ಮೈಸೂರು: ಜಿಲ್ಲೆಯ ನೈರುತ್ಯ ಹಾಗೂ ದಕ್ಷಿಣದ ಗಡಿಯುದ್ದಕ್ಕೂ ಅರಣ್ಯ ಚಾಚಿದ್ದು, ಕಾಡಂಚಿನಲ್ಲಷ್ಟೇ ಇದ್ದ ವನ್ಯಜೀವಿ– ಮಾನವ ಸಂಘರ್ಷವು ಈ ವರ್ಷ ತಿ.ನರಸೀಪುರ ತಾಲ್ಲೂಕಿನ ನದಿ ಬಯಲಿಗೂ ವಿಸ್ತರಿಸಿತು. ಹೀಗಾಗಿಯೇ, ಅರಣ್ಯ ಇಲಾಖೆ ಚಿರತೆ ಕಾರ್ಯಪಡೆ ಆರಂಭಿಸಬೇಕಾಯಿತು. ‘ದಸರಾ ಅಂಬಾರಿ’ ಆನೆಗಳಾಗಿದ್ದ ಬಲರಾಮ– ಅರ್ಜುನರ ಸಾವು ನಾಡಿನ ಜನರನ್ನು ಭಾವುಕಗೊಳಿಸಿತು.
ನಗರದ ಕೆಎಸ್‌ಒಯು ಘಟಿಕೋತ್ಸವ ಸಭಾಂಗಣದಲ್ಲಿ ಏಪ್ರಿಲ್‌ನಲ್ಲಿ ನಡೆದ ಬಂಡೀಪುರ ಹುಲಿಯೋಜನೆ ಸುವರ್ಣ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಹುಲಿಗಣತಿಯನ್ನು ನಗರದಲ್ಲಿಯೇ ಬಿಡುಗಡೆ ಮಾಡಿದ್ದು ವಿಶೇಷ!
ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ವಿರೋಧಿಸಿ ವರ್ಷಾರಂಭದಿಂದಲೂ ‘ಚಾಮುಂಡಿ ಬೆಟ್ಟ ಉಳಿಸಿ ಸಮಿತಿ’ ಹೋರಾಟ ನಡೆಸಿತ್ತು. ಡಿಸೆಂಬರ್ ಅಂತ್ಯದಲ್ಲಿ ಇದೀಗ ಅದು ಮುನ್ನಲೆಗೆ ಬಂದಿದೆ. ಕುಕ್ಕರಹಳ್ಳಿ ಕೆರೆ ಹಾಗೂ ಪೂರ್ಣಯ್ಯ ನಾಲೆ ಉಳಿವಿಗೆ ಡಿಪಿಆರ್ ತಯಾರಿಗೆ ಜಿಲ್ಲಾಡಳಿತವು ಡ್ರೋನ್ ಸರ್ವೆಗೆ ಮುಂದಾಗಿದ್ದು, ಈ ವರ್ಷದ ಪರಿಸರದ ಸಾಧನೆ.
ಜ.20: ತಿ.ನರಸೀಪುರ: ತಾಲ್ಲೂಕಿನ ಕನ್ನನಾಯಕನಹಳ್ಳಿಯ ಮನೆ ಹಿಂಭಾಗದಲ್ಲಿ ಸೌದೆ ತರಲು ಹೋಗಿದ್ದ ಸಿದ್ದಮ್ಮ (60) ಚಿರತೆ ದಾಳಿಯಿಂದ ಮೃತಪಟ್ಟರು.
ಜ.22: ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಬಳ್ಳೆ ಹಾಡಿ ನಿವಾಸಿ ಮಂಜು (18) ಹುಲಿ ದಾಳಿಯಿಂದ ಮೃತಪಟ್ಟರು. ತಿ.ನರಸೀಪುರ ತಾಲ್ಲೂಕಿನ ಹೊರಳಹಳ್ಳಿಯಲ್ಲಿ ಚಿರತೆಯು ದಶಕಂಠ ಅವರ ಪುತ್ರ ಜಯಂತ್ (11) ಎಂಬುವರನ್ನು ಎಳೆದೊಯ್ದು ಕೊಂದಿತ್ತು.
ಫೆ.1: ಮೈಸೂರು ಅರಣ್ಯ ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ತಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ತಡೆಗೆ ‘ಚಿರತೆ ಕಾರ್ಯಪಡೆ’ (ಟಾಸ್ಕ್‌ಫೋರ್ಸ್) ರಚಿಸಿ ಸರ್ಕಾರವು ಆದೇಶ ಹೊರಡಿಸಿತು.
ಫೆ.2: ಎಚ್.ಡಿ.ಕೋಟೆ ತಾಲ್ಲೂಕಿನ ಅಗಸನ ಹುಂಡಿ ಗ್ರಾಮದಲ್ಲಿ ಬಾಳೆ ಗೊನೆ ಕತ್ತರಿಸುತ್ತಿದ್ದ ಕಾರ್ಮಿಕ, ಕೊತ್ತನಹಳ್ಳಿಯ ಮುನಿಸ್ವಾಮಿ ಎಂಬುವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು.
