ಮೈಸೂರು: ‘ನಾನು ಪಕ್ಷಾಂತರಿ ಆಗಿರಬಹುದು. ಆದರೆ, ತತ್ವಾಂತರಿ ಅಲ್ಲ. ಆಸೆ, ಆಕಾಂಕ್ಷೆಗಳಿಗೆ, ರಾಜಿ, ಮುಲಾಜಿಗೆ ಒಳಗಾದವನಲ್ಲ. ಅನ್ಯಾಯ ಆದಾಗ ಸಿಡಿದೇಳುವ ಸ್ವಭಾವ ನನ್ನದು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಇಲ್ಲಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಒಡನಾಡಿ ಸೇವಾ ಸಂಸ್ಥೆಯು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ನೊಂದ ಮಹಿಳೆಯರ ಧ್ವನಿಯಾಗಿ ಅಂಬೇಡ್ಕರ್’ ಕಾರ್ಯಕ್ರಮ, ಸ್ಟ್ಯಾನ್ಲಿ ಪರಶು ಅವರ ಒಡನಾಡಿಯ ಒಡಲಾಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನನ್ನ ಈ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಈ ಪ್ರಯತ್ನ ನಡೆಸುತ್ತೇನೆ. ಮೂಲತಃ ನಾನು ಹೋರಾಟದಿಂದ ಬಂದವನು. ಸಾಮಾಜಿಕ ಕಳಕಳಿ ಇದೆ. ಅಂಬೇಡ್ಕರ್ ಅವರ ಕನಸು ನನಸು ಮಾಡುವ ಮನಸ್ಸಿದೆ. ಪ್ರಜಾಪ್ರಭುತ್ವದಲ್ಲಿ ಪಕ್ಷ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಅದು ವೈಯಕ್ತಿಕ’ ಎಂದರು.
ಮಾನವ ಕಳ್ಳ ಸಾಗಾಣಿಕೆ, ಶೋಷಣೆ ಎಂಬುದು ವರ್ಣನೆ ಮಾಡಲಾಗದಂಥ ಅನಿಷ್ಟ ಪದ್ಧತಿ. ದುರ್ಬಲ ವರ್ಗದ ಮಹಿಳೆಯರ ಶೋಷಣೆ, ಅನಾಥವಾಗಿ ಬೀದಿಗೆ ಬಿದ್ದ ಮಕ್ಕಳು, ಮಹಿಳೆಯರು ರಕ್ಷಣೆಗೆ ಬರುವುದು ಸಾಮಾನ್ಯ ಮಾತಲ್ಲ. ಈ ಕೆಲಸವನ್ನು ಸ್ಟ್ಯಾನ್ಲಿ ಪರಶು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಶೋಷಣೆಗೆ ಒಳಗಾದವರು ಗೌರವಯುತವಾಗಿ ಬದುಕಬೇಕು ಎಂಬ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಮುಂದಾಗಬೇಕು. ಕೇಂದ್ರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕೃತಿಯನ್ನು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದ ಹೈಕೊರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್, ಯಾವ ಕ್ರಾಂತಿಯೂ ತರಲಾಗದ ಬದಲಾವಣೆಯನ್ನು ಪುಸ್ತಕಗಳು ತಂದಿವೆ. ಈ ಕಾರಣದಿಂದ ಜನರು ಪುಸ್ತಕದ ಮಹತ್ವ ತಿಳಿಯಬೇಕು. ಕೊಂಡು ಓದಬೇಕು, ದಾನ ಮಾಡಬೇಕು, ಸಾಧ್ಯವಾದರೆ ಪುಸ್ತಕ ಬರೆಯುವ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಣ್ಣ ತಮ್ಮಂದಿರು, ತಂದೆ ಮಕ್ಕಳು, ಅಕ್ಕ ತಂಗಿ ತಂದೆ ತಾಯಿಯ ಸಂಪತ್ತಿಗಾಗಿ ಹೊಡೆದಾಟ ಮಾಡುತ್ತಾರೆ. ಆದರೆ, ತಂದೆ ತಾಯಿ ಬಿಟ್ಟು ಹೋದ ಪುಸ್ತಕ ಬೇಕೆಂದು ಜಗಳವಾಡಿ ಕೋರ್ಟ್‌ಗೆ ಬಂದ ಪ್ರಸಂಗವೇ ಇಲ್ಲ. ನ್ಯಾಯಮೂರ್ತಿಯಾಗಿದ್ದಾಗ ಈ ಅವಕಾಶ ಸಿಗಲಿಲ್ಲ. ಅಂಥ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ನಡೆಸುತ್ತಾ ಮಾದರಿ ಕೇಂದ್ರವಾಗಿದೆ ಎಂದರು.
ಕೃತಿ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಆರ್.ಇಂದಿರಾ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಸ್ವಾಗತಿಸಿದರು.
ಕಲ್ಯಾಣಶ್ರೀ ಭಂತೇಜಿ, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಭಾಗವಹಿಸಿದ್ದರು.
ಮಾನವೀಯತೆ ಇಲ್ಲದ ಸಾಧನೆ
ಒಡನಾಡಿಯ ಒಡಲಾಳ ಕೃತಿ ಹೊಸ ಜಗತನ್ನು ಪರಿಚಯಿಸುತ್ತದೆ. ದೇಶ ಸಾಧನೆ ಮಾಡಿದರೂ ಅದು ಮಾನವೀಯತೆ ಇಲ್ಲದ ಸಾಧನೆಯಂತಾಗಿದೆ. ನೊಂದವರಿಗೆ ಸಾಧನೆ ತಲುಪಿಲ್ಲ. ಈ ಕೃತಿ ಕೇವಲ ಸಾಹಿತ್ಯ ಕೃತಿಯಲ್ಲ. ಸಂಸ್ಥೆ ಮೂಲಕ ಸಮಾಜದ ಪರಿವರ್ತನೆಗೆ ಮಾಡಿರುವ ದೊಡ್ಡ ಕೆಲಸ ಎಂದುನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಶ್ಲಾಘಿಸಿದರು.
ಅಂಬೇಡ್ಕರ್ ಅವರು ದಲಿತ ನಾಯಕ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಅಂಬೇಡ್ಕರ್ ಅವರು ದಲಿತರ ಹಿತ ಕಾಪಾಡುವುದರ ಜತೆಗೆ ದುಡಿಯುವ ಜನರ ಹಿತ ಕಾಪಾಡಿದ ಮಹಾ ನಾಯಕ. ಅಂಬೇಡ್ಕರ್ ಅವರು ಸಾಮಾಜಿಕ ಹಿತಕ್ಕಾಗಿ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ. ಅವರೊಬ್ಬ ಮಹಿಳಾ ನಾಯಕ, ಜಾಗತಿಕ ಧುರೀಣ. ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸ್ಥಿತಿ ಬದಲಾಯಿಸಬೇಕು. ಇದಕ್ಕೆ ಸಂವಿಧಾನವನ್ನು ಓದಿ ಅನುಷ್ಠಾನ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.