ADVERTISEMENT

ಪೋಕ್ಸೊ ಕೇಸ್ ಇರುವ BSYಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ: ಸಿಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 6:32 IST
Last Updated 7 ಆಗಸ್ಟ್ 2024, 6:32 IST
<div class="paragraphs"><p>ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆ.9ರಂದು ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ನಡೆದಿರುವ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪರಿಶೀಲಿಸಿ ಮಾಹಿತಿ ಪಡೆದರು. ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಮುಡಾ ಅಧ್ಯಕ್ಷ ಕೆ.ಮರೀಗೌಡ ಜತೆಗಿದ್ದರು</p></div>

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆ.9ರಂದು ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ನಡೆದಿರುವ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪರಿಶೀಲಿಸಿ ಮಾಹಿತಿ ಪಡೆದರು. ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಮುಡಾ ಅಧ್ಯಕ್ಷ ಕೆ.ಮರೀಗೌಡ ಜತೆಗಿದ್ದರು

   

ಮೈಸೂರು: ‘ಈ ವಯಸ್ಸಿನಲ್ಲಿ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಕೇಸ್ ಎದುರಿಸುತ್ತಿರುವ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನೆಲ್ಲಾ ಆ.9ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಬಿಚ್ಚುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

‘ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂಬ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರ‍ಪ್ಪ ಅವರ ಹೇಳಿಕೆಗೆ ಬುಧವಾರ ಇಲ್ಲಿ ತಿರುಗೇಟು ನೀಡಿದರು.

ADVERTISEMENT

‘ಯಡಿಯೂರಪ್ಪ ಪೋಕ್ಸೊ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ದೋಷಾರೋಪಪಟ್ಟಿಯನ್ನೂ ಹಾಕಲಾಗಿದೆ. ನ್ಯಾಯಾಲಯದ ದಯೆಯಿಂದಾಗಿ ಅವರು ಬದುಕಿದ್ದಾರೆ; ಜೈಲಿಗೆ ಹೋಗಿಲ್ಲ. ಆ ಕೇಸ್‌ನಲ್ಲಿ ಜಾಮೀನೇ ಸಿಗುವಂತಿಲ್ಲ. ಅಂಥವರಿಗೆ ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಈ ವಯಸ್ಸಿನಲ್ಲಿ (82) ಪೋಕ್ಸೊ ಕೇಸ್‌ನಲ್ಲಿ ಸಿಲುಕಿದ್ದಾರೆಂದರೇನು? ನೀವು (ಮಾಧ್ಯಮದವರು) ಅದನ್ನು ಜಾಸ್ತಿ ತೋರಿಸುವುದಿಲ್ಲ. ಅವರು ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗಬೇಕು’ ಎಂದು ಗರಂ ಆಗಿ ಹೇಳಿದರು.

‘ಅವರು ಚೆಕ್‌ ಮೂಲಕ ದುಡ್ಡು ತೆಗೆದುಕೊಂಡಿದ್ದರು. ಡಿ–ನೋಟಿಫೈ ಮಾಡಿದ್ದರು. ನಾನೇನು ಮಾಡಿದ್ದೇನೆ? ನನ್ನದೇನಾದರೂ ಪತ್ರ, ಆದೇಶ ಅಥವಾ ಹೇಳಿಕೆ ಇದೆಯಾ? ನಾನು ಯಾವುದೇ ಪ್ರಭಾವವನ್ನೂ ಬೀರಿಲ್ಲ’ ಎಂದು ಕೇಳಿದರು.

‘ಯಡಿಯೂರಪ್ಪ ಪ್ರಕರಣವೇ ಬೇರೆ. ಅವರು 18ರಿಂದ 20 ಕೇಸ್‌ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದೆಲ್ಲವನ್ನೂ ಸಮಾವೇಶದಲ್ಲಿ ಬಹಿರಂಗಪಡಿಸುತ್ತೇನೆ. ಬುಧವಾರವೇ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಹೇಳಲು ಉದ್ದೇಶಿಸಿದ್ದೆ. ಆದರೆ, ಸಮಾವೇಶದಲ್ಲೇ ತಿಳಿಸಲೆಂದು ಪತ್ರಿಕಾಗೋಷ್ಠಿ ಮುಂದೂಡಿದೆ’ ಎಂದು ತಿಳಿಸಿದರು.

