ADVERTISEMENT

ಮೈಸೂರಲ್ಲಿ ಲಕ್ಷ್ಮಣ ಗೆದ್ದರೆ ನಾನೇ ಗೆದ್ದಂತೆ: ಸಿದ್ದರಾಮಯ್ಯ

ಭೂತಾಳೆ ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಅವರು ಮಾತನಾಡಿದರು.

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:44 IST
Last Updated 27 ಮಾರ್ಚ್ 2024, 14:44 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಗೆದ್ದರೆ ನಾನೇ ಗೆದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಅವರು ಮಾತನಾಡಿದರು.

‘ಲಕ್ಷ್ಮಣ ಸಭ್ಯ‌ ವ್ಯಕ್ತಿ. ವಿದ್ಯಾವಂತ. ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಅಂಥವರು ಸಂಸತ್ತಿನಲ್ಲಿ ದನಿ ಎತ್ತುತ್ತಾರೆ. ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಮಾತನಾಡುವವರನ್ನು ಗೆಲ್ಲಿಸಬೇಕು. ಸುಮ್ಮನೆ ಕುಳಿತು ಬರುವವರನ್ನು ಗೆಲ್ಲಿಸಿದರೆ ಪ್ರಯೋಜನ ಆಗುವುದಿಲ್ಲ’ ಎಂದರು.

ADVERTISEMENT

‘ಪಕ್ಷಕ್ಕೆ ಬರುವಂತೆ ಎಚ್‌.ವಿ.ರಾಜೀವ್ ಅವರನ್ನು ವಿಧಾನಸಭೆ ಚುನಾವಣೆಗೆ ಮುನ್ನವೇ ಆಹ್ವಾನಿಸಿದ್ದೆ. ಆಗ ಅವರು ಮನಸ್ಸು ಮಾಡಿರಲಿಲ್ಲ. ನಾನೂ ಒತ್ತಾಯಿಸಿರಲಿಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಯಾವುದೇ ಷರತ್ತಿಲ್ಲದೆ ಸೇರಿದರೆ ಭವ್ಯವಾದ ಸ್ವಾಗತವನ್ನು ಕೊಡುತ್ತೇವೆ. ಅದು ನಮ್ಮ ಜವಾಬ್ದಾರಿಯೂ ಆಗಿದೆ’ ಎಂದರು.

ಆಗಲೇ ಕರೆದಿದ್ದೆ

‘ಬಿಜೆಪಿ ಜೊತೆ ಸೇರಿ ಜೆಡಿಎಸ್ ಕೂಡ ಕೋಮುವಾದಿ ಆಗಿಬಿಟ್ಟಿದೆ. ಆದ್ದರಿಂದಲೇ ಆ ಪಕ್ಷ ತೊರೆದು ಕೆ.ವಿ. ಮಲ್ಲೇಶ್‌ ನಮಲ್ಲಿಗೆ ಬಂದಿದ್ದಾರೆ. ನಮ್ಮ ಕಾರ್ಯಕ್ರಮಗಳನ್ನು ಒಪ್ಪಿ ಹಲವರು ಕಾಂಗ್ರೆಸ್‌ ಸೇರುತ್ತಿರುವುದರಿಂದ ಸಂತೋಷವಾಗಿದೆ’ ಎಂದು ಹೇಳಿದರು.

‘ಎಚ್‌.ವಿ.ರಾಜೀವ್ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣರಾಜದಿಂದ ಟಿಕೆಟ್ ಕೇಳಬಹುದು ಎಂಬ ಭಾವನೆಯಿಂದಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿರೋಧ ಮಾಡಬಹುದು ಎಂದುಕೊಂಡಿದ್ದೆ.‌ ಆದರೆ, ಸೋಮಶೇಖರ್ ವಿರೋಧಿಸಲಿಲ್ಲ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಕೃಷ್ಣರಾಜದಲ್ಲಿ ಲೀಡ್ ಬರಬೇಕು. ನಮ್ಮ ಸಾಧನೆ ಹಾಗೂ ಬಿಜೆಪಿಯವರ ಸುಳ್ಳುಗಳನ್ನು ಜನರಿಗೆ ತಲುಪಿಸಬೇಕು. ಸುಳ್ಳು ಹೇಳಬಾರದು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಬರೀ ಪ್ರಲಾಪ

‘ಪ್ರತಾಪನದ್ದು ಬರೀ ಪ್ರಲಾಪ. ನಾವು ಮಾಡಿದ್ದೆಲ್ಲವನ್ನೂ ನಾನು ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ’ ಎಂದು ವಾಗ್ದಾಳಿ ನಡೆಸಿದರು.

