ADVERTISEMENT

ಮೈಸೂರು: ಗಗನಕ್ಕೇರಿದ ಮನೆಗಳ ‘ಬಾಡಿಗೆ’!

ಹೆಚ್ಚಾಗುತ್ತಲೇ ಇರುವ ಪ್ರಮಾಣ; ಕಡಿವಾಣವೇ ಇಲ್ಲದಂತಹ ಸ್ಥಿತಿ

ಎಂ.ಮಹೇಶ
Published 1 ಸೆಪ್ಟೆಂಬರ್ 2024, 6:47 IST
Last Updated 1 ಸೆಪ್ಟೆಂಬರ್ 2024, 6:47 IST
ಮೈಸೂರು ನಗರದ ಪಕ್ಷಿನೋಟ (ಸಂಗ್ರಹ ಚಿತ್ರ)
ಮೈಸೂರು ನಗರದ ಪಕ್ಷಿನೋಟ (ಸಂಗ್ರಹ ಚಿತ್ರ)   
‘ದುಡ್ಡಿದ್ರೆ ಲಲಿತಮಹಲ್‌, ಇಲ್ದಿದ್ರೆ ಒಂಟಿಕೊಪ್ಪಲ್’ ಎಂದು ಕೆಲವು ವರ್ಷಗಳ ಹಿಂದೆ,
ಸಂಗೀತ ನಿರ್ದೇಶಕ ಹಾಗೂ ಗೀತ ರಚನೆಕಾರ ಹಂಸಲೇಖ ಅವರು ಮೈಸೂರಿನ ಬಗ್ಗೆ ಹಿಂದೆ
ಬರೆದ ಹಾಡಿನ ಸಾಲು ಸುಪ್ರಸಿದ್ಧವಾಗಿತ್ತು. ಆಗ ಸನ್ನಿವೇಶವೂ ಹಾಗೇ ಇತ್ತು. ಆದರೆ, ಈಗ ಹಾಗಿಲ್ಲ. ಕೊಪ್ಪಲುಗಳಲ್ಲೂ ಬಾಡಿಗೆ ದರ ಹೆಚ್ಚಾಗಿದೆ. ಮಧ್ಯಮ ವರ್ಗದವರ ಪಾಲಿಗೆ ಮನೆಗಳು ದುಬಾರಿಯಾಗಿವೆ. ಉತ್ತಮ ಹವಾಗುಣ ಹಾಗೂ ಸೌಲಭ್ಯಗಳ ಕಾರಣದಿಂದಾಗಿ ‘ನಿವೃತ್ತರ ಸ್ವರ್ಗ’ ಎಂದೇ ಹೆಸರಾಗಿರುವ ಸಾಂಸ್ಕೃತಿಕ ನಗರಿಯು ಹಲವು ಕಾರಣಗಳಿಂದಾಗಿ ‘ದುಬಾರಿ’ಯಾಗಿದ್ದು, ‘ಹಣವಂತರಿಗಷ್ಟೇ ಮೈಸೂರು ಸುಂದರ’ ಎನ್ನುವಂತಾಗಿದೆ! ಈ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ
‘ಪ್ರಜಾವಾಣಿ’ಯು ಈ ಸರಣಿ ಆರಂಭಿಸಿದೆ.

