ADVERTISEMENT

ಮೈಸೂರು: ಅರಮನೆ ನಗರಿಯಲ್ಲಿ ‘ಯೋಗ ದಿನ’ದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 3:17 IST
Last Updated 21 ಜೂನ್ 2024, 3:17 IST
<div class="paragraphs"><p>ಅರಮನೆ ನಗರಿಯಲ್ಲಿ ‘ಯೋಗ ದಿನ’ದ ಸಂಭ್ರಮ</p></div>

ಅರಮನೆ ನಗರಿಯಲ್ಲಿ ‘ಯೋಗ ದಿನ’ದ ಸಂಭ್ರಮ

   

ಮೈಸೂರು: ಅರಮನೆ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಸೇರಿದ್ದ ಸಾವಿರಾರು ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡಿ, ಮೈ ದಂಡಿಸಿ ಯೋಗ ದಿನ ಸಂಭ್ರಮಿಸಿದರು. ಮೈಸೂರು ‘ಯೋಗ ನಗರಿ’ಯೆಂದು ಸಾರಿದರು.

10ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿದರು.

ADVERTISEMENT

ಸೂರ್ಯೋದಯಕ್ಕೂ ಮೊದಲೇ ಯೋಗಾಸಕ್ತರು ಅರಮನೆ ಆವರಣದತ್ತ ಜಮಾಯಿಸಿದರು. 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. 7.30ರಿಂದ ಆರಂಭವಾದ 45 ನಿಮಿಷಗಳ ಯೋಗಾಭ್ಯಾಸದಲ್ಲಿ ಯೋಗಪಟುಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೇರಿದಂತೆ ಗಣ್ಯರು ಪಾಲ್ಗೊಂಡರು.

ಯೋಗಗುರು ಪಿ.ಎನ್‌.ಗಣೇಶ್ ಕುಮಾರ್ ಅವರು ಶಂಖನಾದ ಮೊಳಗಿಸಿ ಯೋಗಾಭ್ಯಾಸ ಆರಂಭಿಸಿದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಆಶಾ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಆಯುಷ್‌ ಇಲಾಖೆಯ ಶ್ರೀನಿವಾಸ ನಾಯ್ಡು ಅವರು 4 ನಿಮಿಷಗಳ ಚಲನ ಕ್ರಿಯೆ ಹಾಗೂ 25 ನಿಮಿಷಗಳ ಯೋಗಭ್ಯಾಸಗಳನ್ನು ನಿರೂಪಿಸಿದರು. ದೇಹದ ಅಂಗಗಳಿಗೆ ಆಗುವ ಅನುಕೂಲವನ್ನೂ ವಿವರಿಸಿದರು. ಅವರನ್ನು ಯೋಗಾಭ್ಯಾಸಿಗಳು ಅನುಸರಿಸಿದರು.

ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಮಾಡಿದರು.

‘ಭಾರತ್ ಸ್ವಾಭಿಮಾನಿ ಟ್ರಸ್ಟ್‌’ನ ಕಾಚಂನಗಂಗಾ, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಯುವಶಕ್ತಿ ಪ್ರತಿಷ್ಠಾನದ ಪ್ರೇಮ್‌ ಕುಮಾರ್‌ ಅವರು 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ ಬೋಧಿಸಿದರು. ಜೆಎಸ್‌ಎಸ್‌ ಆಯುರ್ವೇದ ವೈದ್ಯಕೀಯ ಕಾಲೇಜು ತಂಡದವರು ಹೇಳಿದ ‘ಶಾಂತಿ ಮಂತ್ರ’ದೊಂದಿಗೆ ಯೋಗ ದಿನಾಚರಣೆ ಮುಕ್ತಾಯಗೊಂಡಿತು.

‘ಯೋಗ ಜನಪ್ರಿಯವಾಗಲು ನಾಲ್ವಡಿ ಕಾರಣ’

‘ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ. ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಣಿಕೆಯಿದೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ಮರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಆಧುನಿಕ ಯೋಗ ಪಿತಾಮಹ’ ತಿರುಮಲೈ ಕೃಷ್ಣಮಾಚಾರ್ಯ ಅವರನ್ನು ನಾಲ್ವಡಿ ಅವರು ಮೈಸೂರಿಗೆ ಕರೆತಂದರು. ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಕೃಷ್ಣಾಮಾಚಾರ್ಯರಿಂದ ಯೋಗ ಪಾಠ ಕಲಿತ ಇಂದ್ರ ದೇವಿ, ಬಿ.ಕೆ.ಎಸ್‌.ಅಯ್ಯಂಗಾರ್‌, ಕೆ.ಪಟ್ಟಾಭಿ ಜೋಯಿಸ್‌ ಅವರು, ಯೋಗವನ್ನು ವಿಶ್ವವ್ಯಾಪಿಯಾಗಿಸಿದರು’ ಎಂದು ಸ್ಮರಿಸಿದರು.

‘ದಸರೆ ವೇಳೆ ದೊಡ್ಡ ಪ್ರಮಾಣದಲ್ಲಿ ಯೋಗ ದಸರಾ ಆಚರಿಸಬೇಕು. ಯೋಗ ಪ್ರವಾಸೋದ್ಯಮ ಬೆಳೆಯಲು ಹಾಗೂ ಯೋಗ ನಗರಿಯಾಗಿಸುವ ನಿಟ್ಟಿನಲ್ಲಿ ಸಂಘ– ಸಂಸ್ಥೆಗಳಿಗೆ ಸಹಕಾರ ನೀಡುವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಭಾರತವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿದ್ದರಿಂದ ಜೂನ್ 21 ಅನ್ನು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತಿದೆ. ಶಿಸ್ತು ಬದ್ಧ ಜೀವನ ನಡೆಸಲು ಯೋಗ ಪ್ರೇರಣೆ ನೀಡುತ್ತದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಟಿ.ಎಸ್‌.ಶ್ರೀವತ್ಸ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್‌ ಬಾನೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.