ADVERTISEMENT

ಐಎಎಸ್‌ ಅಧಿಕಾರಿ ಶಿಲ್ಪಾ ನಾಗ್‌ ರಾಜೀನಾಮೆ: ಸಾಂತ್ವನ ಹೇಳಿದ್ದೇ ಮುಳುವಾಯಿತೇ?

ಡಿ.ಬಿ, ನಾಗರಾಜ
Published 3 ಜೂನ್ 2021, 22:08 IST
Last Updated 3 ಜೂನ್ 2021, 22:08 IST
ಕೋವಿಡ್‌ನಿಂದ ಮೃತಪಟ್ಟ ಮೈಸೂರು ಮಹಾನಗರ ಪಾಲಿಕೆಯ ನೌಕರರೊಬ್ಬರ ಕುಟುಂಬದ ಸದಸ್ಯೆಯೊಬ್ಬರನ್ನು ಈಚೆಗೆ ಅಪ್ಪಿಕೊಂಡು ಸಾಂತ್ವನ ಹೇಳಿದ ಆಯುಕ್ತೆ ಶಿಲ್ಪಾನಾಗ್‌.
ಕೋವಿಡ್‌ನಿಂದ ಮೃತಪಟ್ಟ ಮೈಸೂರು ಮಹಾನಗರ ಪಾಲಿಕೆಯ ನೌಕರರೊಬ್ಬರ ಕುಟುಂಬದ ಸದಸ್ಯೆಯೊಬ್ಬರನ್ನು ಈಚೆಗೆ ಅಪ್ಪಿಕೊಂಡು ಸಾಂತ್ವನ ಹೇಳಿದ ಆಯುಕ್ತೆ ಶಿಲ್ಪಾನಾಗ್‌.   

ಮೈಸೂರು: ಕೋವಿಡ್‌ನಿಂದ ಮೃತಪಟ್ಟಿದ್ದ ಮೈಸೂರು ಮಹಾನಗರ ಪಾಲಿಕೆಯ ಆಂಬುಲೆನ್ಸ್‌ ಚಾಲಕ ರವಿ (ಹೊರ ಗುತ್ತಿಗೆ ನೌಕರ) ಅವರ ತಾಯಿಯನ್ನು ತಬ್ಬಿಕೊಂಡು, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಸಾಂತ್ವನ ಹೇಳಿದ್ದರು. ಈ ಘಟನೆಯ ಚಿತ್ರವೊಂದಕ್ಕೆ ವ್ಯಕ್ತವಾದ ಮೆಚ್ಚುಗೆಯು, ಶಿಲ್ಪಾ ಅವರಿಗೆ ಮುಳುವಾಯಿತೇ?

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೊತೆ ಜಟಾಪಟಿಗೆ ಬಿದ್ದಿದ್ದ ಶಾಸಕರು ಮತ್ತು ಸಂಸದರು, ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಕೋವಿಡ್‌ ನಿಯಂತ್ರಣದಲ್ಲಿ ಶಿಲ್ಪಾ ನಾಗ್‌ ತೆಗೆದುಕೊಂಡಿದ್ದ ಕ್ರಮಗಳನ್ನು ಶ್ಲಾಘಿಸಿದ್ದು ಕಾರಣವಾಯಿತೇ?

ಇದುವರೆಗೆ ಅಧಿಕಾರಿಗಳ ವಲಯದಲ್ಲಷ್ಟೇ ಕೇಳಿ ಬರುತ್ತಿದ್ದ ಈ ಚರ್ಚೆಯು, ಶಿಲ್ಪಾ ನಾಗ್‌ ಅವರು ಗುರುವಾರ ಪಾಲಿಕೆಯ ಆಯುಕ್ತರ ಹುದ್ದೆಯ ಜೊತೆಗೆ ಭಾರತೀಯ ಆಡಳಿತ ಸೇವೆಗೂ ರಾಜೀನಾಮೆಗೆ ನೀಡುತ್ತಿರುವುದಾಗಿ ಪ್ರಕಟಿಸುತ್ತಲೇ ಸಾರ್ವಜನಿಕರ ವಲಯದಲ್ಲೂ ಬಿರುಸು ಪಡೆದಿದೆ. ಹತ್ತಾರು ವಿಶ್ಲೇಷಣೆಗಳೂ ನಡೆದಿವೆ.

