ADVERTISEMENT

ಯುದ್ಧ ಟ್ಯಾಂಕರ್‌ನಲ್ಲಿ ಬಳಸುವ ಎಂಜಿನ್ ಪರೀಕ್ಷೆ

ಮೈಸೂರಿನ ಬಿಇಎಂಎಲ್‌ ಆವರಣದಲ್ಲಿ ನಡೆದ ಕಾರ್ಯಕ್ರಮ, ರಕ್ಷಣಾ ಕಾರ್ಯದರ್ಶಿ ಭಾಗಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:07 IST
Last Updated 20 ಮಾರ್ಚ್ 2024, 16:07 IST
ಮೈಸೂರಿನ ಬಿಇಎಂಎಲ್‌ ಆವರಣದಲ್ಲಿ ಬುಧವಾರ ನಡೆದ ಸ್ವದೇಶಿ ‘1,500 ಎಚ್‌ಪಿ ಪ್ರೋಟೊಟೈಪ್‌ ಎಂಜಿನ್’ ಪ್ರಯೋಗ ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರೊಂದಿಗೆ ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು
ಮೈಸೂರಿನ ಬಿಇಎಂಎಲ್‌ ಆವರಣದಲ್ಲಿ ಬುಧವಾರ ನಡೆದ ಸ್ವದೇಶಿ ‘1,500 ಎಚ್‌ಪಿ ಪ್ರೋಟೊಟೈಪ್‌ ಎಂಜಿನ್’ ಪ್ರಯೋಗ ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರೊಂದಿಗೆ ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು   

ಮೈಸೂರು: ಸಾರ್ವಜನಿಕ ವಲಯದ ಬಿಇಎಂಎಲ್‌ನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ‘1,500 ಎಚ್‌ಪಿ ಪ್ರೋಟೊಟೈಪ್‌ ಎಂಜಿನ್’ ಅನ್ನು ಬುಧವಾರ ಇಲ್ಲಿನ ಘಟಕದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಇದನ್ನು ಮುಖ್ಯ ಯುದ್ಧ ಟ್ಯಾಂಕರ್‌ನಲ್ಲಿ ಬಳಸಲು ಯೋಜಿಸಲಾಗಿದೆ. ಬಿಇಎಂಎಲ್‌ನ ಎಂಜಿನ್ ವಿಭಾಗದ ಆವರಣದಲ್ಲಿ ನಡೆದ ಪರೀಕ್ಷಾರ್ಥ ಪ್ರಕ್ರಿಯೆ (ಫೈರಿಂಗ್) ಅನ್ನು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನ ಸಾಕಾರಗೊಳಿಸುವತ್ತ ಮಹತ್ವದ್ದಾಗಿದೆ. ಅಲ್ಲದೇ, ಪರಿವರ್ತನೆಗೂ ನಾಂದಿ ಹಾಡುತ್ತದೆ. ಜಾಗತಿಕ ಮಟ್ಟದಲ್ಲಿ ಸೇನೆಯ ಸಾಮರ್ಥ್ಯದ ವೃದ್ಧಿಗೂ ಕಾರಣವಾಗಲಿದೆ. ಸ್ವಾವಲಂಬಿ ಭಾರತದ ಆಶಯದ ಸಾಕಾರಕ್ಕೆ ಕೊಡುಗೆ ನೀಡುತ್ತದೆ’ ಎಂದು ತಿಳಿಸಿದರು.

ADVERTISEMENT

‘ಈ ಎಂಜಿನ್‌ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಸಿಆರ್‌ಡಿಐ ಇಂಧನ ವ್ಯವಸ್ಥೆಯೊಂದಿಗೆ ಎಲೆಕ್ಟ್ರಾನಿಕ್ ನಿಯಂತ್ರಣ, ಸ್ವಯಂ-ಗಾಳಿ ಫಿಲ್ಟರ್ ಸ್ವಚ್ಛಗೊಳಿಸುವ ಎಲೆಕ್ಟ್ರಾನಿಕ್ ಎಚ್ಚರಿಕೆ ನಿಯಂತ್ರಣ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. 5ಸಾವಿರ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಂತಹ ವಿಷಮ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸುವ, ಕಡಿಮೆ ತಾಪಮಾನದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ’ ಎಂದು ಮಾಹಿತಿ ನೀಡಿದರು.

