ADVERTISEMENT

ಖಾಸಗಿ ಬಸ್‌ಗಳ ಮಾಲೀಕರಿಂದ ಆಕ್ರೋಶ

ಹೆಚ್ಚಾದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ; ಸಬರ್‌ಬನ್‌ ಬಸ್‌ ನಿಲ್ದಾಣದಿಂದ ಹೊರಟ ಖಾಸಗಿ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:54 IST
Last Updated 19 ಏಪ್ರಿಲ್ 2021, 4:54 IST
ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡ ಖಾಸಗಿ ಬಸ್ ಮಾಲೀಕರು ಪ್ರತಿಭಟನೆ ನಡೆಸಿದರು
ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡ ಖಾಸಗಿ ಬಸ್ ಮಾಲೀಕರು ಪ್ರತಿಭಟನೆ ನಡೆಸಿದರು   

ಮೈಸೂರು: ದಿನದಿಂದ ದಿನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಹೆಚ್ಚಾಗುತ್ತಿದ್ದು, ಖಾಸಗಿ ಬಸ್‌ಗಳಿಗೆ ಬೇಡಿಕೆ ಕುಸಿಯುತ್ತಿದೆ. ಭಾನುವಾರ ಇಲ್ಲಿನ ಗ್ರಾಮಾಂತರ ಘಟಕದಿಂದ ಶೇ 70ಕ್ಕೂ ಅಧಿಕ ಮಂದಿ ಕರ್ತವ್ಯಕ್ಕೆ ಹಾಜರಾದರು. ಇದರಿಂದ ಸಹಜವಾಗಿಯೇ ಕೆಎಸ್‌ಆರ್‌ಟಿಸಿ ಬಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದವು. ಸಾರ್ವಜನಿಕರು ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌
ಗಳನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಖಾಸಗಿ ಬಸ್‌ ಮಾಲೀಕರಿಗೆ ನಿರಾಸೆಯಾಯಿತು.

ಈ ಮಧ್ಯೆ 2 ಖಾಸಗಿ ಬಸ್‌ ನಂತರ 1 ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವಂತೆ ಈ ಹಿಂದೆ ಮಾಡಿಕೊಳ್ಳಲಾದ ಒಪ್ಪಂದವನ್ನು ಮುರಿಯಲಾಗಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಪ್ರವಾಸಿ ಬಸ್‌ ಮಾಲೀಕರ ಸಂಘದ ನೇತೃತ್ವದಲ್ಲಿ ಹಲವು ಬಸ್ ಮಾಲೀಕರು ನಿಲ್ದಾಣದಿಂದ ತಮ್ಮ ಬಸ್‌ಗಳನ್ನು ಹೊರಕ್ಕೆ ತಂದರು. ದೊಡ್ಡಕೆರೆ ಮೈದಾನದಲ್ಲಿ ಬಸ್‌ಗಳನ್ನು ನಿಲ್ಲಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಎ.ವಿ.ಪೃಥ್ವಿರಾಜ್ ಮಾತನಾಡಿ, ‘ಕನಿಷ್ಠ ಪಕ್ಷ 2 ಖಾಸಗಿ ಬಸ್‌ ನಂತರ 1 ಕೆಎಸ್‌ಆರ್‌ಟಿಸಿ ಬಸ್‌ಗೆ ಅವಕಾಶ ಕೊಡಬೇಕು. ಎಲ್ಲ ಕಡೆಗೂ ಕೆಎಸ್‌ಆರ್‌ಟಿಸಿ ಬಸ್‌ಗಳೇ ಸಂಚರಿಸಿದರೆ, ನಮಗೆ ನಷ್ಟವಾಗುತ್ತದೆ’ ಎಂದು ಕಿಡಿಕಾರಿದರು.

ADVERTISEMENT

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ‘ಭಾನುವಾರ ಶೇ 70ಕ್ಕೂ ಅಧಿಕ ಅಂದರೆ 1,600 ಮಂದಿ ನೌಕರರು ಕರ್ತವ್ಯಕ್ಕೆ ಬಂದಿದ್ದಾರೆ. ಅವರಿಗೆ ಕೆಲಸ ನೀಡಬೇಕಿರುವುದು ನಮ್ಮ ಜವಾಬ್ದಾರಿ. ಸಾರ್ವಜನಿಕರು ಖಾಸಗಿ ಬಸ್‌ಗಳತ್ತ ಮುಖ ಮಾಡದೇ ಕೆಎಸ್‌ಆರ್‌ಟಿಸಿ ಬಸ್‌ಗೆ ಹತ್ತುತ್ತಿದ್ದಾರೆ. ನಾವು ಖಾಸಗಿ ಬಸ್‌ಗಳನ್ನು ಹೊರಕ್ಕೆ ಕಳುಹಿಸಿಲ್ಲ. ಬಯಸಿದ ಬಸ್‌ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರು ಸ್ವತಂತ್ರರು’ ಎಂದರು.

ಕೆಎಸ್‌ಆರ್‌ಟಿಸಿ ನಗರ ಘಟಕದಲ್ಲಿ ಭಾನುವಾರ ಶೇ 74ಕ್ಕೂ ಅಧಿಕ ಅಂದರೆ 1,400 ಮಂದಿ ಕೆಲಸಕ್ಕೆ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.