ADVERTISEMENT

ಆಡಳಿತ ಮಂಡಳಿ ಚೆನ್ನಾಗಿದ್ದರೆ ಉತ್ತಮ ಕೆಲಸ: ಎಸ್.ಆರ್. ಪಾಟೀಲ

ನೊಳಂಬ ಲಿಂಗಾಯತ ಸಂಘ ಹಾಸ್ಟೆಲ್‌ 2ನೇ ಮಹಡಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 6:26 IST
Last Updated 24 ಜೂನ್ 2024, 6:26 IST
ನೊಳಂಬ ಲಿಂಗಾಯತ ಸಂಘ ಕೇಂದ್ರ ಸಮಿತಿ ಹಾಗೂ ಮೈಸೂರು ಉಪ ಸಮಿತಿಯಿಂದ ಗಂಗೋತ್ರಿ ಬಡಾವಣೆಯ ಗುರುಸಿದ್ಧರಾಮೇಶ್ವರ ಲಿಂಗಾಯತ ಬಾಲಕರ ಹಾಸ್ಟೆಲ್‌ನಲ್ಲಿ ನೂತನವಾಗಿ ನಿರ್ಮಿಸಿರುವ 2ನೇ ಮಹಡಿ ಕಟ್ಟಡದ ಉದ್ಘಾಟನೆಯನ್ನು ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ ಭಾನುವಾರ ನೆರವೇರಿಸಿದರು - ಪ್ರಜಾವಾಣಿ ಚಿತ್ರ
ನೊಳಂಬ ಲಿಂಗಾಯತ ಸಂಘ ಕೇಂದ್ರ ಸಮಿತಿ ಹಾಗೂ ಮೈಸೂರು ಉಪ ಸಮಿತಿಯಿಂದ ಗಂಗೋತ್ರಿ ಬಡಾವಣೆಯ ಗುರುಸಿದ್ಧರಾಮೇಶ್ವರ ಲಿಂಗಾಯತ ಬಾಲಕರ ಹಾಸ್ಟೆಲ್‌ನಲ್ಲಿ ನೂತನವಾಗಿ ನಿರ್ಮಿಸಿರುವ 2ನೇ ಮಹಡಿ ಕಟ್ಟಡದ ಉದ್ಘಾಟನೆಯನ್ನು ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ ಭಾನುವಾರ ನೆರವೇರಿಸಿದರು - ಪ್ರಜಾವಾಣಿ ಚಿತ್ರ   

ಮೈಸೂರು: ‘ಯಾವುದೇ ಸಂಘದ ಆಡಳಿತ ಮಂಡಳಿ ಚೆನ್ನಾಗಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ನೊಳಂಬ ಲಿಂಗಾಯತ ಸಂಘ ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ನೊಳಂಬ ಲಿಂಗಾಯತ ಸಂಘ ಕೇಂದ್ರ ಸಮಿತಿ ಹಾಗೂ ಮೈಸೂರು ಉಪ ಸಮಿತಿಯಿಂದ ನಗರದ ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನದ ರಸ್ತೆಯಲ್ಲಿರುವ ಗುರುಸಿದ್ಧರಾಮೇಶ್ವರ ಲಿಂಗಾಯತ ಬಾಲಕರ ಹಾಸ್ಟೆಲ್‌ನಲ್ಲಿ ನೂತನವಾಗಿ ನಿರ್ಮಿಸಿರುವ 2ನೇ ಮಹಡಿ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.

‘ಒಂದೊಂದೇ ಹೆಜ್ಜೆ ಇಡುತ್ತಾ ಹೋದರೆ ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ನಮ್ಮ ಸಂಘದಿಂದ ನಡೆದಿರುವ ರಚನಾತ್ಮಕ ಕಾರ್ಯಕ್ರಮಗಳೆ ಉದಾಹರಣೆಯಾಗಿವೆ. ದಾನಿಗಳ ನೆರವಿನಿಂದ ಇಲ್ಲಿನ ಹಾಸ್ಟೆಲ್ ‌ಉತ್ತಮ ರೂಪವನ್ನು ಪಡೆದುಕೊಂಡಿದೆ’ ಎಂದರು.

ADVERTISEMENT

‘ಸಂಘದಿಂದ ಹಿಂದಿನಿಂದಲೂ ಕುಲಗುರು ಗುರುಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಯೋಜಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷ ಅದರ ವೈಭವ ಜಾಸ್ತಿಯಾಗುತ್ತಲೇ ಹೋಗುತ್ತಿದೆ. ಅಂತೆಯೇ, ಶಿಕ್ಷಣಕ್ಕೂ ಆದ್ಯತೆ ನೀಡಿದ್ದು ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್‌ ಸೌಲಭ್ಯವನ್ನು ಕಲ್ಪಿಸುತ್ತಾ ಬಂದಿದ್ದೇವೆ. ಬೆಂಗಳೂರಿನಲ್ಲಿರುವ ನಮ್ಮ ವಿದ್ಯಾರ್ಥಿನಿಯರ ನಿಲಯವು ಸಮಾಜದ ಉಪಪಂಗಡಗಳಲ್ಲೇ ಯಾರೂ ನಿರ್ಮಿಸದ ರೀತಿಯಲ್ಲಿದೆ’ ಎಂದು ಹೇಳಿದರು.

ಸಮಾಜದವರು ತಿಳಿ ಹೇಳಬೇಕು: ‘ಸಂಘವನ್ನು ದಾನ–ದಾನಿಗಳ ನೆರವಿನಿಂದ ಚೆನ್ನಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆಡಳಿತ ಮಂಡಳಿಯು ಅಡ್ಡ ದಾರಿಗೆ ಹೋಗುತ್ತಿರುವುದು ಕಂಡು ಬಂದಲ್ಲಿ ಸಮಾಜದವರು ಸರಿದಾರಿಗೆ ಎಳೆದು ತರಬೇಕು; ತಿದ್ದಿ ಬುದ್ಧಿ ಹೇಳಬೇಕು’ ಎಂದರು.

ನೊಳಂಬ ಲಿಂಗಾಯತ ಸಂಘ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ, ಸಂಘದ ಮಾಜಿ ಅಧ್ಯಕ್ಷ ಎಸ್.ಎಂ. ನಾಗರಾಜು, ಉಪಾಧ್ಯಕ್ಷ ಎಚ್‌.ರಾಮಲಿಂಗಪ್ಪ, ಕಾರ್ಯದರ್ಶಿ ಕೆ.ಬಿ. ಶಶಿಧರ್, ಖಜಾಂಚಿ ಕೆ.ಬಿ. ರುದ್ರಪ್ಪ, ಸಹ ಕಾರ್ಯದರ್ಶಿಗಳಾದ ಬಿ. ಕುಬೇರಪ್ಪ, ಬಿ.ಎಸ್. ಧನಂಜಯ, ಕಾಮಗಾರಿ ಸಮಿತಿಯ ಅಧ್ಯಕ್ಷ ಬಿ.ಚಿದಾನಂದ, ಸದಸ್ಯ ಎಂ.ಎನ್. ಪ್ರಸಾದ್, ಮೈಸೂರು ಉಪ ಸಮಿತಿ ಅಧ್ಯಕ್ಷ ಬಿ.ಎಸ್. ಗುರುಪಾದಸ್ವಾಮಿ ಹಾಗೂ ಕಾರ್ಯದರ್ಶಿ ಜಿ.ಸಿ. ರಾಜಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.