ಹುಣಸೂರು: ‘ಭತ್ತದ ಬೆಳೆಗೆ ಅಲ್ಲಲ್ಲಿ ಬೆಂಕಿ ರೋಗ ಮತ್ತು ತಂತಿ ಹುಳು ಬಾಧೆ ಕಾಣಿಸಿಕೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೆ ಒಳಗಾಗದೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಸಲಹೆ ನೀಡಿದರು.
ತಾಲ್ಲೂಕಿನ ಹನಗೋಡು ಲಕ್ಷ್ಮಣತೀರ್ಥ ಅಚ್ಚುಕಟ್ಟು ಪ್ರದೇಶದ ಕಾಳೇನಹಳ್ಳಿ ಹಾಗೂ ವಾರಂಚಿ ಬಯಲಿನಲ್ಲಿ ಭತ್ತಕ್ಕೆ ರೋಗ ಬಾಧೆ ಕಾಣಿಸಿಕೊಂಡಿದೆ. ರೈತರಾದ ಪಾಪಯ್ಯ, ದೇವಯ್ಯ, ರಾಮು ಹಾಗೂ ನಟೇಶ್ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಅಕ್ಕಪಕ್ಕದ ಪ್ರದೇಶಕ್ಕೂ ಹರಡುವ ಸಾಧ್ಯತೆ ಇದ್ದು, ರೈತರು ಕೃಷಿ ಇಲಾಖೆ ಸಲಹೆ ಪಡೆದು ಔಷಧೋಪಚಾರ ಮಾಡಬೇಕು’ ಎಂದು ತಿಳಿಸಿದರು.
‘ಈ ಸಾಲಿನಲ್ಲಿ ಮಳೆ ಕೊರತೆ ನಡುವೆಯೂ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು 7,450 ಹೆಕ್ಟೇರ್ ಭತ್ತ ನಾಟಿ ಕಾರ್ಯ ಮುಗಿಸಿದ್ದು, ನೀರಿನ ನಿರೀಕ್ಷೆಯಲ್ಲಿದ್ದಾರೆ. ಕಡಿಮೆ ನೀರಿನಿಂದಾಗಿ ಈ ಎರಡೂ ರೋಗ ಏಕಕಾಲದಲ್ಲಿ ರೈತರನ್ನು ಕಾಡಿದೆ. ರೈತರು ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸಬೇಕು’ ಎಂದರು.
‘ಮಳೆ ಕೊರತೆ ಹಾಗೂ ನಾಲಾ ನೀರಿನ ಹರಿವು ಕ್ಷೀಣಿಸಿದ್ದು, ಭತ್ತಕ್ಕೆ ರೋಗ ಕಾಣಿಸಿಕೊಂಡಿದೆ. ಸರ್ಕಾರ ಮುಂಚಿತವಾಗಿಯೇ ಬರ ಘೋಷಿಸಿದ್ದರೆ ಈ ಸಾಲಿನಲ್ಲಿ ಭತ್ತ ಬೇಸಾಯಕ್ಕೆ ಮುಂದಾಗುತ್ತಿರಲಿಲ್ಲ’ ಎಂದು ರೈತ ಪಾಪಯ್ಯ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.