ADVERTISEMENT

ಎಚ್.ಡಿ.ಕೋಟೆ | ಕಬಿನಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 16:55 IST
Last Updated 26 ಜುಲೈ 2023, 16:55 IST
   

ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ 25 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಜಲಾಶಯದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕೇರಳ ಭಾಗದ ಪ್ರಮುಖ ಅಣೆಕಟ್ಟೆಗಳಾದ ಬಾಣಸುರ ಮತ್ತು ಇತರೆ ಅಣೆಕಟ್ಟೆಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಣೆಕಟ್ಟೆಗಳ ಭರ್ತಿಯಾಗುವ ಮುನ್ಸೂಚನೆ ಬಗ್ಗೆ ಹಾಗೂ ಹೆಚ್ಚಿನ ಮಳೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದಿಢೀರ್ ಹೆಚ್ಚು ಮಳೆಯಾದರೆ ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆ ಬರುತ್ತದೆ ಎಂದು ಜಲಾಶಯದ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಜನಾರ್ದನ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ಒಳಹರಿವು ಜಾಸ್ತಿಯಾಗಿದ್ದರಿಂದ ಜಲಾಶಯದ ಭದ್ರತೆಯ ದೃಷ್ಟಿಯಿಂದ 21 ಸಾವಿರ ಕ್ಯುಸೆಕ್ ಹೆಚ್ಚು ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ಅಣೆಕಟ್ಟಿನ ಮುಂಭಾಗದ ಸೇತುವೆ ಮುಳುಗಡೆ ಆಗಿದೆ. ಜಲಾಶಯ ಭರ್ತಿ ಆಗಲು ಕೇವಲ 1.8 ಅಡಿ ಬಾಕಿ ಇದೆ.

ADVERTISEMENT

ಇನ್ನೂ ಮೂರು ನಾಲ್ಕು ದಿನಗಳ ಕಾಲ ವಯನಾಡು ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಜಲಾಶಯಕ್ಕೆ ಮುಂದಿನ ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬರಲಿದೆ. ಹಾಗಾಗಿ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇದೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.

ಹ್ಯಾಂಡ್‌ಪೋಸ್ಟ್‌ನಿಂದ ಬಿದರಹಳ್ಳಿ ಮಾರ್ಗವಾಗಿ ತೆರಳುವ ಗ್ರಾಮಗಳಿಗೆ ಲಘು ವಾಹನಗಳಿಗೆ ಅಣೆಕಟ್ಟಿನ ಮೇಲೆ ಅವಕಾಶ ಕಲ್ಪಿಸಲಾಗಿದೆ. ಬಾರಿ ವಾಹನಗಳಿಗೆ ಪರ್ಯಾಯವಾಗಿ ಸರಗೂರು ಮಾರ್ಗವಾಗಿ ತೆರಳಬೇಕಾದ ಅನಿವಾರ್ಯತೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.