ADVERTISEMENT

ಚಾಮರಾಜನಗರ ಟಿಕೆಟ್‌ ಸಿಗುವ ವಿಶ್ವಾಸ: ಪುಷ್ಪಾ ಅಮರನಾಥ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 15:37 IST
Last Updated 9 ಜನವರಿ 2024, 15:37 IST
<div class="paragraphs"><p>ಪುಷ್ಪಾ&nbsp;ಅಮರನಾಥ್</p></div>

ಪುಷ್ಪಾ ಅಮರನಾಥ್

   

ಮೈಸೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್‌ ಸಿಗುವ ವಿಶ್ವಾಸವಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.

‘ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರ ಗಮನಕ್ಕೂ ತಂದಿದ್ದೇನೆ. ಗೆಲ್ಲುವ ಸಾಮರ್ಥ್ಯ ಇರುವ ಕಡೆ ಮಹಿಳೆಯರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.

ADVERTISEMENT

‘ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದೇನೆ. ಪಕ್ಷ ಸಂಕಷ್ಟದಲ್ಲಿದ್ದ ದಿನಗಳಲ್ಲೂ ಪ್ರಾಮಾಣಿಕವಾಗಿ ದುಡಿದಿದ್ದೇನೆ. 2018ರ ವಿಧಾನಸಭೆ ಚುನಾವಣೆಯಲ್ಲೂ ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಕಡೆ ಗಳಿಗೆಯಲ್ಲಿ ಕೈ ತಪ್ಪಿತು’ ಎಂದು ತಿಳಿಸಿದರು.

‘ಅಯೋಧ್ಯೆಯಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದ ಉದ್ಘಾಟನೆಗೆ ಇದುವರೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಬುಡಕಟ್ಟು ಸಮುದಾಯಕ್ಕೆ ಸೇರಿದ ದೇಶದ ಪ್ರಥಮ ಪ್ರಜೆಯನ್ನು ನೂತನ ಸಂಸತ್ ಭವನದ ಉದ್ಘಾಟನೆಗೂ ಆಹ್ವಾನಿಸದೇ ಕಡೆಗಣಿಸಲಾಗಿತ್ತು. ಈಗಲೂ ಹಾಗೆಯೇ ಮಾಡಲಾಗುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಇನ್ನಾದರೂ ಅವರನ್ನು ಆಹ್ವಾನಿಸಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಿಲ್ಲ. ಆದರೆ, ನಾವು ಸಿದ್ದರಾಮಯ್ಯ ಅವರಲ್ಲೇ ರಾಮನನ್ನು ನೋಡುತ್ತೇವೆ. ನಾವೂ ಶ್ರೀರಾಮನನ್ನು ಪೂಜಿಸುತ್ತೇವೆ’ ಎಂದು ಹೇಳಿದರು.

‘ಗುಜರಾತ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಗೆ ಸುಪ್ರೀಂ ಕೋರ್ಟ್ ನ್ಯಾಯ ನೀಡಿದೆ. ಸುದೀರ್ಘ ಹೋರಾಟದ ನಂತರ ನ್ಯಾಯಾಲಯವು ಮಹಿಳೆಯರ ಗೌರವವನ್ನು ಎತ್ತಿ ಹಿಡಿದಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ತೀರ್ಪು ನೀಡಿರುವುದು ಸ್ವಾಗತಾರ್ಹ. ಗುಜರಾತ್ ಸರ್ಕಾರ ಆರೋಪಿಗಳ ಪರವಾಗಿ ತೆಗೆದುಕೊಂಡಿದ್ದ ನಿಲುವಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ’ ಎಂದರು.

‘ಬಿಜೆಪಿಯವರು ಎಂದೂ ಮಹಿಳೆಯರ ಪರವಾಗಿಲ್ಲ. ಮಹಿಳಾ ಸುರಕ್ಷತೆ ಎನ್ನುವುದು ಘೋಷಣೆಯಾಗಿಯೇ ಉಳಿದಿದೆ. 11 ಮಂದಿ ಅತ್ಯಾಚಾರಿಗಳ ಪರವಾಗಿ ನಿಂತ ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ತಿರಸ್ಕರಿಸಬೇಕು. ಮುಖಭಂಗ ಅನುಭವಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಪುಷ್ಪಾವಲ್ಲಿ, ಲತಾ ಮೋಹನ್, ಮೋದಾಮಣಿ, ರಾಧಾಮಣಿ, ರಾಜೇಶ್ವರಿ, ಸುಶೀಲ್, ಇಂದಿರಾ, ಚಂದ್ರಕಲಾ, ಭವ್ಯಾ, ಗಾಯತ್ರಿ ನಾರಾಯಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.