ಮೈಸೂರು: ಅದು ದೂರದ ಹುಬ್ಬಳ್ಳಿಯ ಕುಟುಂಬ. ಮಗಳಿಗೆ ಇಲ್ಲಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದರಿಂದ ಸ್ಥಳಾಂತರಗೊಳ್ಳಲೆಂದು, ಸಮೀಪದ ಬಡಾವಣೆಗಳಲ್ಲಿ ಬಾಡಿಗೆ ಮನೆಗಳಿಗೆ ಹುಡುಕಾಡತೊಡಗಿದರು. 2–ಬಿಎಚ್‌ಕೆ (2 ಬೆಡ್‌ರೂಂ, ಹಾಲ್‌ ಹಾಗೂ ಕಿಚನ್) ₹10 ಸಾವಿರಕ್ಕೆ ಸಿಕ್ಕರೆ ಸಾಕೆಂದುಕೊಂಡಿದ್ದರು. ಆದರೆ, ಅಷ್ಟು ಮೊತ್ತಕ್ಕೆ ಬಾಡಿಗೆ ಮನೆ ಸಿಗಲಿಲ್ಲ. ‌ಮಾಲೀಕರು, ಸರಾಸರಿ ₹13 ಸಾವಿರದಿಂದ ₹18 ಸಾವಿರ ಬಾಡಿಗೆ ಕೇಳುತ್ತಿದ್ದರು. ಕೆಲವೆಡೆ ₹20 ಸಾವಿರ ಹಾಗೂ ₹25 ಸಾವಿರವನ್ನೂ ಕೇಳಿದರು. ಅಡ್ವಾನ್ಸ್‌ ಆಗಿ ಬಾಡಿಗೆಯ ಹತ್ತು ಪಟ್ಟು ಕೇಳುತ್ತಿದ್ದರು. ಇದೆಲ್ಲವನ್ನೂ ನೋಡಿ, ಹುಬ್ಬಳ್ಳಿಯ ಆ ಕುಟುಂಬ ದಂಗಾಗಿ ಹೋಯಿತು. ತಿಂಗಳಿಗೆ ₹15 ಸಾವಿರ ಬಾಡಿಗೆ, ₹1.50 ಲಕ್ಷ ಅಡ್ವಾನ್ಸ್‌ ಕೊಡುವುದು ಅನಿವಾರ್ಯವಾಯಿತು.

ಇದು ಮತ್ತೊಂದು ಕುಟುಂಬದ ಅನುಭವ. ಬೆಳಗಾವಿಯಿಂದ ಬಂದ ಕುಟುಂಬವೊಂದು ತಮ್ಮ ಕಚೇರಿಯಿಂದ ನಾಲ್ಕೂವರೆ ಕಿ.ಮೀ. ದೂರದಲ್ಲಿರುವ ರಾಘವೇಂದ್ರ ನಗರ ಬಡಾವಣೆಯಲ್ಲಿ 2 ಬಿಎಚ್‌ಕೆ ಮನೆಗೆ ₹13 ಸಾವಿರ ಬಾಡಿಗೆ ಕೊಡಬೇಕಾಯಿತು.

ಮತ್ತೊಂದು ಕುಟುಂಬದವರು ನಗರದಿಂದ ನಾಲ್ಕೂವರೆ ಕಿ.ಮೀ. ದೂರದಲ್ಲಿರುವ ಬಡಾವಣೆಯಲ್ಲಿ 2ನೇ ಮಹಡಿಯಲ್ಲಿರುವ ಮನೆಗೆ ₹13 ಸಾವಿರ ಬಾಡಿಗೆಗೆ ಒಪ್ಪಬೇಕಾಯಿತು. ಹತ್ತು ಪಟ್ಟು ಅಡ್ವಾನ್ಸ್‌ ಕೊಡಬೇಕಾಯಿತು. ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಹುಡುಕಾಡಿದ ಬಳಿಕ, ಬೇರೆ ದಾರಿಯೇ ಇಲ್ಲದೇ ದುಬಾರಿ ಬಾಡಿಗೆ ಕಟ್ಟಲೇಬೇಕಾಯಿತು.

ADVERTISEMENT

ಹೀಗೆ, ಹಲವು ಕುಟುಂಬಗಳು ಅನಿವಾರ್ಯಕ್ಕೆ ಸಿಲುಕಿ ‘ದುಬಾರಿ ಯಾದರೂ ಸರಿಯೇ ಮನೆ ಸಿಕ್ಕರೆ ಸಾಕು’ ಎಂಬಂತಹ ಸ್ಥಿತಿಯು ಮೈಸೂರಿನಲ್ಲಿ ನಿರ್ಮಾಣವಾಗಿದೆ. ಮನೆಗಳ ಬಾಡಿಗೆ ಸಾಕಷ್ಟು ಪ್ರಮಾಣ ದಲ್ಲಿ ಏರಿಕೆಯಾಗಿರುವುದು ಅಥವಾ ಏರಿಸಿರುವುದೇ ಇದಕ್ಕೆ ಕಾರಣ.

