ADVERTISEMENT

ಹುಣಸೂರು: ಗಜಗಾತ್ರದ ‘ತೈವಾನ್ ಸೀಬೆ’ ಬೆಳೆದ ಬೀಜಗನಹಳ್ಳಿಯ ರೈತ ನಾಗರಾಜ್‌

ಎಚ್.ಎಸ್.ಸಚ್ಚಿತ್
Published 26 ಆಗಸ್ಟ್ 2021, 5:13 IST
Last Updated 26 ಆಗಸ್ಟ್ 2021, 5:13 IST
ನಾಗರಾಜ್‌ ಬೆಳೆದಿರುವ ‘ತೈವಾನ್ ಪಿಂಕ್ ಸೀಬೆ’
ನಾಗರಾಜ್‌ ಬೆಳೆದಿರುವ ‘ತೈವಾನ್ ಪಿಂಕ್ ಸೀಬೆ’   

ಹುಣಸೂರು: ತೋಟಗಾರಿಕೆ ಬೇಸಾಯ ತಾಲ್ಲೂಕಿನ ಯುವ ರೈತರನ್ನು ಆಕರ್ಷಿಸುತ್ತಿದೆ. ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆದು ಯಶಸ್ಸು ಕಾಣುತ್ತಿ ದ್ದಾರೆ. ಬೀಜಗನಹಳ್ಳಿಯ ನಾಗರಾಜ್ ಅವರು ‘ತೈವಾನ್ ಪಿಂಕ್ ಸೀಬೆ’ (ಪೇರಲೆ) ಬೆಳೆದು ಯಶಸ್ಸು ಕಂಡಿದ್ದಾರೆ.

ಶಿಕ್ಷಕರಾದ ನಾಗರಾಜ್‌ ಹಾಗೂ ಪೂರ್ಣಿಮಾ ದಂಪತಿಯು ಒಂದು ಎಕರೆ ಪ್ರದೇಶದಲ್ಲಿ ಸೀಬೆ ಬೆಳೆದಿದ್ದಾರೆ. ಗಿಡಗಳು ಗಜಗಾತ್ರದ ಸೀಬೆ ಹಣ್ಣನ್ನು ಬಿಡಲಾರಂಭಿಸಿವೆ.

ಕೊರೊನಾ ಸಂದರ್ಭದಲ್ಲಿ ಕೃಷಿಗೆ ಒಲವು ತೋರಿಸಿದ್ದ ಅವರು, ಅರೆ ಮಲೆನಾಡು ಪ್ರದೇಶಕ್ಕೆ ಹೊಂದಿಕೊಳ್ಳುವ ಸೀಬೆ ಬೆಳೆಯಲು ನಿರ್ಧರಿಸಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ದಂತೆ ಸೀಬೆ ಬೆಳೆದಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರದ ನರ್ಸರಿ ಯೊಂದರಲ್ಲಿ ‘ತೈವಾನ್ ಪಿಂಕ್’ ಜಾತಿಗೆ ಸೇರಿದ 660 ಸೀಬೆ ಗಿಡಗಳನ್ನು ತಲಾ ₹70ರಂತೆ ಖರೀದಿಸಿದ್ದಾರೆ. 8X8 ಅಗಲ ಮತ್ತು ಉದ್ದಕ್ಕೆ 1½ ಅಡಿ ಆಳದ ಗುಂಡಿ ತೋಡಿ ಎಲೆಗೊಬ್ಬರ, ಸಾವಯವ ಗೊಬ್ಬರ ತುಂಬಿಸಿ, ಅದು ಕರಗಿದ ಬಳಿಕ ಸೀಬೆ ಗಿಡಗಳನ್ನು ನೆಟ್ಟು ಹನಿ ನೀರಾವರಿ ಮೂಲಕ ಪೋಷಣೆ ಮಾಡುತ್ತಿದ್ದಾರೆ.