ADVERTISEMENT

ಮೃತಪಟ್ಟ ಚಾಲಕನ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಮನೆಗೆ ಶಿಲ್ಪಾ ನಾಗ್‌ ಹೋಗಿದ್ದಾಗ ಆತನ ತಾಯಿ ದುಃಖಿಸಿದ್ದರು. ಈ ಸಂದರ್ಭದಲ್ಲಿ ಸಹಜವಾಗಿಯೇ ಆಯುಕ್ತರು ತಬ್ಬಿಕೊಂಡು ಸಾಂತ್ವನ ಹೇಳಿದ್ದರು. ಈ ದೃಶ್ಯದ ಫೋಟೊವನ್ನು ಐಎಎಸ್‌ ಅಧಿಕಾರಿಗಳ ಅಸೋಸಿಯೇಷನ್‌ ಹಾಗೂ ಅನೇಕ ಹಿರಿಯ ಐಎಎಸ್‌ ಅಧಿಕಾರಿಗಳು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜನಪ್ರತಿನಿಧಿಗಳು ಸಹ ಆಗಿನಿಂದಲೇ ಶಿಲ್ಪಾ ನಡೆಗೆ ‍ಪ್ರಶಂಸಿಸುತ್ತಿದ್ದರು. ಜಿಲ್ಲಾಧಿಕಾರಿ ರೋಹಿಣಿ ಅವರನ್ನು ಟೀಕಿಸುತ್ತಿದ್ದರು. ಇದು ಸಿಂಧೂರಿ ಅವರ ಅಸಹನೆಗೆ ಕಾರಣವಾಗಿತ್ತು ಎನ್ನಲಾಗಿದ್ದು, ‘ಇಂತಹದ್ದೊಂದು ನನ್ನ ಫೋಟೊವನ್ನು ಯಾರೊಬ್ಬರೂ ತೆಗೆದಿಲ್ಲವಲ್ಲಾ?’ ಎಂದು ತಮ್ಮ ಆಪ್ತ ಅಧಿಕಾರಿಗಳ ಬಳಿಯೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದು ಗೊತ್ತಾಗಿದೆ.

ಶಾಸಕರು, ಸಂಸದರು ಶಿಲ್ಪಾ ಪರವಾಗಿ ಮಾತನಾಡಲು ಶುರು ಮಾಡುತ್ತಿದ್ದಂತೆ, ತಮ್ಮ ಆಪ್ತ ಅಧಿಕಾರಿಗಳ ಮೂಲಕವೇ ಇದಕ್ಕೆ ಜಾತಿಯ ಲೇಪನವನ್ನು ಬಳಿಯುವಲ್ಲಿ ರೋಹಿಣಿ ಯಶಸ್ವಿಯಾಗಿದ್ದರು. ಇದು ಆಯುಕ್ತರನ್ನು ಘಾಸಿಗೊಳಿಸಿತ್ತು ಎನ್ನಲಾಗಿದೆ.

ಸಹನೆಯ ಕಟ್ಟೆ ಆಸ್ಫೋಟ

ಮೈಸೂರು ನಗರದಲ್ಲಿ 401ಕ್ಕೂ ಹೆಚ್ಚು ಕೋವಿಡ್‌ ಸೋಂಕಿತರರಿರುವ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಿ, ನಕ್ಷೆಯೊಂದನ್ನು ಜಿಲ್ಲಾಡಳಿತ ಮೇ 31ರಂದು ಬಿಡುಗಡೆ ಮಾಡಿತ್ತು.