‘ಅನುಕೂಲ ಸಿಂಧು ರಾಜಕಾರಣ ಎಲ್ಲಿಯವರೆಗೆ ನಡೆಯುತ್ತದೆ ದೇವೇಗೌಡರೇ?’ ಎಂದು ಕೇಳಿದ ಅವರು, ‘ಬಿಜೆಪಿ-ಜೆಡಿಎಸ್‌ನವರು ಭಯದಿಂದ ಒಂದಾಗಿದ್ದಾರೆ. ಬಿಜೆಪಿಯವರೆಂದರೆ ಲೂಟಿಕೋರರು’ ಎಂದು ದೂರಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಬಿಜೆಪಿ, ಜೆಡಿಎಸ್‌ನವರು ಪಕ್ಷವನ್ನು ಸೇರುತ್ತಿರುವುದು ನಮ್ಮ ಅಭ್ಯರ್ಥಿ ಲಕ್ಷ್ಮಣ ಗೆಲುವಿಗೆ ಮುನ್ನುಡಿ ಬರೆದಿದೆ’ ಎಂದು ಹರ್ಷ ವ್ಯಕ್ತ‍ಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ‘ರಾಜೀವ್ ಮೊದಲಾದವರು ಸೇರಿದ್ದರಿಂದ ಬಲ ಬಂದಿದೆ. ಅವರಿಗೆ ಸಲ್ಲಬೇಕಾದ ಗೌರವ ಸಿಗುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡ ಎಚ್‌.ವಿ. ರಾಜೀವ್ ಮಾತನಾಡಿ, ‘ಮೂರು ದಶಕಗಳಿಂದ ಸಮಾಜಸೇವೆ ಮಾಡಿದವನು ನಾನು. ಬಿಜೆಪಿಯಲ್ಲಿ ನನಗೆ ಸಿಗಬೇಕಾದ ಗೌರವ ಅಥವಾ ಮಾನ್ಯತೆ ಸಿಗಲಿಲ್ಲ. ನುಡಿದಂತೆ ನಡೆಯುವ ಮುಖ್ಯಮಂತ್ರಿ ಇದ್ದರೆ ಅವರು ಸಿದ್ದರಾಮಯ್ಯ. ಅವರು ಪಂಚ ಗ್ಯಾರಂಟಿಗಳನ್ನು ಕೆಲವೇ ತಿಂಗಳಲ್ಲಿ ಜಾರಿಗೊಳಿಸಿದ್ದಾರೆ. ಆದ್ದರಿಂದ ಬಡವರ ಧ್ವನಿಯಾಗುತ್ತಿರುವ ಪಕ್ಷದಲ್ಲಿ ಕೆಲಸ ಮಾಡಬೇಕೆಂದು ಇಲ್ಲಿಗೆ ಬಂದಿದ್ದೇನೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಮಾತನಾಡಿ, ‘‌ನಾವು ಕಾಂಗ್ರೆಸ್ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಶರಣ ಬಂಧುಗಳಿಗೆ ಈ ಪಕ್ಷದಿಂದ ಮಾತ್ರ ನ್ಯಾಯ ದೊರೆಯುತ್ತದೆ’ ಎಂದು ಹೇಳಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಮಾತನಾಡಿ, ‘ಮುತ್ತತ್ತಿಯ ಕಾವೇರಿ ನದಿಯಲ್ಲಿ ಮುಳುಗಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ’ ಎಂದರು.

ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸು, ಮುಖಂಡರಾದ ರಘುರಾಂ ವಾಜಪೇಯಿ, ನಟರಾಜ್ ಜೋಯಿಸ್, ಶ್ರೀನಿವಾಸ್, ಮಹದೇವಸ್ವಾಮಿ, ಜಯಂತ್, ಜಯರಾಂ ಶಾಸ್ತ್ರಿ, ಸುಬ್ರಹ್ಮಣ್ಯ, ರಾಮಪ್ರಸಾದ್, ಮರಾಠಿ ರಾಮಣ್ಣ, ಆಲನಹಳ್ಳಿ ಪ್ರಕಾಶ್, ರಘು, ಮಲ್ಲಿಕಾರ್ಜುನ, ನಾಗೇಶ್, ಮುರುಳಿ, ಕುಮಾರಸ್ವಾಮಿ ಮೊದಲಾದವರು ಕಾಂಗ್ರೆಸ್‌ ಸೇರ್ಪಡೆಯಾದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್‌ ಗೌಡ, ಅನಿಲ್ ಚಿಕ್ಕಮಾದು, ಎಚ್‌.ಎಂ. ಗಣೇಶ್‌ ಪ್ರಸಾದ್, ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.