ADVERTISEMENT

ಡೆಂಗಿ ತಡೆಗೆ ಕ್ರಮ: ಅಧಿಕಾರಿಗಳಿಗೆ ಸೂಚನೆ

ಸಭೆ ನಡೆಸಿದ ಶಾಸಕ ಜಿ.ಟಿ. ದೇವೇಗೌಡ; ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:06 IST
Last Updated 11 ಜುಲೈ 2024, 14:06 IST
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಮಾರಕವಾಗಿ ಪರಿಣಮಿಸಿರುವ ಡೆಂಗಿ ತಡೆಗೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸೊಳ್ಳೆಗಳಿಂದ ರೋಗ ಹರಡುತ್ತಿರುವುದರಿಂದ ಟ್ಯಾಂಕ್‌ಗಳಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ನೀರು ಬದಲಿಸಬೇಕು. ಯಾವುದೇ ಜ್ವರ ಬಂದಿದ್ದರೂ ರಕ್ತ ಪರೀಕ್ಷೆ ಮಾಡಿಸುವುದನ್ನು ಮರೆಯಬಾರದು. ಸಾರ್ವಜನಿಕರಿಗೆ ಈ ಸಂಬಂಧ ಸೂಕ್ತ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಚರಂಡಿಗಳಲ್ಲಿ, ಮನೆಗಳ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗುವ ರೀತಿಯಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ವಹಿಸಬೇಕು. ರಸ್ತೆ ಬದಿಯಲ್ಲಿ ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕಸವನ್ನು ಪ್ರತಿ ಮನೆಯಿಂದ ಸಂಗ್ರಹಿಸುವ ಕೆಲಸವಾಗಬೇಕು. ಯಾವುದೇ ಜ್ವರ ಅಥವಾ ಡೆಂಗಿ ಪಾಸಿಟಿವ್ ಕಂಡು ಬಂದರೆ ಸ್ವಯಂ ಪ್ರೇರಿತವಾಗಿ ಚಿಕಿತ್ಸೆ ಪಡೆಯದೆ, ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಶಾಲೆ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕ್ರಮ ಕೈಗೊಳ್ಳಬೇಕು. ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಮನೆ– ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

ಜಲಜೀವನ ಮಿಷನ್ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಅವರು, ‘ದೊಡ್ಡಮಾರಗೌಡನಹಳ್ಳಿ, ಧನಗಳ್ಳಿ, ಇಲವಾಲ ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ಯಾವ ಗ್ರಾಮದಲ್ಲಿ ಜೆ.ಜೆ.ಎಂ. ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂಬ ವರದಿಯನ್ನು ನೀಡಬೇಕು. ಶುದ್ಧ  ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿಯನ್ನೂ ತಿಳಿಸಬೇಕು. ಉದ್ಬೂರು ಗ್ರಾಮದಲ್ಲಿ ಹೆಚ್ಚುವರಿಯಾಗಿ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಟ್ಯಾಂಕ್ ನಿರ್ಮಾಣ ಮಾಡಲು ಕಲ್ಯಾಣಿ ನಗರ, ಪುಟ್ಟೇಗೌಡ ಬಡಾವಣೆ, ರವಿಶಂಕರ್ ಬಡಾವಣೆಗಳಲ್ಲಿ ಸ್ಥಳ ನೀಡಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರಿಧರ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ಟಿಎಚ್‌ಒ ಡಾ.ಪುಟ್ಟತಾಯಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.