ಆದರೆ, ಈ ಸಂಖ್ಯೆಯನ್ನು 51ಕ್ಕೆ ಇಳಿಸಿ, 51ಕ್ಕೂ ಹೆಚ್ಚು ಸೋಂಕಿತರಿರುವ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಿ ಗುರುವಾರ (ಜೂನ್‌ 3) ಹೊಸ ನಕ್ಷೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದರಿಂದ ಮೈಸೂರಿನ ಬಹುತೇಕ ಪ್ರದೇಶವನ್ನು ಕೆಂಪು ವಲಯದಲ್ಲಿದೆ ಎಂಬುದನ್ನು ಬಿಂಬಿಸಿದ್ದೇ ಶಿಲ್ಪಾನಾಗ್‌ ಅವರ ಸಹನೆಯ ಕಟ್ಟೆಯೊಡೆಯಲು ಕಾರಣ ಎನ್ನಲಾಗಿದೆ.

‘ಶಿಲ್ಪಾನಾಗ್‌ ಜೊತೆಗೆ ನಿಲ್ತೀವಿ’

ಶಿಲ್ಪಾ ನಾಗ್‌ ರಾಜೀನಾಮೆ ಪ್ರಕಟಿಸುತ್ತಿದ್ದಂತೆ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಪಾಲಿಕೆಯ ಹಂಗಾಮಿ ಮೇಯರ್‌ ಸೇರಿದಂತೆ 65 ಸದಸ್ಯರೂ ಶಿಲ್ಪಾನಾಗ್ ಪರ ನಿಲ್ಲುವುದಾಗಿ ಪತ್ರಿಕಾಗೋಷ್ಠಿ ನಡೆಸಿದರು. ಸಾಮಾಜಿಕ ಜಾಲತಾಣದಲ್ಲೂ ‘ಶಿಲ್ಪಾನಾಗ್ ಜೊತೆಗೆ ನಿಲ್ತೀವಿ’ ಎನ್ನುವ ಅಭಿಯಾನ‌ ಬಿರುಸು ಪಡೆದಿದೆ.

ನಿತ್ಯವೂ ಕಿರಿಕಿರಿ: ಆರೋಪ

ಆಯುಕ್ತರಾಗಿ ಶಿಲ್ಪಾ ನಾಗ್‌ ಮೈಸೂರು ನಗರದಲ್ಲಿ ಕೋವಿಡ್‌ ನಿಯಂತ್ರಿಸಲು ಹಲವು ಕ್ರಮ ತೆಗೆದುಕೊಂಡಿದ್ದರು. ಕೋವಿಡ್‌ ಮಿತ್ರ, ಟೆಲಿ ಕೇರ್‌ ಸೇರಿದಂತೆ ಹಲವು ಯೋಜನೆ ಅನುಷ್ಠಾನಗೊಳಿಸಿದ್ದರು. ಆದರೆ ಸಚಿವರು, ಉಪ ಮುಖ್ಯಮಂತ್ರಿ ನಡೆಸಿದ ಸಭೆಗಳಲ್ಲಿ ಜಿಲ್ಲಾಧಿಕಾರಿಯು, ಇದೆಲ್ಲವನ್ನು ತಾವೇ ಜಾರಿಗೊಳಿಸಿದ್ದಾಗಿ ಮಾಹಿತಿ ನೀಡುತ್ತಿದ್ದರು. ಇದು ಶಿಲ್ಪಾ ಅವರಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯವೂ ಸಲ್ಲದ ವಿಷಯಕ್ಕೆ ಕಿರಿಕಿರಿ ನೀಡುತ್ತಿದ್ದರು’ ಎಂದು ಅವರು ಹೇಳಿದರು.

ಈಜುಕೊಳ ನಿರ್ಮಾಣ: ತನಿಖೆ

ಮೈಸೂರು: ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ₹ 50 ಲಕ್ಷದಲ್ಲಿ ಒಳಾಂಗಣ ಈಜುಕೊಳ, ಜಿಮ್‌ ನಿರ್ಮಾಣವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಏಳು ದಿನಗಳೊಳಗಾಗಿ ವರದಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದ್ದಾರೆ.

‘ಮೇ 31ರಂದು ಹೊರಡಿಸಿರುವ ಆದೇಶವು ಬುಧವಾರ ಸಂಜೆ ನನಗೆ ತಲುಪಿದೆ. ತಕ್ಷಣವೇ ಕಾರ್ಯ ಪ್ರವೃತ್ತನಾಗಿರುವೆ’ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.