ಅಡ್ವಾನ್ಸ್‌ ಕೂಡ ಜಾಸ್ತಿಯೇ: ಏಳೆಂಟು ವರ್ಷಗಳ ಹಿಂದೆ ₹6 ಸಾವಿರದಿಂದ ₹7 ಸಾವಿರ ಇದ್ದ ಮನೆ ಬಾಡಿಗೆ ಈಗ ದುಪ್ಪಟ್ಟಾಗಿದೆ. ಕೆಲವೆಡೆ, ಅದಕ್ಕಿಂತಲೂ ಹೆಚ್ಚು. ಅಡ್ವಾನ್ಸ್‌ ಪ್ರಮಾಣವೂ ಗಗನಕ್ಕೇರಿದೆ. ಮಾಲೀಕರು ನಿಗದಿಪಡಿಸಿದ್ದೇ ಬಾಡಿಗೆ, ಕೇಳಿದ್ದೇ ಅಡ್ವಾನ್ಸ್‌ ಎಂಬಂತಹ ಸ್ಥಿತಿ. ಇದಕ್ಕೆ ಕಡಿವಾಣವೇ ಇಲ್ಲ.

ಕೆಲಸ, ಮಕ್ಕಳ ವಿದ್ಯಾಭ್ಯಾಸ ಮೊದಲಾದ ಕಾರಣಗಳಿಂದ ಬರುವವರು, ಸ್ವಂತ ಮನೆ ಇಲ್ಲದವರು, ಬಾಡಿಗೆ ಮನೆಗಳನ್ನೇ ಆಶ್ರಯಿಸಿರುವವರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ನಗರದ ಪ್ರಮುಖ ಬಡಾವಣೆಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಕೊಳ್ಳುವುದಕ್ಕೆ ಮಧ್ಯಮ ವರ್ಗದವರಿಂದ ಸಾಧ್ಯವೇ ಆಗದಂತಹ ಸ್ಥಿತಿ ಇದೆ. ದೊರೆತರೂ, ದುಡಿದದ್ದರಲ್ಲಿ ಬಹುತೇಕ ಪಾಲು ಅದಕ್ಕಾಗಿಯೇ ಹೋಗುತ್ತದೆ!

ನಗರದ ಹೊರವಲಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಖಾಸಗಿ ಬಡಾವಣೆ ಗಳಲ್ಲೂ ಬಾಡಿಗೆ ಗಗನಕ್ಕೇರಿದೆ. ಕೆಲವೆಡೆ ₹10 ಸಾವಿರಕ್ಕೂ 2 ಬಿಎಚ್‌ಕೆ ಮನೆಗಳು ಸಿಗುತ್ತವಾದರೂ ಅಲ್ಲಿ, ರಸ್ತೆ, ಚರಂಡಿ ಸೌಲಭ್ಯವಿ‌ರುವುದಿಲ್ಲ. ಪರಿಣಾಮ, ನಗರದ ಪ್ರಮುಖ ಬಡಾವಣೆಗಳಲ್ಲಿ ಬಾಡಿಗೆ ಪ್ರಮಾಣ ಹೆಚ್ಚಾಗುತ್ತಲೇ ಇದೆ. 11 ತಿಂಗಳಿಗೆ ಸರಾಸರಿ ಐದರಿಂದ ಆರು ಪರ್ಸೆಂಟ್‌ ಬಾಡಿಗೆಯನ್ನು ಹೆಚ್ಚಿಸಲಾಗುತ್ತಿದೆ! ಇದು ಕೂಡ ಬಡ ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ಹೊರೆಯಾಗಿದೆ.

ಅನಿವಾರ್ಯ: ‘ವಿಜಯನಗರ ಬಡಾವಣೆಯಲ್ಲಿ ಬಾಡಿಗೆಗೆ ಮನೆಗಳನ್ನು ಹುಡುಕಿ ಸಾಕಾಯಿತು. ₹13 ಸಾವಿರದಿಂದ ₹18 ಸಾವಿರ ಬಾಡಿಗೆ ಹೇಳುತ್ತಾರೆ. ಅಷ್ಟು ಭರಿಸುವ ಶಕ್ತಿ ಇಲ್ಲ. ಹೀಗಾಗಿ, ಕೊನೆಗೆ ₹13 ಸಾವಿರಕ್ಕೆ ಒಪ್ಪಿದೆವು. ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದೀರಿ ಎಂಬುದರ ಮೇಲೂ ಹೆಚ್ಚಿಗೆ ಕೊಡಬೇಕು ಎಂದು ಕೇಳಿದ್ದೂ ಉಂಟು. ನಮ್ಮ ಉತ್ತರ ಕರ್ನಾಟಕದಲ್ಲಿ ಹೀಗಿಲ್ಲ’ ಎಂದು ವಿಜಯನಗರ 1ನೇ ಹಂತಕ್ಕೆ ಈಚೆಗೆ ಸ್ಥಳಾಂತರಗೊಂಡಿರುವ ದಿವಾಕರ್ ಹೇಳಿದರು.

