ADVERTISEMENT

ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಬೇಕು ಎಂದಿಲ್ಲ: ಎಂ. ಲಕ್ಷ್ಮಣ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 7:06 IST
Last Updated 12 ಜೂನ್ 2024, 7:06 IST
<div class="paragraphs"><p>ಎಂ. ಲಕ್ಷ್ಮಣ</p></div>

ಎಂ. ಲಕ್ಷ್ಮಣ

   

ಮೈಸೂರು: ‘ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ನಾನು ಹೇಳಿಕೆ ನೀಡಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಹೇಳಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಹೇಳಿದರು.

ADVERTISEMENT

‘₹ 3 ಲಕ್ಷ ಸಂಬಳ ತೆಗೆದುಕೊಳ್ಳುತ್ತಿರುವವರಿಗೂ 200 ಯುನಿಟ್ ವಿದ್ಯುತ್‌ ಉಚಿತವಾಗಿ ದೊರೆಯುತ್ತಿದೆ. ಇಂಥಾದ್ದನ್ನು ಗಮನಿಸಬೇಕು ಹಾಗೂ ಕೆಲವು ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸಬೇಕು ಎಂದಷ್ಟೇ ಹೇಳಿದ್ದೆ. ಸ್ಥಗಿತಗೊಳಿಸಬೇಕು ಎಂದಾಗಲಿ ಅಥವಾ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದಾಗಲಿ ಹೇಳಿಲ್ಲ’ ಎಂದು ತಿಳಿಸಿದರು.

‘ಮೈಸೂರು–ಕೊಡಗು ಲೋಕಸಭಾ ಚುನಾವಣೆಯಲ್ಲಿ 6,56,241 ಮತದಾರರು ನನಗೆ ಮತ ನೀಡಿದ್ದಾರೆ. ಸೋತ ಕಾರಣಕ್ಕೆ ನಾನು ಮತದಾರರನ್ನು ಸ್ಯಾಡಿಸ್ಟ್‌ಗಳೆಂದು ಕರೆದಿಲ್ಲ. ಈ ವಿಷಯದಲ್ಲೂ ದೃಶ್ಯ ಮಾಧ್ಯಮದವರು ನನ್ನ ಹೇಳಿಕೆ ತಿರುಚಿದ್ದಾರೆ. ನಾನು, ‘ಸಂಕಷ್ಟದಲ್ಲಿರುವ ವ್ಯಕ್ತಿಗೆ ಮತ್ತಷ್ಟು ಸಂಕಷ್ಟ ನೀಡುವ ವ್ಯವಸ್ಥೆಯು ಸ್ಯಾಡಿಸ್ಟ್ ಆಗಿದೆ’ ಎಂದು ಹೇಳಿದ್ದೆ. ಮತದಾರರ ಬಗ್ಗೆ ಗೌರವವಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಕುಂದುಕೊರತೆಗಳನ್ನು ಶಾಸಕರು, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತಂದು‍ ಪರಿಹರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಕಾವೇರಿ ವಿವಾದ ಬಗೆಹರಿಸುವಿರಾ: ಎಚ್‌ಡಿಕೆಗೆ ಲಕ್ಷ್ಮಣ ಪ್ರಶ್ನೆ

‘ಕೇಂದ್ರದಲ್ಲಿ ಸಚಿವರಾಗಿರುವ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆ ಒಡನಾಟ ಹೊಂದಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಕಾವೇರಿ ನದಿ ನೀರು ಹಂಚಿಕೆ ವಿವಾದ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವರೇ?’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಾವೇರಿ ವಿವಾದವನ್ನು ಬಗೆಹರಿಸುವುದಾಗಿ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀವು ಹಾಗೂ ನಿಮ್ಮ ತಂದೆ ಎಚ್‌.ಡಿ. ದೇವೇಗೌಡರು ಭರವಸೆ ನೀಡಿದ್ದನ್ನು ಈಗ ಮರೆಯಬೇಡಿ’ ಎಂದು ಕೋರಿದರು.

‘ಮೇಕೆದಾಟು ಬಳಿ ಜಲಾಶಯ ನಿರ್ಮಾಣಕ್ಕೆ ಅನುಮತಿ ಕೊಡಿಸುತ್ತೀರಾ, ಪಾರಂಪರಿಕ ಅರಣ್ಯ ಹಕ್ಕು ಯೋಜನೆ ಅನುಷ್ಠಾನಕ್ಕೆ ತರುತ್ತೀರಾ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಬಾಕಿ ದೊರೆಯುವಂತೆ ಮಾಡುವಿರಾ, ಮಹದಾಯಿ ಯೋಜನೆಗೆ ಅನುಮತಿ ಕೊಡಿಸುತ್ತೀರಾ, ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸುತ್ತೀರಾ, ರಾಜ್ಯದ ರೈತರಿಗೆ ಕೊಡಬೇಕಾದ ಬರ ಪರಿಹಾರದ ಉಳಿದ ಹಣ ಬಿಡುಗಡೆ ಮಾಡಿಸುತ್ತೀರಾ ಎಂಬ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 19 ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯವನ್ನು‍ ಪ್ರತಿನಿಧಿಸುವ ಐವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕೇವಲ ಮೂರು ಪ್ರಭಾವಿ ಸಮುದಾಯಕ್ಕೆ ಮಾತ್ರವೇ ಮಂತ್ರಿಗಿರಿ ಕೊಡಲಾಗಿದೆ. ಉಳಿದ ಸಮಾಜದವರನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.

‘ಬಹುತೇಕ ವೀರಶೈವ– ಲಿಂಗಾಯತರು ಬಿಜೆಪಿಗೆ ಮತ ನೀಡಿದ್ದಾರೆ. ಆದರೆ, ಅವರಿಗೆ ದೊರೆತಿರುವ ಪ್ರಾತಿನಿಧ್ಯ ಸಮಾಧಾನಕರವಾಗಿಲ್ಲ. ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ರಾಜ್ಯ ಖಾತೆಗೆ ಬೆಲೆ ಇಲ್ಲ ಎನ್ನುವುದು ಈಗಾಗಲೇ ಜನರಿಗೆ ಗೊತ್ತಾಗಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿರುವ ಬೇರೆ ಸಮಾಜದವವರು ಬಿಜೆಪಿಗೆ ಮತ ಹಾಕಿಲ್ಲವೇ? ದಲಿತರು, ಹಿಂದುಗಳ ವರ್ಗದವರು ಹಾಗೂ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ. ಇದು ಖಂಡನೀಯ’ ಎಂದರು.

‘ಸಣ್ಣ ಪುಟ್ಟ ಸಮುದಾಯದವರು ಬಿಜೆಪಿಗೆ ಮತ ಹಾಕಿಲ್ಲವೇ? ಆದಾಗ್ಯೂ ಸಚಿವ ಸಂಪುಟದಲ್ಲಿ ಆದ್ಯತೆ ಸಿಕ್ಕಿಲ್ಲ. ಈ ಸಮಾಜದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಿರಂತರವಾಗಿ ಅನ್ಯಾಯ ಆಗುತ್ತಿದ್ದರೂ ಬಿಜೆಪಿ ಬೆಂಬಲಿಸುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕೋರಿದರು.

ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ವಕ್ತಾರ ಮಹೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.