‘ತೈವಾನ್ ಪಿಂಕ್ ಸೀಬೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸಸಿ ನೆಟ್ಟ 6 ತಿಂಗಳಿಗೆ ಸೀಬೆ ಫಸಲು ಕಟಾವಿಗೆ ಬಂದಿದೆ. ನೆಲದ ಮೇಲೆ ಮಲಗಿರುವ ಭಾರಿ ಗಾತ್ರದ ಸೀಬೆ ಕಣ್ತುಂಬಿಕೊಳ್ಳಲು ಬಲು ಖುಷಿ ಯಾಗುತ್ತಿದೆ. ಮೊದಲ ಕಟಾವಿನಲ್ಲಿ 1 ಕ್ವಿಂಟಾಲ್ ಹಣ್ಣು ಸಿಕ್ಕಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದೇವೆ’ ಎಂದು ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರ್ವಹಣೆ: ‘ಎಕರೆ ಪ್ರದೇಶದಲ್ಲಿ ಸೀಬೆ ಬೆಳೆಯಲು ಒಟ್ಟು ₹3 ಲಕ್ಷ ವೆಚ್ಚ ಮಾಡಿದ್ದೇನೆ. ಇದಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ. 15 ದಿನಗಳಿಗೊಮ್ಮೆ ಎರಡು ಬಾರಿ 3 ಲೀಟರ್ ನೀರು ನೀಡಬೇಕು. ಸಸಿಗೆ ಹನಿ ನೀರಾವರಿ ಮೂಲಕ ಸಾವಯವ ದ್ರವಗೊಬ್ಬರ ನೀಡುತ್ತಿದ್ದೇನೆ’ ಎಂದರು.

‘ಸಸಿ ನೆಟ್ಟ 4 ತಿಂಗಳಿಂದಲೇ ಕಾಯಿ ಕಚ್ಚಲು ಆರಂಭವಾಗುತ್ತದೆ. 6 ತಿಂಗಳವರೆಗೆ ಕಾಯಿ ತೆಗೆದು ನಂತರ, ಸಸಿಗೆ 5ರಿಂದ 10 ಕಾಯಿಗಳನ್ನು ಮಾತ್ರ ಬಿಡಬೇಕು. ವರ್ಷದ ಬಳಿಕ 10ರಿಂದ 15 ಕಾಯಿಗಳನ್ನು ಗಿಡದಲ್ಲೇ ಬಿಟ್ಟು ಉಳಿದ ಕಾಯಿಗಳನ್ನು ತೆಗೆಯುವುದರಿಂದ ಸಸಿ ಬೆಳವಣಿಗೆಗೆ ಸಹಕಾರಿ ಆಗಲಿದೆ. 3ನೇ ವರ್ಷದಿಂದ ಹೇರಳವಾಗಿ ಇಳುವರಿ ಸಿಗಲಿದೆ. ಒಂದು ಗಿಡದಿಂದ ವರ್ಷಕ್ಕೆ 4 ಬಾರಿ ಕಟಾವು ಮಾಡಬಹುದು. 6 ವರ್ಷದ ಬಳಿಕ ವಾರ್ಷಿಕ 1.5 ಟನ್‌ನಿಂದ 2 ಟನ್ ಇಳುವರಿ ಪಡೆಯ ಬಹುದು’ ಎಂದರು.

‘ಸಣ್ಣ ಹಿಡುವಳಿದಾರರೂ ತೋಟಗಾರಿಕೆ ಕೃಷಿ ಮೂಲಕ ಆದಾಯ ಗಳಿಸಬಹುದು ಎಂಬುದನ್ನು ನಾಗರಾಜ್ ತೋರಿಸಿಕೊಟ್ಟಿದ್ದಾರೆ’ ಎಂದು ಹೊಸಕೋಟೆ ಕೃಷಿಕ ಪುರುಷೋತ್ತಮ್ ತಿಳಿಸಿದರು.

‘ಒಂದು ಕೆ.ಜಿ ತೂಗುವ ಸೀಬೆ’

‘ತೈವಾನ್ ಪಿಂಕ್ ಸೀಬೆ ತಳಿಯ ಕಾಯಿ ಕನಿಷ್ಠ 800 ಗ್ರಾಂ.ನಿಂದ 1 ಕೆ.ಜಿ. ತೂಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹60ರಿಂದ ₹70 ದರವಿದ್ದು, ವಾರ್ಷಿಕ ₹4 ಲಕ್ಷ ಆದಾಯ ಗಳಿಸಬಹುದು’ ಎಂದು ನಾಗರಾಜ್ ತಿಳಿಸಿದರು.

ನಾಗರಾಜ್‌ ಮೊ.ಸಂ. 73494 14105.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.