ಫೆ.28: ನಂಜನಗೂಡು ತಾಲ್ಲೂಕಿನ ಕೂಡ್ಲಾಪುರದ ಚಂದ್ರಶೇಖರ ಎಂಬುವವರ ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಸಿಲುಕಿದ ಎರಡು ವರ್ಷದ ಹೆಣ್ಣು ಚಿರತೆ ಮೃತಪಟ್ಟಿತು.
ಮಾರ್ಚ್ 4: ಸರಗೂರು ದಡದಹಳ್ಳಿ ಹಾಡಿಯ ಅರಣ್ಯ ವೀಕ್ಷಕ ಬೊಮ್ಮ (59) ಅವರನ್ನು ಹುಲಿ ಕೊಂದುಹಾಕಿತು.
ಮಾರ್ಚ್ 20: ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದ, ಒಂದು ವರ್ಷದ ಗಂಡು ಹುಲಿಮರಿ ಕಳೇಬರ ಪತ್ತೆಯಾಯಿತು.
ಏ.9: ಬಂಡೀಪುರ ಹುಲಿಯೋಜನೆಯ ಸುವರ್ಣ ಸಂಭ್ರಮವು ನಗರ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ 2022ರ ಹುಲಿಗಣತಿ ಬಿಡುಗಡೆ ಮಾಡಿದರು.
ಮೇ 26: ನಂಜನಗೂಡು ತಾಲ್ಲೂಕಿನ ಹಾದನೂರು ವಡೆಯನಪುರದಲ್ಲಿ ವಿಷಕಂಠ ಅವರು ಹುಲಿ ದಾಳಿಯಿಂದ ಗಾಯಗೊಂಡರು.
ಜೂನ್ 1: ಸರಗೂರು ತಾಲ್ಲೂಕಿನ ಹೀರೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ರವಿಕುಮಾರ್ (40) ಎಂಬುವರು ಮೃತಪಟ್ಟರು.
ಆ.5: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ಅರಸಿನಕೆರೆ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಜುಲೈ 21: ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿ ಬೆಟ್ಟದ ಬಳಿ ಹಳೆಬೀಡು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಶಿವಕುಮಾರ ಮತ್ತು ಸವಿತಾ ದಂಪತಿ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು
ಸೆ.4: ಎಚ್.ಡಿ.ಕೋಟೆ ತಾಲ್ಲೂಕಿನ ಕಲ್ಲಹಟ್ಟಿಯಲ್ಲಿ ಹುಲಿಯೊಂದು ಬಾಲಕ ಚರಣ್ ನಾಯಕ್ (8)ನನ್ನು ಎಳೆದೊಯ್ದು ಕೊಂದಿತ್ತು.
ಸೆ.15: ಸರಗೂರು ತಾಲ್ಲೂಕಿನ ಚನ್ನಗುಂಡಿ ಗ್ರಾಮದ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಗ್ರಾಮದ ರೈತ ಮಹೇಂದ್ರ(38) ಕಾಡಾನೆ ದಾಳಿಯಿಂದ ಮೃತಪಟ್ಟರು.
ಸೆ.18: ಸರಗೂರು ಲ್ಲೂಕಿನ ನಡಹಾಡಿ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ರೈತ ಚಿಕ್ಕೇಗೌಡ (60) ಮೇಲೆ ಕಾಡಾನೆ ಕೊಂದುಹಾಕಿತು.
ಸೆ.19: ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬಳಿ 8 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದರು.
ಸೆ.21: ಪಿರಿಯಾಪಟ್ಟಣದ ತಾಲ್ಲೂಕಿನ ಆನೆ ಚೌಕೂರು ಬಳಿ ಮುದ್ದನಹಳ್ಳಿಯ ರೈತ ರಮೇಶ್ ಎಂಬುವರ ಮೇಲೆ ಹುಲಿ ದಾಳಿಯಿಂದ ಗಾಯಗೊಂಡಿದ್ದರು.
ಅ.3: ಹುಣಸೂರು ತಾಲ್ಲೂಕಿನ ಹನಗೋಡು ಬಳಿ ಉಡುವೆಪುರದ ಗಣೇಶ್ (58) ಹುಲಿ ದಾಳಿಯಿಂದ ಮೃತಪಟ್ಟರು.
ನ.1: ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದ ಕುದುರೆ ಗುಂಡಿ ಹಿನ್ನೀರು ಪ್ರದೇಶದಲ್ಲಿ ಜಾನುವಾರು ಮೇಯಿಸುತ್ತಿದ್ದ, ಮಹದೇವನಗರದ ವೀರಭದ್ರ ಭೋವಿ (70) ಎಂಬುವರನ್ನು ಹುಲಿ ಗಾಯಗೊಳಿಸಿತು.
ನ.6: ಸರಗೂರು ತಾಲ್ಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯ ಕ್ವಾಟ್ರಸ್ ಬಳಿ ದನಗಾಹಿ, ಕಾಡಬೇಗೂರು ಗ್ರಾಮದ ನಿವಾಸಿ ಬಾಲಾಜಿ ನಾಯ್ಕ(52) ಹುಲಿ ದಾಳಿಯಿಂದ ಮೃತಪಟ್ಟರು.
