ಹುಣಸೂರು: ‘ತಾಲ್ಲೂಕಿನ 677 ಮಕ್ಕಳಿಗೆ ವಿವಿಧ ಹಂತಗಳ ಲಸಿಕೆ ನೀಡಬೇಕಿದೆ’ ಎಂದು ಸಂಚಾರ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಇಂದ್ರಧನುಷ್ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ಸೆ.11ರಿಂದ 17ರವರೆಗೆ ಇಂದ್ರಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲ್ಲೂಕಿನಾದ್ಯಂತ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕೈಗೊಂಡ ಸಮೀಕ್ಷಾ ಕಾರ್ಯದಲ್ಲಿ 1 ವರ್ಷದೊಳಗಿನ 534 ಮಕ್ಕಳು ಹಾಗೂ 1ರಿಂದ 2 ವರ್ಷದ 143 ಮಕ್ಕಳು ವಿವಿಧ ಹಂತಗಳ ಲಸಿಕೆ ಪಡೆಯಬೇಕಿದೆ. ಎಂ.ಎಂ.ಆರ್. ಲಸಿಕೆ ಮೊದಲ ಡೋಸ್ 9 ತಿಂಗಳೊಳಗಿನ 120 ಮಕ್ಕಳಿಗೂ, ಎರಡನೇ ಡೋಸ್ ಒಂದೂವರೆ ವರ್ಷದೊಳಗಿನ 137 ಮಕ್ಕಳಿಗೆ ನೀಡಬೇಕಾಗಿದೆ’ ಎಂದರು.
‘103 ಗರ್ಭಿಣಿಯರಿಗೆ ವಿವಿಧ ಹಂತಗಳ ಲಸಿಕೆ ಹಾಕಬೇಕಿದ್ದು, ಒಟ್ಟು 85 ಲಸಿಕಾ ಅಭಿಯಾನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಮುಖ್ಯಸ್ಥರು ಈ ಅಭಿಯಾನದಲ್ಲಿ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಗ್ರೇಡ್– 2 ತಹಶೀಲ್ದಾರ್ ನರಸಿಂಹಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ನಗರಸಭೆ ಆರೋಗ್ಯ ನಿರೀಕ್ಷಕ ಸತೀಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಭೋಜರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ, ಹೇಮಂತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.