ಮೈಸೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಜುವೆಲ್ಸ್ ಕಂಪನಿ’ಯಲ್ಲಿ ಹಣ ತೊಡಗಿಸಿ ಮೋಸ ಹೋಗಿರುವವರು ಗುರುವಾರ ಪೊಲೀಸ್ ಠಾಣೆಗಳ ಮುಂದೆ ಸಾಲುಗಟ್ಟಿ ನಿಂತು ದೂರು ದಾಖಲಿಸಿದರು. ದೂರು ದಾಖಲಿಸಿದವರ ಸಂಖ್ಯೆ ಸಾವಿರ ದಾಟಿದೆ.
ಉದಯಗಿರಿ ಠಾಣೆ ವತಿಯಿಂದ ಜಬ್ಬಾರ್ ಪಂಕ್ಷನ್ ಹಾಲ್‍ನಲ್ಲಿ ಇದಕ್ಕೆಂದೇ ವಿಶೇಷ ಕೌಂಟರ್‌ವೊಂದನ್ನು ತೆರೆಯಲಾಗಿತ್ತು. ಇಲ್ಲಿ ದೂರು ದಾಖಲಿಸಿದವರಲ್ಲಿ ಹೆಚ್ಚಿನವರ ಬಡವರು ಮತ್ತು ಮಧ್ಯಮ ವರ್ಗದವರೇ ಇದ್ದರು.
ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ದೂರು ದಾಖಲಿಸಿದ್ದಾರೆ. ಇವರೆಲ್ಲರೂ ತಾವು ಉಳಿಸಿದ ಉಳಿತಾಯದ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.
ಮೋಸ ಹೋದವರು ಹೂಡಿಕೆ ಮಾಡಿದ್ದಕ್ಕೆ ನೀಡುವ ರಸೀತಿ, ಬಾಂಡ್‌ಗಳಲ್ಲಿನ ನೋಂದಣಿ ಸಂಖ್ಯೆಯನ್ನು ನೀಡುವ ಮೂಲಕ ದೂರು ನೀಡಿದರು.
ಕೇವಲ ನಗರ ಮಾತ್ರವಲ್ಲ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಅನೇಕರು ಅಲ್ಲಿದ್ದರು. ವಿಶೇಷವಾಗಿ ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದ ಅಧಿಕ ಮಂದಿ ದೂರು ದಾಖಲಿಸಲು ಬಂದಿದ್ದರು.
ಬಹಳಷ್ಟು ಮಂದಿ ದೂರು ದಾಖಲಿಸುವಾಗ ಕಣ್ಣೀರಾದರು. ನಿವೇಶನ ಮಾರಾಟ ಮಾಡಿ ಹೂಡಿಕೆ ಮಾಡಿದವರು ಹಲವರಿದ್ದರೆ, ಮತ್ತೆ ಕೆಲವರು ಸಾಲ ಪಡೆದು ಅಧಿಕ ಲಾಭಾಂಶದ ಆಸೆಗಾಗಿ ಹೂಡಿಕೆ ಮಾಡಿದ್ದರು.
ಉದಯಗಿರಿಯಲ್ಲೇ ಅತ್ಯಂತ ಹೆಚ್ಚು ದೂರು ದಾಖಲಾಗಿದೆ. ಇಲ್ಲಿ 900ಕ್ಕೂ ಅಧಿಕ ದೂರುಗಳು ಬಂದಿದ್ದು, ಮೋಸ ಹೋದ ಹಣದ ಮೊತ್ತ ಸುಮಾರು ₹ 20 ಕೋಟಿಗೂ ಅಧಿಕ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಲ್ಲಿ ಶಾಲಾ ಶಿಕ್ಷಕರು, ಉದ್ಯಮಿಗಳು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಣ್ಣಪುಟ್ಟ ವ್ಯಾಪಾರಸ್ಥರು ಅಳಲು ಹೇಳತೀರದ್ದಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಫೈರೋಜ್‌ಖಾನ್, ‘ಇನ್ನೂ ಬಹಳಷ್ಟು ಮಂದಿ ಮೋಸ ಹೋದವರಿದ್ದಾರೆ. ಅವರೆಲ್ಲ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.