ಮೈಸೂರು: ‘ಇಂದಿರಾ ಗಾಂಧಿ ಭಾರತದ ಹಿತ ಕಾಪಾಡಲು ಅನೇಕ ಸವಾಲನ್ನು ಎದುರಿಸಿದರು. ಅವರ ಹೋರಾಟ ನಮಗೆ ಸ್ಫೂರ್ತಿ’ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷವು ಆಯೋಜಿಸಿದ್ದ ಇಂದಿರಾ ಗಾಂಧಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಉಳಿಯದೆ, ಚಳವಳಿಗಳ ನೇತೃತ್ವ ವಹಿಸಲು ಇಂದಿರಾ ಗಾಂಧಿಯವರಂಥ ಪಕ್ಷದ ನೇತಾರರು ಕಾರಣ’ ಎಂದರು.
‘ಬಾಂಗ್ಲಾ ಯುದ್ಧದ ಗೆಲುವಿಗಾಗಿ ಇಂದಿರಾ ಗಾಂಧಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ದೊರೆಯಿತು. ಅಮೆರಿಕ ಮದರ್ ಪ್ರಶಸ್ತಿ ನೀಡಿತು. ಫ್ರಾನ್ಸ್ ಜಗತ್ತಿನ ಪ್ರಭಾವಿ ನಾಯಕಿ ಗೌರವ ನೀಡಿತು. ಇಂದಿರಾ ಗಾಂಧಿ ಅವರನ್ನು ಎಷ್ಟೇ ಟೀಕಿಸಿದರೂ ಅವರ ಸಾಧನೆಯನ್ನು ಅಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ದೇಶ ವಿಭಜನೆಯಾದಾಗ ಆಹಾರದ ಕೊರತೆಯಿತ್ತು. ಕಿತ್ತು ತಿನ್ನುವ ಬಡತನ, ಭೀಕರ ಬರಗಾಲದಿಂದ ದೇಶ ನಲುಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಮಸ್ಯೆ ಇತ್ಯರ್ಥಪಡಿಸುವ ಮತ್ತು ನೆರೆಯ ದೇಶಗಳಿಂದ ಯುದ್ಧದ ಭೀತಿಯಿತ್ತು. ಈ ಸಮಸ್ಯೆಯನ್ನು ಗಾಂಧಿ ಕುಟುಂಬ ಯಶಸ್ವಿಯಾಗಿ ನಿಭಾಯಿಸಿತು’ ಎಂದರು.
‘ಆದರೆ ಈಗ ಕಾಲ ಬದಲಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ. ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೈ ಕಟ್ಟಿ ಕುಳಿತಿದ್ದಾರೆ. ದೇಶದ ಸಾರ್ವಭೌಮತೆ ಮತ್ತು ಸುರಕ್ಷತೆಗೆ ಧಕ್ಕೆ ಬಂದಾಗ ತುರ್ತು ಪರಿಸ್ಥಿತಿ ಘೋಷಿಸುವಂತೆ ಭಾರತದ ಸಂವಿಧಾನವೇ ಹೇಳಿದ್ದು, ಸದ್ಯ ಆ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಇಂದಿರಾಗಾಂಧಿ, ಸೋನಿಯಾ ಗಾಂಧಿ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದರು. ಅವರು ಎದುರಿಸಿದ ಸವಾಲುಗಳನ್ನು ಇಂದು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಎದುರಿಸುತ್ತಿದ್ದಾರೆ. ಅವರಿಗೆ ಕಾರ್ಯಕರ್ತರು ಜೊತೆಯಾಗಿದ್ದು ಬಲ ತುಂಬಬೇಕು’ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹಮದ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅದೇ ಮಾತನ್ನು ರಾಧಿಕಾ ಕುಮಾರಸ್ವಾಮಿ ಹೇಳಿದರೆ ಯಾವ ತೊಂದರೆ ಇಲ್ಲ. ಮಾಧ್ಯಮಗಳ ಇಬ್ಬಗೆ ನೀತಿ ಅರ್ಥವಾಗುತ್ತಿಲ್ಲ.ತೇಜಸ್ವಿನಿ ಗೌಡ, ಕೆಪಿಸಿಸಿ ವಕ್ತಾರೆ
‘ಬಿಜೆಪಿಯವರು ಮನೆಗೆ ಹೋಗುವುದಿಲ್ಲ, ಕಾಂಗ್ರೆಸ್‌ನವರು ಬೀದಿಗೆ ಹೋಗುವುದಿಲ್ಲ ಎಂಬ ಮಾತಿದೆ. ಎಲ್ಲಾ ಕಾರ್ಯಕರ್ತರು ಜನರೊಂದಿಗೆ ಬೆರೆಯಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಮನವರಿಕೆ ಮಾಡಬೇಕು. ಅಧ್ಯಯನ ಶಿಬಿರಗಳನ್ನು ಆಯೋಜಿಸಿ ಬಲಿಷ್ಠ ಕಾರ್ಯಕರ್ತರ ಪಡೆಯನ್ನು ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಂಸದ ಶಿವಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್, ಮುಖಂಡರಾದ ಎಂ. ಶಿವಣ್ಣ, ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಈಶ್ವರ್ ಚಕ್ಕಡಿ, ಡೈರಿ ವೆಂಕಟೇಶ್, ಸೇವಾದಳದ ಗಿರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.