‘ಕಡಿಮೆ ಬಾಡಿಗೆಗೆ ಚೆನ್ನಾಗಿರುವ ಮನೆಗಳೇ ಸಿಗುತ್ತವೆ. ಆದರೆ, ಇಲ್ಲಿ ಎಲ್ಲವೂ ದುಬಾರಿ. ಹತ್ತು ಪಟ್ಟು ಅಡ್ವಾನ್ಸ್‌ ನಮ್ಮಂಥವರಿಗೆ ಹೊರೆಯೇ. ಹೀಗಾದರೆ ಮಧ್ಯಮ ವರ್ಗದವರು ಜೀವನ ಮಾಡುವುದು ಹೇಗೆ? ಅವೈಜ್ಞಾನಿಕವಾಗಿ ಬಾಡಿಗೆ ಹೆಚ್ಚಾಗುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಅಥವಾ ಸಂಬಂಧಿಸಿದವರು ಗಮನಹರಿಸಬೇಕು’ ಎಂಬುದು ಅವರ ಕೋರಿಕೆ.

ತೀರಾ ಚಿಕ್ಕ ರೂಂ, ಹಾಲ್ ಹಾಗೂ ಕಿಚನ್ ಇರುವ ಮನೆಗಳು, ಅದರಲ್ಲೂ ಹೊರವಲಯದಲ್ಲಿರುವವು ಸರಾಸರಿ ₹10 ಸಾವಿರಕ್ಕೆ ಬಾಡಿಗೆಗೆ ಸಿಗುತ್ತವೆ. ಅಲ್ಲಿಗೆ ಹೋಗಲು ಹಲವರಿಗೆ ಇಷ್ಟವಾಗುವುದಿಲ್ಲ. ಕಿಷ್ಕಿಂಧೆ ಯಂತಹ ರಸ್ತೆಗಳಿರುತ್ತವೆ. ಸ್ಕೂಟರ್‌ ನಿಲ್ಲಿಸುವುದಕ್ಕೂ ಜಾಗವಿರುವುದಿಲ್ಲ.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗ ಮನೆಗಳ ಖಾತೆ–ಕಂದಾಯದ ಪ್ರಮಾಣ ಜಾಸ್ತಿಯಾಗಿದೆ. ನಿರ್ವಹಣೆಯೂ ದುಬಾರಿಯಾಗಿದೆ. ಆದ್ದರಿಂದ ಬಾಡಿಗೆಯನ್ನು ಹೆಚ್ಚಿಗೆ ಕೇಳಲೇಬೇಕಾಗಿದೆ. ಆಸ್ತಿ ತೆರಿಗೆ ಮೊದಲಾದವು ಕಡಿಮೆಯಾದರೆ ನಾವೂ ಕಡಿಮೆ ಬಾಡಿಗೆ ತೆಗೆದುಕೊಳ್ಳ ಬಹುದು’ ಎಂಬುದು ಮಾಲೀಕರ ವಾದ.

‘ದುಡ್ಡಿದ್ರೆ ಲಲಿತಮಹಲ್‌, ಇಲ್ದಿದ್ರೆ ಒಂಟಿಕೊಪ್ಪಲ್’ ಎಂದು ಕೆಲವು ವರ್ಷಗಳ ಹಿಂದೆ, ಸಂಗೀತ ನಿರ್ದೇಶಕ ಹಾಗೂ ಗೀತ ರಚನೆಕಾರ ಹಂಸಲೇಖ ಅವರು ಮೈಸೂರಿನ ಬಗ್ಗೆ ಹಿಂದೆ ಬರೆದ ಹಾಡಿನ ಸಾಲು ಸುಪ್ರಸಿದ್ಧವಾಗಿತ್ತು. ಆಗ ಸನ್ನಿವೇಶವೂ ಹಾಗೇ ಇತ್ತು. ಆದರೆ, ಈಗ ಹಾಗಿಲ್ಲ. ಕೊಪ್ಪಲುಗಳಲ್ಲೂ ಬಾಡಿಗೆ ದರ ಹೆಚ್ಚಾಗಿದೆ. ಮಧ್ಯಮ ವರ್ಗದವರ ಪಾಲಿಗೆ ಮನೆಗಳು ದುಬಾರಿಯಾಗಿವೆ. ಉತ್ತಮ ಹವಾಗುಣ ಹಾಗೂ ಸೌಲಭ್ಯಗಳ ಕಾರಣದಿಂದಾಗಿ ‘ನಿವೃತ್ತರ ಸ್ವರ್ಗ’ ಎಂದೇ ಹೆಸರಾಗಿರುವ ಸಾಂಸ್ಕೃತಿಕ ನಗರಿಯು ಹಲವು ಕಾರಣಗಳಿಂದಾಗಿ ‘ದುಬಾರಿ’ಯಾಗಿದ್ದು, ‘ಹಣವಂತರಿಗಷ್ಟೇ ಮೈಸೂರು ಸುಂದರ’ ಎನ್ನುವಂತಾಗಿದೆ! ಈ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ‘ಪ್ರಜಾವಾಣಿ’ಯು ಈ ಸರಣಿ ಆರಂಭಿಸಿದೆ.

