ಮೈಸೂರು: ‘ಮನುವಾದಿಗಳು, ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗುವುದಿಲ್ಲ. ಬಗ್ಗುವುದಿಲ್ಲ, ಜಗ್ಗುವುದೂ ಇಲ್ಲ. ಎಲ್ಲವನ್ನೂ ನೋಡುತ್ತಾ ಮನೆಯಲ್ಲಿ ಕೈಕಟ್ಟಿ ಕೂರುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ವಿರೋಧಿಸಿ ಹಾಗೂ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ– ಜೆಡಿಎಸ್ ಜನತಂತ್ರ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕೆಪಿಸಿಸಿಯಿಂದ ಶುಕ್ರವಾರ ಆಯೋಜಿಸಿದ್ದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಅವರು ಅಬ್ಬರದ ಭಾಷಣ ಮಾಡಿದರು.
‘ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿದ್ದೇನೆ, ಅವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರವನ್ನು ವಿರೋಧ ಪಕ್ಷದವರು ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ’ ಎಂದರು.
‘ಬಿಜೆಪಿ ಹಾಗೂ ಜೆಡಿಎಸ್‌ನವರು ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ಜಗ್ಗುವುದಿಲ್ಲ’ ಎಂದು ಹೇಳಿದರು.
ಜಾತಿವಾದಿಗಳು ಸಹಿಸಲ್ಲ:
‘ಶೋಷಿತರು ಅಧಿಕಾರ ನಡೆಸುವುದನ್ನು ಮನುವಾದಿಗಳು, ಜಾತಿವಾದಿಗಳು ಎಂದಿಗೂ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ದೇವರಾಜ ಅರಸು, ಎಸ್.ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ’ ಎಂದು ದೂರಿದರು.
‘ಜೆಡಿಎಸ್‌ನ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಂಡವರಲ್ಲ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ನಡೆಸಬೇಕು ಎಂದು ದೇವೇಗೌಡರು ಹೇಳಿದ್ದರು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೆ. 2ನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ. ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ನಾನು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೂ ಬಂದಿಲ್ಲ. ನಾನು ಭ್ರಷ್ಟಾಚಾರ ಮಾಡಲು ಹಾಗೂ ನಿಮ್ಮ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ’ ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ವಾಗ್ದಾನ ನೀಡಿದರು.
‘ಸೊನ್ನೆಯಿಂದ ರಾಜಕೀಯ ಆರಂಭಿಸಿದವನು ನಾನು. 1983ರಲ್ಲಿ ಮೊದಲ ಚುನಾವಣೆಗೆ ಠೇವಣಿಗೆ ನನ್ನ ಬಳಿ ಹಣವಿರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ ₹ 250 ಕೊಟ್ಟು ಕಟ್ಟಿದ್ದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ ₹ 63ಸಾವಿರ ಖರ್ಚು ಮಾಡಿ ನನ್ನನ್ನು ಆಯ್ಕೆ ಮಾಡಿದ್ದರು’ ಎಂದು ಆರಂಭದ ದಿನಗಳನ್ನು ನೆನೆದರು.
‘ನನ್ನೆಲ್ಲ ಚುನಾವಣೆಯಲ್ಲೂ ಜನರೇ ಹಣ ಖರ್ಚು ಮಾಡಿದ್ದಾರೆ. ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ. ಹೀಗಿರುವಾಗ, ಬಿಜೆಪಿ– ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆಗೂ ಹೆದರುವುದಿಲ್ಲ. ಹಿಂದುಳಿದ ವರ್ಗದವರಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿದ್ದು ನಾನೇ. ಇದನ್ನು ಬಿಜೆಪಿ–ಜೆಡಿಎಸ್‌ನವರು ಸಹಿಸುತ್ತಿಲ್ಲ. ಆದರೆ, ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ಇರುವವರೆಗೂ ಯಾವ ಪಾದಯಾತ್ರೆಗಳೂ ನನ್ನನ್ನು ಅಲುಗಾಡಿಸುವುದಿಲ್ಲ’ ಎಂದು ಹೇಳಿದರು.