ನ.24: ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ರತ್ನಮ್ಮ (49) ಅವರನ್ನು ಹುಲಿ ಕೊಂದಿತು. ಮೃತದೇಹವನ್ನು 3 ಕಿ.ಮೀ ದೂರ ಎಳೆದೊಯ್ದು ಅರೆಬರೆ ತಿಂದು ಹೋಗಿತ್ತು.
ನ.29: ನಂಜನಗೂಡು ತಾಲ್ಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಹುಲಿಗಳು ಕಾಣಿಸಿಕೊಂಡಿದ್ದವು. ತುಮಕೂರು ಮಾದರಿಯ ಬೋನುಗಳನ್ನು ಚಿಕ್ಕಕಾನ್ಯ, ದೊಡ್ಡಕಾನ್ಯ, ಸಿಂಧುವಳ್ಳಿ ಹಾಗೂ ಬ್ಯಾತಹಳ್ಳಿ ಗ್ರಾಮಗಳಲ್ಲಿ ಇರಿಸಿ ಕಾರ್ಯಾಚರಣೆ ನಡೆದಿತ್ತು.
ಡಿ.7: ಮೈಸೂರು ತಾಲ್ಲೂಕಿನ ಆಯರಹಳ್ಳಿ ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆಯು ರಕ್ಷಿಸಿತ್ತು. ಅದರಲ್ಲಿ ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯೂ ಇತ್ತು.
ಡಿ.17: ನಂಜನಗೂಡು ತಾಲ್ಲೂಕಿನ ಹದಿನಾರು ಕೆರೆಯಲ್ಲಿ ಏರ್‌ಗನ್ ಬಳಸಿ ಹಕ್ಕಿಗಳನ್ನು ಬೇಟೆಯಾಡುತ್ತಿದ್ದ ತಾಂಡವಪುರ ನಿವಾಸಿಗಳಾದ ಆಂಥೋಣಿ ಕ್ಸೇವಿಯರ್, ಎ.ರೋಹಿತ್ ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದರು. 7 ಹಕ್ಕಿಗಳು, ಕೃತ್ಯಕ್ಕೆ ಬಳಸಿದ್ದ ಒಂದು ಏರ್‌ಗನ್ ಹಾಗೂ ಸ್ಕೂಟರ್ ವಶಕ್ಕೆ ಪಡೆಯಲಾಗಿತ್ತು.
ಡಿ.19: ಮೈಸೂರಿನ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಚಿರತೆಯು ಸೆರೆಯಾಯಿತು.
ಡಿ.22: ಕುಕ್ಕರಹಳ್ಳಿ ಕೆರೆ ಹಾಗೂ ಅದಕ್ಕೆ ನೀರು ಪೂರೈಸುತ್ತಿದ್ದ ‘ಪಾರಂಪರಿಕ’ ಪೂರ್ಣಯ್ಯ ನಾಲೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಜಿಲ್ಲಾಡಳಿತದ ನಿರ್ದೇಶನದಂತೆ ನವದೆಹಲಿಯ ‘ಇನ್‌ಟ್ಯಾಕ್’ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ಸಂಸ್ಥೆಯು ಡ್ರೋನ್ ಸರ್ವೆ ನಡೆಸಿತು.
ಜ.10: ಸಣ್ಣ ನೀರಾವರಿ ಇಲಾಖೆಯು ಚಾಮುಂಡಿಬೆಟ್ಟದ ದೇವಿಕೆರೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಕ್ಕೆ ರಾಜವಂಶಸ್ಥ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ವಕೀಲರ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಫೆ.9: ‘ಬೆಟ್ಟದಲ್ಲಿ ರೋಪ್‌ವೇ ಯೋಜನೆಗೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಿದ್ದು ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು ಹಾಗೂ 2022–23ನೇ ಸಾಲಿನ ಬಜೆಟ್‌ನಲ್ಲಿ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಂತೆಯೇ ನಗರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು.
ಮಾರ್ಚ್ 26: ಬೆಟ್ಟವನ್ನು ತ್ಯಾಜ್ಯ ಮುಕ್ತಗೊಳಿಸಲು ಪಾಲಿಕೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಅಡಿ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಕ್ರಮವಹಿಸಲು ತಾಕೀತು ಮಾಡಿದ್ದರು.
ಸೆ.1: ಅರಣ್ಯ ಇಲಾಖೆಯು ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ₹ 500ರಿಂದ ₹ 10 ಸಾವಿರದವರೆಗೆ ದಂಡಾಸ್ತ್ರ ಪ್ರಯೋಗಿಸಿತು.
ಡಿ.23: ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ನಾವು ಸಿದ್ಧರಾಗಿದ್ದೇವೆ. ಆದರೆ ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರದಷ್ಟೆ’ ಎಂದಿದ್ದರಿಂದ ವಿರೋಧ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.