ಹುಣಸೂರು: ‘ರಾಜ್ಯಾದ್ಯಂತ ರೈತ ಸಂಘಟನೆ ಬಲವರ್ಧನೆಗೊಳಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೆ ಒಂದು ತಾಲ್ಲೂಕಿನ ಗ್ರಾಮದಲ್ಲಿ ರೈತ ಶಾಖೆ ಆರಂಭಿಸಿ ಯುವ ರೈತರಲ್ಲಿ ಸಂಘಟನೆ ಜಾಗೃತಿ ಮೂಡಿಸುವ ಅಭಿಯಾನ ನಡೆದಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಹುಣಸೂರು ತಾಲ್ಲೂಕಿನ ಮುಳ್ಳೂರಿನಲ್ಲಿ ರೈತ ಸಂಘ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ರೈತ ಚಳವಳಿ ಭವಿಷ್ಯದ ಕುಡಿಗಳಿಗೆ ತಿಳಿಸುವ ಅಗತ್ಯತೆ ಎದುರಾಗಿದೆ. ಆ ದಿಕ್ಕಿನಲ್ಲಿ ತಳಹಂತದಲ್ಲಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ನಡೆದಿದೆ ಎಂದರು.
ಒಂದು ಹಂತದಲ್ಲಿ ರೈತ ಸಂಘ ರಾಷ್ಟ್ರದ ಗಮನ ಸೆಳೆದ ಹೋರಾಟಗಳಲ್ಲಿ ಮುಂಚುಣಿಯಲ್ಲಿತ್ತು. ಹಲವು ಏರುಪೇರುಗಳಿಂದಾಗಿ ಚಳವಳಿ ಸ್ಪರೂಪ ಬದಲಾಗಿತ್ತು. ಈಗ ಮತ್ತೆ ಯುವರೈತ ಸಮುದಾಯದೊಂದಿಗೆ ಸಂಘಟನೆ ಬಲವರ್ಧನೆಗೊಳಿಸಿ ರೈತ ಧ್ವನಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ತಿಳಿಸಿದರು.
ತಂಬಾಕು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆದ ರೈತನಿಗೆ ವೈಜ್ಞಾನಿಕ ದರ ಸಿಗದೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾನೆ. ಈ ಸಂಬಂಧ ಕಟ್ಟೆಮಳಲವಾಡಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತಂಬಾಕು ಹರಾಜು ಮಾರುಕಟ್ಟೆ ಅಧ್ಯಕ್ಷರ ಗಮನ ಸೆಳೆದಿದೆ. ಈ ತಿಂಗಳ ಅಂತ್ಯದೊಳಗೆ ದರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಹೋರಾಟ: ರೈತ ಸಂಘದ ಹೋರಾಟದ ಬಲದಿಂದಾಗಿ ರಾಜ್ಯದಲ್ಲಿ ಉಚಿತ ವಿದ್ಯುತ್ ಮತ್ತು ರೈತ ಸಾಲಾ ಮನ್ನಾ ಲಾಭ ಪ್ರತಿಯೊಬ್ಬ ರೈತನಿಗೆ ಸಿಕ್ಕಿದೆ. ಇದೇ ಮಾದರಿಯಲ್ಲಿ ಹೋರಾಟ ನಡೆಸುವುದರಿಂದ ಪ್ರತಿಯೊಂದು ಬೆಳೆಗೂ ವೈಜ್ಞಾನಿಕ ಮತ್ತು ಸ್ವಾಮಿನಾಥನ್ ವರದಿ ಆಧರಿಸಿದ ದರ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉಂಡವಾಡಿ ಚಂದ್ರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಬಸವರಾಜೇಗೌಡ, ವಿಷಕಂಠಪ್ಪ, ನೀತಾ, ಶಿವಕುಮಾರ್, ಪುಟ್ಟಣ್ಣಯ್ಯ, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.