‘ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿದ್ದು, ನಮಗೂ ನಿಗಮದ ಹಗರಣಕ್ಕೂ ಸಂಬಂಧವಿಲ್ಲ ಎನ್ನುವುದು ದಾಖಲೆಗಳಲ್ಲಿದೆ. ಹೀಗಾಗಿ, ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಡುತ್ತಿದ್ದಾರೆ’ ಎಂದು ವಿರೋಧ ಪಕ್ಷದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಮುಡಾ ವಿಚಾರದಲ್ಲಿ ನನ್ನದೊಂದು ಪತ್ರವಿಲ್ಲ, ಸಹಿಯೂ ಇಲ್ಲ. ಆಗ ನಮ್ಮ ಸರ್ಕಾರವೂ ಇರಲಿಲ್ಲ. ಆದರೆ, ಹಗರಣ, ಹಗರಣ, ಹಗರಣ ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ನೀವ್ಯಾರೂ ಸೊಪ್ಪು ಹಾಕಬೇಡಿ, ನಂಬಬೇಡಿ’ ಎಂದು ಜನರನ್ನು ಕೋರಿದರು. ‘ಕೋಮುವಾದಿಗಳು, ಜಾತಿವಾದಿಗಳು, ಪಾಳೇಗಾರಿಕೆ ಪ್ರವೃತ್ತಿ ಇರುವವರನ್ನು ಓಡಿಸಬೇಕಾದ ಅನಿವಾರ್ಯತೆ ಇದೆ’ ಎಂದರು.
‘ಜೆಡಿಎಸ್‌ನವರು ಕೋಮುವಾದಿಗಳ ಜೊತೆ ಸೇರಿ, ಕೇಂದ್ರದೊಂದಿಗೆ ಶಾಮೀಲಾಗಿ ನಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ನನ್ನ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಇಷ್ಟೆಲ್ಲಾ ಅಧಿಕಾರ ಸಿಕ್ಕಿದ್ದರೂ ಆಸ್ತಿ ಮಾಡಬೇಕು ಎಂಬ ವ್ಯಾಮೋಹ ನನಗೆ ಬಂದಿಲ್ಲ; ನನ್ನ ಕುಟುಂಬಕ್ಕೂ ಇಲ್ಲ. ಇಂತಹ ನಾನು ತಪ್ಪು ಮಾಡಲು, ರಾಜ್ಯದ ಜನರಿಗೆ ದ್ರೋಹ ಮಾಡಲು ಸಾಧ್ಯವೇ?’ ಎಂದು ಕೇಳಿ ನೆರೆದಿದ್ದವರಿಂದ ‘ಇಲ್ಲ, ಇಲ್ಲ’ ಎಂಬ ಉತ್ತರವನ್ನು ಸಿದ್ದರಾಮಯ್ಯ ಪಡೆದುಕೊಂಡರು.
‘ನಾನು ಎಂದಿಗೂ ದ್ವೇಷದ ಅಥವಾ ಸೇಡಿನ ರಾಜಕಾರಣ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ಇಂತಹ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ. ವಿರೋಧ ಪಕ್ಷದವರೆಲ್ಲರೂ ಜೈಲಿಗೆ ಹೋಗುತ್ತಿದ್ದರು’ ಎಂದು ಗುಡುಗಿದರು.
‘ಯಡಿಯೂರಪ್ಪ ಚೆಕ್‌ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ? 15 ಬಜೆಟ್ ಮಂಡಿಸಿದವನು ನಾನು. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ರೂಪಾಯಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ಪಡೆದು ಕಟ್ಟಿಸಿದ್ದೆ. ಸಾಲ ತೀರಿಸಲಾಗದೇ ಅದನ್ನು ಮಾರಿದೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈಗ ಕಟ್ಟುತ್ತಿರುವ ಮಬೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.
‘ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದ್ದಾರೆ. ನನ್ನ ರಾಜೀನಾಮೆ ಕೇಳಲು ಅವರಿಗೆ ಯಾವ ನೈತಿಕತೆ ಇದೆ?’ ಎಂದು ಅಬ್ಬರಿಸಿದರು.
‘ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಲುಕಿದ್ದಾರೆ. ಆ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ ಅವರೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮಾಡಿರುವ ಹಗರಣಗಳ ಬಗ್ಗೆ ಹೇಳಿದ್ದಾರೆ’ ಎಂದರು.
‘ನನ್ನ ಪತ್ನಿ ಮುಡಾದಿಂದ ಭೂ ಪರಿಹಾರವಾಗಿ ನಿವೇಶನ ಪಡೆದಿದ್ದರಲ್ಲಿ ನನ್ನದೇನೂ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು.
ಜನರ ಆಶೀರ್ವಾದ ಇರುವವರೆಗೂ ನನ್ನನ್ನಾಗಲಿ, ನಮ್ಮ ಸರ್ಕಾರವನ್ನಾಗಲಿ ಯಾರಿಂದಲೂ ಅಲುಗಾಡಿಸಲು ಸಾಧ್ಯವಾಗುವುದಿಲ್ಲಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.