ADVERTISEMENT

ಒಳಮೀಸಲಾತಿ: ಹೊಸ ಸಮೀಕ್ಷೆಗೆ ಆಗ್ರಹ

ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:37 IST
Last Updated 10 ನವೆಂಬರ್ 2024, 16:37 IST

ಮೈಸೂರು: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಆಧರಿಸಿ ಒಳಮೀಸಲಾತಿ ಕಲ್ಪಿಸುವುದರಿಂದ ಸಮುದಾಯಕ್ಕೆ ಅನ್ಯಾಯವಾಗಲಿದೆ. ಮೂರು ತಿಂಗಳಲ್ಲಿ ಹೊಸ ಆಯೋಗವನ್ನು ರಚಿಸಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮೀಕ್ಷೆ ನಡೆಸಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌.ಸಿ/ ಎಸ್‌.ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರ್ ಒತ್ತಾಯಿಸಿದರು.

ನಗರದಲ್ಲಿ ‘ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ’ಯು ಭಾನುವಾರ ಆಯೋಜಿಸಿದ್ದ ‘ವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಹೊಸ ಆಯೋಗ ರಚಿಸಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ. ಅದಕ್ಕೆ ಸರ್ಕಾರ ಪರಿಶಿಷ್ಟ ಜಾತಿ– ಪಂಗಡ ಮತ್ತು ಬುಡಕಟ್ಟು ಉಪ ಯೋಜನೆಯ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ) ಮೀಸಲು ಅನುದಾನ ಬಳಸಲಿ’ ಎಂದರು.

‘ಒಳಮೀಸಲಾತಿಗೆ ಬಲಗೈ ಸಮುದಾಯದವರ ವಿರೋಧವಿದೆಯೆಂದು ಎಡಗೈ ಸಮುದಾಯದವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಎರಡೂ ಸಮುದಾಯಗಳ ಒಳಿತಿಗೆ ಒಳಮೀಸಲಾತಿ ಜಾರಿಗೊಳ್ಳಬೇಕು. ಈಗಿನ ಸದಾಶಿವ ಆಯೋಗದ ವರದಿಯು ನಿಖರವಾದ ದತ್ತಾಂಶಗಳನ್ನು ಹೊಂದಿಲ್ಲ. ಹೀಗಾಗಿ ಅದನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ದಲಿತರು ಆದಿ ಕರ್ನಾಟಕ, ಆದಿ ದ್ರಾವಿಡ ಹೆಸರನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಬಳಸುತ್ತಾರೆ. ಹೀಗಾಗಿ ಸಮೀಕ್ಷೆಯು ನಿಖರತೆ ಹೊಂದಿಲ್ಲ. ಮತ್ತೊಂದು ವೈಜ್ಞಾನಿಕ ಸಮೀಕ್ಷೆ ನಡೆಸಿ, ಅನುಷ್ಠಾನಗೊಳ್ಳಲಿ’ ಎಂದು ಆಗ್ರಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.