ADVERTISEMENT

ಮೈಸೂರು: ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ ದರ ಹೆಚ್ಚಳ

ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 4:02 IST
Last Updated 16 ಡಿಸೆಂಬರ್ 2021, 4:02 IST
ಮೈಸೂರು ಮೃಗಾಲಯ
ಮೈಸೂರು ಮೃಗಾಲಯ   

ಮೈಸೂರು: ಮೃಗಾಲಯದ ಪ್ರಾಣಿ–ಪಕ್ಷಿಗಳ ದತ್ತು ಸ್ವೀಕಾರ ದರವನ್ನು ಹೆಚ್ಚಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ 149ನೇ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮೈಸೂರು ಮೃಗಾಲಯದ ಕೂರ್ಗಳ್ಳಿ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರ ಆವರಣದಲ್ಲಿ ಬುಧವಾರ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹಾದೇವಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.

ಮೈಸೂರು ಮೃಗಾಲಯದ ದತ್ತು ಸ್ವೀಕಾರ ಯೋಜನೆಯಡಿ ವರ್ಷದ ಮಟ್ಟಿಗೆ ಆನೆ ದತ್ತು ಪಡೆಯಲು 2022ರ ಜ.1ರಿಂದ ₹ 3 ಲಕ್ಷ ನೀಡಬೇಕು. ಈ ಹಿಂದೆ ₹ 1.75 ಲಕ್ಷವಿದ್ದರೆ ಸಾಕಿತ್ತು. ಉಳಿದ ಪ್ರಾಣಿಗಳ ದತ್ತು ಸ್ವೀಕಾರ ದರವನ್ನೂ ಹೆಚ್ಚಿಸಲಾಗಿದೆ. ಅಲ್ಲದೇ, ಒಂದು ದಿನ ಅಥವಾ ತಿಂಗಳ ಮಟ್ಟಿಗೂ ದತ್ತು ಸ್ವೀಕರಿಸಬಹುದು.

ADVERTISEMENT

ಶಿವಮೊಗ್ಗ ಮೃಗಾಲಯ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಸಫಾರಿ ದರವನ್ನೂ ಹೆಚ್ಚಿಸಲಾಗಿದೆ. ಕೆಎಸ್‌ಟಿಡಿಸಿ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನ ಸಹಕಾರದೊಂದಿಗೆ ‘ವನಶ್ರೀ’ ಉಪಾಹಾರ ಗೃಹ ಉನ್ನತೀಕರಿಸಲು ತೀರ್ಮಾನಿಸಲಾಯಿತು. ಅರಣ್ಯ ಮ್ಯೂಸಿಯಂ ಹಾಗೂ ಪ್ರಕೃತಿ ಮ್ಯೂಸಿಯಂ ನಿರ್ಮಿಸಲು ಸಭೆಯಲ್ಲಿ ನಿರ್ಧಾರ
ಕೈಗೊಳ್ಳಲಾಗಿದೆ.

ಪ್ರಾಣಿ ವಿನಿಮಯದಡಿ ಮೈಸೂರು ಮೃಗಾಲಯಕ್ಕೆ ದೇಶವಿದೇಶಗಳಿಂದ 13 ಪ್ರಾಣಿಗಳನ್ನು ತರಲು ಒಪ್ಪಿಗೆ ದೊರೆತಿದೆ. ಹಂಪಿ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಎರಡು ನೀರು ಕುದುರೆ ಕಳುಹಿಸಿಕೊಡಲು ಅನುಮೋದನೆ ನೀಡಲಾಯಿತು. ಬೆಳಗಾವಿ ಮೃಗಾಲಯ ಉದ್ಘಾಟನೆಗೆ ಮುಖ್ಯಮಂತ್ರಿಯ ಕಾಲಾವಕಾಶ ಕೋರಲಾಗಿದೆ. ಮೈಸೂರು ಮೃಗಾಲಯದ ಅಂಡರ್‌ಪಾಸ್‌ ಉದ್ಘಾಟಿಸಲು ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಮೈಸೂರು ಮೃಗಾಲಯದಲ್ಲಿ ಹೊಸದಾಗಿ ಗೊರಿಲ್ಲ ಮನೆ ನಿರ್ಮಿಸಲು ಇನ್ಫೊಸಿಸ್‌ ಪ್ರತಿಷ್ಠಾನ ನೀಡಲಿರುವ ₹ 3.60 ಕೋಟಿ, ಒರಾಂಗುಟಾನ್‌ ಪ್ರಾಣಿ ಮನೆ ನಿರ್ಮಿಸಲು ಆರ್‌ಬಿಐ ನೋಟು ಮುದ್ರಣಾಲಯ ನೀಡಲಿರುವ ₹ 99 ಲಕ್ಷ, ಕರಡಿ ಮನೆ ನಿರ್ಮಾಣಕ್ಕೆ ನೀಡಲಿರುವ ₹ 91 ಲಕ್ಷ ಬಳಸಿಕೊಳ್ಳಲು ಅನುಮೋದನೆ ನೀಡಲಾಯಿತು ಎಂದು ಮಹಾದೇವಸ್ವಾಮಿ
ಹೇಳಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್‌ ಗೋಗಿ, ಅರಣ್ಯ ಮತ್ತು ಪರಿಸರ ಜೀವ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ ಹಾಗೂ ರಾಜ್ಯದ 9 ಮೃಗಾಲಯಗಳ ನಿರ್ದೇಶಕರು ಭಾಗವಹಿಸಿದ್ದರು.

ಆದಾಯ ₹ 63 ಕೋಟಿ; ಖರ್ಚು ₹ 56 ಕೋಟಿ: 9 ಮೃಗಾಲಯಗಳಿಂದ 2020–21ರಲ್ಲಿ ಪ್ರವೇಶ ಶುಲ್ಕ ಹಾಗೂ ಇತರ ಮೂಲಗಳಿಂದ ಪ್ರಾಧಿಕಾರಕ್ಕೆ ಒಟ್ಟು ₹ 63.16 ಕೋಟಿ ಆದಾಯ ಬಂದಿದ್ದು, ₹ 56.85 ಕೋಟಿ ಖರ್ಚು ಮಾಡಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿ ₹ 31.43ಕೋಟಿಯನ್ನು ಮೃಗಾಲಯಗಳಲ್ಲಿ 343 ಪ್ರಾಣಿ ಮನೆ ನಿರ್ಮಾಣ ಮಾಡಲು ಬಳಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.