನ, ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ, ನ್ಯಾಯಾಲಯ, ಧಾರ್ಮಿಕ ಸ್ಥಳಗಳ 100 ಮೀಟರ್ ಸುತ್ತಲಿನ ಪ್ರದೇಶವನ್ನು ಬುಧವಾರದಿಂದ ಶನಿವಾರ ಮಧ್ಯರಾತ್ರಿ 12ರವರೆಗೆ ನಿಶ್ಯಬ್ದ ವಲಯ ಎಂದು ಗುರುತಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ಭದ್ರತೆಗೂ ವ್ಯವಸ್ಥೆ ಮಾಡಿದ್ದೇವೆಸೀಮಾ ಲಾಟ್ಕರ್ ನಗರ ಪೊಲೀಸ್ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.