ADVERTISEMENT

ಮಾನವೀಯ ಸಂಬಂಧಕ್ಕೆ ಮಹತ್ವ ನೀಡಿ: ವೀರೆಂದ್ರ ಹೆಗ್ಗಡೆ

ಪ್ರಭಿಜ್ಞಾನ್‌ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 16:06 IST
Last Updated 5 ಏಪ್ರಿಲ್ 2024, 16:06 IST
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಡಿ.ವೀರೆಂದ್ರ ಹೆಗ್ಗಡೆ ಉದ್ಘಾಟಿಸಿದರು. ಪ್ರೊ.ಸಾಯಿನಾಥ್‌ ಮಲ್ಲಿಗೆಮಾಡು, ನಯನಕುಮಾರಿ, ಪ್ರೊ.ಕೆ.ಎಸ್‌. ಸುಕೃತಾ, ಪ್ರೊ.ಜ್ಯೋತಿಲಕ್ಷ್ಮಿ, ವಿನೋದ, ಯು.ಆರ್. ರಿಯಾ, ಸಾನ್ವಿ ಗೌರಮ್ಮ ಪಾಲ್ಗೊಂಡರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಡಿ.ವೀರೆಂದ್ರ ಹೆಗ್ಗಡೆ ಉದ್ಘಾಟಿಸಿದರು. ಪ್ರೊ.ಸಾಯಿನಾಥ್‌ ಮಲ್ಲಿಗೆಮಾಡು, ನಯನಕುಮಾರಿ, ಪ್ರೊ.ಕೆ.ಎಸ್‌. ಸುಕೃತಾ, ಪ್ರೊ.ಜ್ಯೋತಿಲಕ್ಷ್ಮಿ, ವಿನೋದ, ಯು.ಆರ್. ರಿಯಾ, ಸಾನ್ವಿ ಗೌರಮ್ಮ ಪಾಲ್ಗೊಂಡರು   

ಮೈಸೂರು: ‘ಯುವ ಜನಾಂಗವು ಸಾಂಸ್ಕೃತಿಕ ಅಭಿವ್ಯಕ್ತಿಗಳಿಗೆ ಮನಸ್ಸು ಮತ್ತು ಜ್ಞಾನವನ್ನು ವಿಸ್ತರಿಸಿಕೊಂಡು ಪರಂಪರೆ ಮತ್ತು ಮಾನವೀಯ ಸಂಬಂಧಗಳಿಗೆ ಮಹತ್ವ ನೀಡಬೇಕು’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೆಂದ್ರ ಹೆಗ್ಗಡೆ ಸಲಹೆ ನೀಡಿದರು.

ನಗರದ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ಪ್ರಭಿಜ್ಞಾನ್‌ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿಗೆ ಜ್ಞಾನದ ಅಂತರ್ಗತವನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಇಂತಹ ಉತ್ಸವಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ದಾರಿಗೆ ಅವಕಾಶ ಮಾಡಿಕೊಡುತ್ತವೆ. ಸ್ನೇಹಪರತೆ, ಭ್ರಾತೃತ್ವದ ಮಾನವೀಯ ನೆಲೆಗಳನ್ನು ನಮಗೆ ತಿಳಿಸಿಕೊಡುತ್ತವೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳು ಜ್ಞಾನ ಮತ್ತು ಕಲಿತ ವಿಷಯಗಳನ್ನು ಆಗಾಗ ಹಸುವಿನಂತೆ ಮೆಲಕು ಹಾಕಿ ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು. ಸಮಯ ಇಲ್ಲ ಎಂಬುದು ಸುಳ್ಳು. ಅದನ್ನು ಸದ್ಬಳಕೆ ಮಾಡಿಕೊಂಡಾಗ ಸಾಧನೆ ಸಾಧ್ಯವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ನೇತ್ರ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ಪದವಿಪೂರ್ವ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಖೇಲೊ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಯುಷಾ ಐನೆನ್‌ ಅವರನ್ನು ಅಭಿನಂದಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಸಾಯಿನಾಥ್‌ ಮಲ್ಲಿಗೆಮಾಡು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ, ಐಕ್ಯುಎಸಿ ಸಮಿತಿ ಸಂಚಾಲಕಿ ಪ್ರೊ.ಕೆ.ಎಸ್‌. ಸುಕೃತಾ, ವಿದ್ಯಾರ್ಥಿನಿ ಕ್ಷೇಮಪಾಲನಾಧಿಕಾರಿ ಪ್ರೊ. ಜ್ಯೋತಿಲಕ್ಷ್ಮಿ, ಕನ್ನಡ ವಿಭಾಗದ ಮುಖ್ಯಸ್ಥರಾದ ವಿನೋದ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಯು.ಆರ್. ರಿಯಾ, ಕಾರ್ಯದರ್ಶಿ ಸಾನ್ವಿ ಗೌರಮ್ಮ ಉಪಸ್ಥಿತರಿದ್ದರು.

ಈ ಉತ್ಸವದಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ 18 ಕಾಲೇಜುಗಳಿಂದ 54 ತಂಡಗಳ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.