‘ಈ ಎಂಜಿನ್‌ ತಯಾರಿಕೆ ಪ್ರಕ್ರಿಯೆ 2017ರಲ್ಲಿ ಆರಂಭಗೊಂಡಿತ್ತು. ಕೋವಿಡ್ ಪರಿಸ್ಥಿತಿ ಎದುರಾದ ಕಾರಣದಿಂದಾಗಿ ವಿಳಂಬವಾಯಿತು. ಇಲ್ಲದಿದ್ದರೆ ಹಿಂದೆಯೇ ಈ ಕೆಲಸ ಮುಗಿದಿರುತ್ತಿತ್ತು. ಮುಂದಿನ ಒಂದು ವರ್ಷದಲ್ಲಿ ಅಂತಹ 20 ಎಂಜಿನ್‌ಗಳನ್ನು ಮತ್ತಷ್ಟು ಪ್ರಯೋಗಗಳಿಗೆ ಒಳಪಡಿಸಲಾಗುವುದು’ ಎಂದು ಹೇಳಿದರು.

‘ಎಂಜಿನ್‌ನ ಕಾರ್ಯಕ್ಷಮತೆ, ಬಾಳಿಕೆ ಮತ್ತು ವಿಶ್ವಾಸಾರ್ಹತೆಗಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಯಶಸ್ವಿಯಾದಲ್ಲಿ, ಭಾರತೀಯ ಸೇನೆಯು ಅದನ್ನು ತಮ್ಮ ಶಸ್ತ್ರಸಜ್ಜಿತ ವಾಹನಗಳಲ್ಲಿ ಅಳವಡಿಸುತ್ತದೆ. ಈ ಎಂಜಿನ್‌ ಶೇ 90ರಷ್ಟು ಭಾರತೀಯ ನಿರ್ಮಿತವಾದುದಾಗಿದೆ’ ಎಂದು ತಿಳಿಸಿದರು.

‘ಖಾಸಗಿ ವಲಯದೊಂದಿಗೆ ಸ್ಪರ್ಧಿಸಲು ಬಿಇಎಂಎಲ್‌ನಂತಹ ಸಂಸ್ಥೆಗಳಲ್ಲಿ ಗುಣಮಟ್ಟ, ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದಕತೆಯ ಪ್ರಮಾಣ ಹೆಚ್ಚಾಗುವ ಅಗತ್ಯವಿದೆ’ ಎಂದು ಗಿರಿಧರ್ ಹೇಳಿದರು.

‘1,500 ಎಚ್‌ಪಿ ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಬಿಇಎಂಎಲ್‌ನ ನೌಕರರು ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ಬಿಇಎಂಎಲ್‌ನಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಗರಿಷ್ಠ ಬೆಂಬಲ ನೀಡಲಿದೆ. ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದಕತೆ ವೃದ್ಧಿಗೆ ಸಹಕಾರ ಕೊಡಲಿದೆ. ನೌಕರರು ಬದ್ಧತೆಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಾಗಲಿದೆ’ ಎಂದರು.

‘ಮುಂದಿನ ದಶಕವು ಬಾಹ್ಯಾಕಾಶ ಕ್ಷೇತ್ರ ಮತ್ತು ರಕ್ಷಣಾ ಉತ್ಪಾದನಾ ವಲಯಕ್ಕೆ ಮಹತ್ವದ್ದಾಗಿದೆ. ಮುಂದಿನ ವರ್ಷಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಉಪಗ್ರಹಗಳು, ಹಡಗುಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಇಎಂಎಲ್‌ ಸಿಇಒ ಶಾಂತನು ರಾಯ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.