‘ಅವರ ಕಾಲದಲ್ಲಿ ಆಗಿದ್ದ ಹಗರಣಗಳನ್ನೆಲ್ಲಾ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ. ಯಾವ್ಯಾವ ಹಗರಣ ಆಗಿದ್ದವು, ಅವು ಯಾವ್ಯಾವ ಹಂತದಲ್ಲಿವೆ, ಜಂತಕಲ್‌ ಪ್ರಕರಣವೇನು, ಯಡಿಯೂರ‍ಪ್ಪ ಹಾಗೂ ಅವರ ಮಗ ಮಾಡಿದ್ದ ಶೆಲ್ ಪ್ರಕರಣ, ದೇವರಾಜ ಅರಸು ಟ್ರಕ್‌ ಟರ್ಮಿನಲ್, ಭೋವಿ ಅಭಿವೃದ್ಧಿ ನಿಗಮದಲ್ಲಾದ ಹಗರಣಗಳನ್ನೆಲ್ಲಾ ತಿಳಿಸುತ್ತೇನೆ’ ಎಂದರು.

‘ಬಿಜೆಪಿ–ಜೆಡಿಎಸ್‌ನವರು ಹೇಳುತ್ತಿರುವ ಸುಳ್ಳುಗಳನ್ನು ಎದುರಿಸುವ ಧೈರ್ಯ ನನಗೆ ಸದಾ ಇದೆ’ ಎಂದರು.

‘ಬಿಜೆಪಿ, ಜೆಡಿಎಸ್‌ನವರ ಕಾಲದ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಅವರ ಹಗರಣಗಳನ್ನೆಲ್ಲಾ ಬಿಚ್ಚುಡುತ್ತೇನೆ’ ಎಂದು ತಿಳಿಸಿದರು.

ಬಂದಿರುವುದು ಒಂದೇ ನೋಟಿಸ್:

‘ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಹೊಸದಾಗಿ ನೇಮಕಗೊಂಡಿರುವ ಮುಖ್ಯ ಕಾರ್ಯದರ್ಶಿ ರಾಜ್ಯಪಾಲರನ್ನು ಭೇಟಿಯಾಗಲು ಹೋಗಿದ್ದರೆಂಬುದಷ್ಟೆ ನನಗೆ ಗೊತ್ತು. ಅವರಿಂದ ರಾಜ್ಯಪಾಲರು ವಿವರಣೆ ಕೇಳಿರುವುದು ಗೊತ್ತಿಲ್ಲ. ಮುಖ್ಯ ಕಾರ್ಯದರ್ಶಿ ನೇಮಕವಾದಾಗ ರಾಜ್ಯಪಾಲರು ಬೆಂಗಳೂರಿನಲ್ಲಿ ಇರಲಿಲ್ಲ. ವಾಪಸಾದ್ದರಿಂದ ಅವರನ್ನು ಭೇಟಿಯಾಗಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

‘ವಿರೋಧ ಪಕ್ಷದವರು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ? ಈ ಸರ್ಕಾರ ದುರ್ಬಲಗೊಳಿಸಬೇಕು ಎನ್ನುವುದು ಅವರ ಉದ್ದೇಶ. ಆಪರೇಷನ್‌ ಕಮಲಕ್ಕೆ ಯತ್ನಿಸಿದ್ದರು. ಆದರೆ, ಯಶಸ್ಸಾಗಲಿಲ್ಲ. ಅದಕ್ಕಾಗಿ ಈಗ, ಬಿಜೆಪಿ– ಜೆಡಿಎಸ್‌ನವರಿಬ್ಬರೂ ಸೇರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಬಡವರ ಪರವಾಗಿ ಕೆಲಸ ಮಾಡುತ್ತಿರುವುದು, ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದನ್ನು ತಡೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಅವರು ಗ್ಯಾರಂಟಿ ಯೋಜನೆಗಳಿಗೆ ಆರಂಭದಿಂದಲೂ ವಿರುದ್ಧವಾಗಿದ್ದಾರೆ. ಅವುಗಳನ್ನು ಜಾರಿಗೊಳಿಸಲಾಗಲ್ಲ, ಜಾರಿಗೊಳಿಸಿದರೂ ನಿಲ್ಲಿಸಿಬಿಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದರು. ನಾವು ನಿಲ್ಲಿಸಿದ್ದೇವೆಯೇ. ಒಂದು ವರ್ಷದಿಂದ ಯಶಸ್ವಿಯಾಗಿ ಮಾಡುತ್ತಿದ್ದೀವಲ್ಲವೇ’ ಎಂದು ಪ್ರಶ್ನಿಸಿದರು.

