ADVERTISEMENT

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ

ಅರಣ್ಯ ಇಲಾಖೆ ನೋಟಿಸ್‌ಗೆ ಉತ್ತರಿಸದ ಮಾಲೀಕ

ಸತೀಶ್‌ ಬಿ
Published 8 ಡಿಸೆಂಬರ್ 2022, 2:48 IST
Last Updated 8 ಡಿಸೆಂಬರ್ 2022, 2:48 IST
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಕಾರಾಪುರ ಗ್ರಾಮದ ಸರ್ವೆ ನಂಬರ್ 22ರಲ್ಲಿ ನಿರ್ಮಿಸುತ್ತಿರುವ ಕಟ್ಟಡ (ಎಡಚಿತ್ರ). ಕಬಿನಿ ಹಿನ್ನೀರಿನಿಂದ ಕಾಣುವ ಕಟ್ಟಡ
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಕಾರಾಪುರ ಗ್ರಾಮದ ಸರ್ವೆ ನಂಬರ್ 22ರಲ್ಲಿ ನಿರ್ಮಿಸುತ್ತಿರುವ ಕಟ್ಟಡ (ಎಡಚಿತ್ರ). ಕಬಿನಿ ಹಿನ್ನೀರಿನಿಂದ ಕಾಣುವ ಕಟ್ಟಡ   

ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವನ್ಯ ಜೀವಿ ವಲಯದ ಗಡಿಯಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ನಿಯಮ ಮೀರಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

ಕಾರಾಪುರದ ಸರ್ವೆ ನಂಬರ್‌ 22ರ 13 ಎಕರೆ ಜಮೀನಿನಲ್ಲಿ ವಾಸದ ಮನೆ ನಿರ್ಮಿಸಲು ಅನುಮತಿ ದೊರಕಿದೆ. ಆದರೆ 31 ಮೀಟರ್ ಉದ್ದ ಹಾಗೂ 35 ಮೀಟರ್‌ ಅಗಲದ ವಾಣಿಜ್ಯ ಕಟ್ಟಡ ತಲೆ ಎತ್ತುತ್ತಿದೆ.‌

ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಪಡೆದಿರುವ ಅನುಮತಿ ಪತ್ರವನ್ನು ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಆದರೆ, ಮಾಲೀಕರು ಪ್ರತಿಕ್ರಿಯೆ ನೀಡದೆ, ಕಾಮಗಾರಿಯನ್ನು ಮುಂದುವರಿಸಿ ದ್ದಾರೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಪರಿಸರ ಪ್ರಿಯರು, ‘ಪ್ರಭಾವಿ ಬೆಂಬಲ ನೀಡುತ್ತಿರಬಹುದು’ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ಕಾರ್ಯ ನಡೆಸುತ್ತಿದ್ದಾಗ ಎರಡು ಮಹಡಿಗಳ ಕಟ್ಟಡ ನಿರ್ಮಾಣ ವಾಗುತ್ತಿರುವುದು ತಿಳಿಯಿತು. ನೆಲಮಹಡಿಯಲ್ಲಿ ಅಡುಗೆ ಕೋಣೆ ಹಾಗೂ ಮೊದಲನೇ ಮಹಡಿಯಲ್ಲಿ ಸಾಮಾನ್ಯ ಕೋಣೆಗಳನ್ನು ನಿರ್ಮಿಸ ಲಾಗುತ್ತಿದೆ. ಇದು ವಾಸದ ಮನೆಗಾಗಿ ನಿರ್ಮಿಸುತ್ತಿ ರುವ ಕಟ್ಟಡವೆನಿಸುತ್ತಿಲ್ಲ’ ಎಂದು ಅಂತರಸಂತೆ ವಲಯ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ‘ಪ್ರಜಾ ವಾಣಿ’ಗೆ ತಿಳಿಸಿದರು.

‘ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳ ಗಡಿಯಿಂದ 10 ಕಿ.ಮೀ.ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಸುಪ್ರೀಂಕೋರ್ಟ್‌ ಘೋಷಿಸಿದೆ. ಈ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಶಾಶ್ವತವಾಗಿ ಕಟ್ಟಡ ನಿರ್ಮಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ (ವನ್ಯಜೀವಿ) ಅನುಮತಿ ಪಡೆದು ನಿರ್ಮಿಸಬೇಕು. ತಪ್ಪಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದರು.

***

ಕಟ್ಟಡ ನಿರ್ಮಿಸಲು ಡಿ.ಸಿ.ಯಿಂದ ಅನುಮತಿ ಪಡೆದು, ಅನ್ಯಕ್ರಾಂತ ಮಾಡಿಸಲಾಗಿದೆ. ಇಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ.

–ಡಾ‌.ಲಕ್ಷ್ಮೀನಾರಾಯಣ ರಾಜು, ಕಟ್ಟಡದ ಮಾಲೀಕ

***‌

ಅರಣ್ಯದಂಚಿನಲ್ಲಿ ವಾಣಿಜ್ಯ ಕಟ್ಟಲು ನಿರ್ಮಿಸಲು ಅವಕಾಶ ವಿಲ್ಲ. ಈ ಹಿಂದೆ ಪಡೆದಿದ್ದ ಅನುಮತಿ ಯನ್ನೇ ಇಟ್ಟುಕೊಂಡು ಈಗ ನಿರ್ಮಿಸಿ ದರೆ ಕಾನೂನು ಉಲ್ಲಂಘನೆ ಆಗುತ್ತದೆ.

–ಹರ್ಷ ಕುಮಾರ್ ಚಿಕ್ಕನರಗುಂದ, ನಿರ್ದೇಶಕ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

***

‌ಜಿಲ್ಲಾಧಿಕಾರಿಯಿಂದ ಭೂಪರಿವರ್ತನೆ ಮಾಡಿಸಲಾಗಿದೆ. ಅಗತ್ಯ ಅನುಮತಿ ಪಡೆದಿರುವುದರಿಂದ ಕಟ್ಟಡ ನಿರ್ಮಿಸಲು ಅವಕಾಶ ನೀಡಲಾಗಿದೆ.

–ಸ್ವಾಮಿ, ಪಿಡಿಒ, ಎನ್.ಬೆಳತ್ತೂರು ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.