‘ವೆಜ್‌ ಒನ್ಲಿ’ ಎಂಬ ತೊಂದರೆ!

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಸಮಾನತೆಯ ಹಾಗೂ ಪ್ರಗತಿಪರ ಆಲೋಚನೆಗಳು ಮೊಳಕೆಯೊಡೆದ ನಗರದಲ್ಲೂ ಮನೆ ಬಾಡಿಗೆ ಕೊಡುವುದಕ್ಕೆ ಪರೋಕ್ಷವಾಗಿ ಜಾತಿ ತಿಳಿದುಕೊಳ್ಳುವ ಮನಸ್ಥಿತಿಯೂ ಮುಂದುವರಿದಿದೆ. ‘ವೆಜ್‌ ಒನ್ಲಿ’ ಎಂಬ ಫಲಕಗಳನ್ನು ಹಾಕುವ ಮೂಲಕ ಮಾಂಸಾಹಾರಿಗಳಿಗೆ ಮನೆಗಳನ್ನು ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೊಡುವುದಕ್ಕೆ ಮಾಲೀಕರು ಒಪ್ಪುತ್ತಿಲ್ಲ.

ಕೆಲವು ಬಡಾವಣೆಗಳಲ್ಲಿ ಮಾಂಸಾಹಾರಿಗಳಿಗೆ ಮನೆಯೇ ಸಿಗದಂತಹ ಪರಿಸ್ಥಿತಿ ಇದೆ! ಈ ‘ತಾರತಮ್ಯ’ ನಿವಾರಣೆಗೆ ಯಾರೂ ಕ್ರಮ ಕೈಗೊಂಡಿಲ್ಲ ಎಂಬುದೂ ಆತಂಕಕ್ಕೆ ಕಾರಣವಾಗಿದೆ.

ಖಾಲಿ ಮಾಡಿದರೂ...
‘ಮನೆಗಳನ್ನು ಖಾಲಿ ಮಾಡಿದಾಗ ಬಣ್ಣಕ್ಕೆಂದು ಇಂತಿಷ್ಟು ಸಾವಿರ (ಸರಾಸರಿ ₹20 ಸಾವಿರ) ಅಡ್ವಾನ್ಸ್‌ನಲ್ಲಿ ಮುರಿದುಕೊಳ್ಳುತ್ತಾರೆ. ಇತರ ನಿರ್ವಹಣೆಗೆಂದು ಇಂತಿಷ್ಟು ಸಾವಿರ ತೆಗೆದುಕೊಳ್ಳುತ್ತಾರೆ. ಮನೆಯ ಸಾಮಗ್ರಿಗಳನ್ನು ಸ್ಥಳಾಂತರಿಸಲೂ ಹಣ ಖರ್ಚಾಗುತ್ತದೆ. ಹೀಗಾಗಿ, ಬಾಡಿಗೆ ಮನೆಯಲ್ಲಿದ್ದರೂ ದುಬಾರಿಯೇ, ಖಾಲಿ ಮಾಡಿ ಮತ್ತೊಂದು ಮನೆಗೆ ಹೋಗಬೇಕೆಂದರೂ ದುಬಾರಿಯೇ’ ಎನ್ನುತ್ತಾರೆ ಬಾಡಿಗೆ ಮನೆಗಳನ್ನೇ ನಂಬಿಕೊಂಡಿರುವವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.