‘ವಿರೋಧ ಪಕ್ಷದವರಿಗೆ ನನ್ನನ್ನು ಕಂಡರೆ ಭಯ ಎನ್ನುವುದಕ್ಕಿಂತಲೂ, ನಮ್ಮ ಸರ್ಕಾರ ಬಡವರ ಪರವಾಗಿದೆ ಎನ್ನುವುದೇ ಅವರಿಗೆ ಭಯ. ಬಡವರು ಹಾಗೂ ಪರಿಶಿಷ್ಟರ ಪರವಾಗಿ ನಾವು ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಭಯವಿದೆ. ಸುಳ್ಳು ಹೇಳಿಕೊಂಡು ಹೋಗುವ ಅವರಿಗೆ ಯಶಸ್ಸು ಸಿಗುತ್ತದೆಯೇ? ಸತ್ಯಕ್ಕೆ ಎಂದಿಗೂ ಜಯವಾಗುತ್ತದೆ’ ಎಂದರು.

ಸಚಿವರಾದ ಡಾ.ಎಚ್‌.ಸಿ. ಮಹದೇವ‍ಪ್ಪ, ಕೆ.ವೆಂಕಟೇಶ್‌ ಜತೆಗಿದ್ದರು.

ನಾನು ಸಿಎಂ ಆಗಿದ್ದಾಗಲೇ ನಿವೇಶನಕ್ಕೆ ಅರ್ಜಿ
ಮೈಸೂರು: ‘ಜಮೀನನ್ನು ಬಡಾವಣೆಗೆ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಬದಲಿ ನಿವೇಶನ ಕೊಡುವಂತೆ ನನ್ನ ಪತ್ನಿಯು ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅರ್ಜಿ ಕೊಟ್ಟಿದ್ದಳು. ಆದರೆ, ನಾನು ಕೊಡಿಸಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿ ಹಂಚಿ ಬಿಟ್ಟಿದ್ದೀರಿ, ಅದಕ್ಕಾಗಿ ಬದಲಿ ನಿವೇಶನ ಕೊಡಿ ಎಂದು ನನ್ನ ಹೆಂಡತಿ 2014ರಲ್ಲೇ ಅಂದರೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಮುಡಾಕ್ಕೆ ಅರ್ಜಿ ಕೊಟ್ಟಿದ್ದಳು. ನಾನು ಮುಖ್ಯಮಂತ್ರಿ ಆಗಿರುವವರೆಗೂ ಬದಲಿ ನಿವೇಶನ ಕೊಡಕೂಡದೆಂದು ಮುಡಾದವರಿಗೆ ಹೇಳಿದ್ದೆ. ಒಂದು ಗುಂಟೆಯನ್ನೂ ಕೊಡಬೇಡಿ ಎಂದು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದೆ’ ಎಂದರು. ‘ನಾನೇ ಮುಖ್ಯಮಂತ್ರಿಯಾಗಿದ್ದರಿಂದ ಆಗಲೇ ಕೊಟ್ಟು ಬಿಡಬಹುದಿತ್ತಲ್ಲವಾ? ಕೊಡಲಿಲ್ಲ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ. ಹಾಗೆ ಮಾಡಲಿಲ್ಲ’ ಎಂದರು. ‘ಮತ್ತೆ 2021ರಲ್ಲಿ ಅರ್ಜಿ ಕೊಟ್ಟಿದ್ದಳು. ಆಗ ಬಿಜೆಪಿ ಅಧಿಕಾರ ದಲ್ಲಿತ್ತು. ನಾನು ಪ್ರಭಾವ ಬೀರಲು ಹೇಗೆ ಸಾಧ್ಯ? ಎಲ್ಲವೂ ಕಾನೂನುಪ್ರಕಾರ ಇದ್ದಿದ್ದರಿಂದ ಬದಲಿ ನಿವೇಶನ ಕೊಟ್ಟಿದ್ದಾರಷ್ಟೆ. ಇದೆಲ್ಲ ವಿವರಣೆಯನ್ನೂ ರಾಜ್ಯಪಾಲರಿಗೆ ನೀಡಿದ್ದೇನೆ. ಕಾನೂನು ಪ್ರಕಾರ ಇರುವುದರಿಂದ ಒಪ್ಪುತ್ತಾರೆಂಬ ನಂಬಿಕೆ ನನಗಿದೆ. ಅವರೂ ಕಾನೂನಿನಂತೆಯೇ ನಡೆದುಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.