ADVERTISEMENT

ನಂಜರಾಜ ಛತ್ರದಲ್ಲಿ ಹಲಸು ಹಬ್ಬ ಆರಂಭ: ಹಲಸಿನ ಘಮಕ್ಕೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:11 IST
Last Updated 15 ಜೂನ್ 2024, 16:11 IST
ಮೈಸೂರಿನ ನಂಜರಾಜ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್‌ ಮೈಸೂರು ಪಶ್ಚಿಮವು ಆಯೋಜಿಸಿರುವ ಹಲಸಿನ ಹಬ್ಬದಲ್ಲಿ ಗ್ರಾಹಕರು ಹಲಸು ಖರೀದಿಯಲ್ಲಿ ತೊಡಗಿರುವುದು
ಮೈಸೂರಿನ ನಂಜರಾಜ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್‌ ಮೈಸೂರು ಪಶ್ಚಿಮವು ಆಯೋಜಿಸಿರುವ ಹಲಸಿನ ಹಬ್ಬದಲ್ಲಿ ಗ್ರಾಹಕರು ಹಲಸು ಖರೀದಿಯಲ್ಲಿ ತೊಡಗಿರುವುದು   

ಮೈಸೂರು: ‘ಶಂಕರ’, ‘ರುದ್ರಾಕ್ಷಿ’, ‘ಭೈರಸಂದ್ರ’, ‘ಲಾಲ್‌ ಭಾಗ್’, ‘ಮಧುರಾ’, ‘ಥಾಯ್‌ ರೆಡ್‌’, ‘ವಿಯೆಟ್ನಾಂ ಸೂಪರ್‌ ಹರ್ಲಿ’, ‘ನಾಗಚಂದ್ರ’, ‘ರಾಮಚಂದ್ರ’ ಮುಂತಾದ ಹಲಸಿನ ಹಣ್ಣಿನ ಘಮ ನಂಜರಾಜ ಛತ್ರದ ತುಂಬೆಲ್ಲಾ ಹರಡಿತ್ತು. ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್‌ ಮೈಸೂರು ಪಶ್ಚಿಮವು ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಮೊದಲ ದಿನ ಜನ ಮುಗಿಬಿದ್ದರು.

ರಾಜ್ಯದ ವಿವಿಧ ಪ್ರಭೇದಗಳ ಹಲಸಿನ ಗಿಡಗಳು ಗ್ರಾಹಕರ ಕೈ ಸೇರಲು ಕಾಯುತ್ತಿದ್ದವು. ಹಲಸಿನ ತೊಳೆ ಪ್ಲಾಸ್ಟಿಕ್‌ ಡಬ್ಬದಲ್ಲಿ ಮಾರಾಟಕ್ಕೆ ಲಭ್ಯವಿತ್ತು. ಕೆಂಬಣ್ಣದಿಂದ ಹೊಳೆಯುತ್ತಿದ್ದ ಚಂದ್ರ ಹಲಸು ಖರೀದಿಸಲು ಜನ ಮುತ್ತಿಕ್ಕಿದ್ದರು. ಹಲಸಿನಿಂದ ಮಾಡಿದ ಖಾದ್ಯಗಳು ಈ ಹಬ್ಬದಲ್ಲಿನ ವಿಶೇಷಗಳಾಗಿದ್ದವು. ಪಾಯಸ, ಗುಜ್ಜೆ ಕಬಾಬ್‌, ಕರಿದ ತಿಂಡಿಗಳು, ಹಪ್ಪಳವೂ ಲಭ್ಯವಿತ್ತು.

ಅನೇಕ ಸಹಜ ಕೃಷಿಕರು, ಕೃಷಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ತಿಪಟೂರಿನ ಚಂದ್ರ ಹಲಸು, ಚಿಕ್ಕನಾಯಕನಹಳ್ಳಿ ಚೇಳೂರಿನ ಕೆಂಪು ಹಲಸಿನ ತೊಳೆಗಳು ಗ್ರಾಹಕರನ್ನು ಆಕರ್ಷಿಸಿದವು. ಇದಲ್ಲದೆ ನೈಸರ್ಗಿಕವಾಗಿ ಬೆಳೆದ ಮಾವು, ನೇರಳೆ, ಬೆಣ್ಣೆ ಹಣ್ಣು ಮತ್ತಿತರ ಉತ್ಪನ್ನಗಳ ಮಾರಾಟವೂ ನಡೆಯಿತು. ರೈತರಿಗೆ ಉಪಯೋಗ ಆಗುವ ಹಲಸು ಕತ್ತರಿಸುವ ಯಂತ್ರ, ಮಂಗಗಳಿಗೆ ಕಲ್ಲು ಹೊಡೆಯುವ ಕೋವಿ ಮೊದಲಾದ ಕೃಷಿ ಉತ್ಪನ್ನಗಳನ್ನೂ ಮಾರಾಟಕ್ಕೆ ಇಡಲಾಗಿತ್ತು.

ADVERTISEMENT

ವಿವಿಧ ಸ್ಪರ್ಧೆ: ಮೇಳಕ್ಕೆ ಬಂದವರಿಗಾಗಿ ಶನಿವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ಹಲಸು ಭಾರ ಎತ್ತುವ ಸ್ಪರ್ಧೆಯಲ್ಲಿ ತೋಳ್ಬಲದ ಪ್ರದರ್ಶನ ನಡೆಯಿತು. ಹಲಸಿನ ಖಾದ್ಯ ತಯಾರಿ, ಹಲಸಿನ ತೊಳೆ ತಿನ್ನುವುದು, ಚಿತ್ರಕಲೆ ಹಲಸಿನ ತೂಕ ಊಹಿಸಿ ಬಹುಮಾನ ಗೆಲ್ಲುವ ಅವಕಾಶವೂ ಇತ್ತು.

‘ಕಡಿಮೆ ನೀರಿನ ಪ್ರದೇಶದ ಬೆಳೆ’
ಹಲಸು ಹಬ್ಬವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ‘ಹಲಸು ಬೆಳೆಗೆ ಕಡಿಮೆ ನೀರು ಸಾಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ನೀಡುವ ಬೆಳೆಯಲ್ಲಿ ರೈತರು ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದರು. ‘ಮೌಲ್ಯವರ್ಧನೆಯಿಂದ ಹಲಸಿಗೆ ಬೇಡಿಕೆ ಹೆಚ್ಚಾಗಿದೆ. ಇದು ಪೌಷ್ಟಿಕಾಂಶವುಳ್ಳ ಆಹಾರವಾಗಿರುವುದರಿಂದ ಆರೋಗ್ಯಕ್ಕೂ ಉತ್ತಮ. ಹಿಂದೆ ಹಳ್ಳಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಹಾಗೂ ಕೊಳೆತು ಹೋಗುತ್ತಿದ್ದ ಹಣ್ಣಿಗೆ ಇಂದು ಬೇಡಿಕೆ ಬಂದಿರುವುದು ಸಂತಸದ ವಿಚಾರ’ ಎಂದು ಹೇಳಿದರು. ‘ಹಲಸಿನ ಹಬ್ಬದಂಥ ಕಾರ್ಯಕ್ರಮಗಳಿಂದಾಗಿ ರೈತರೇ ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಇ‌ದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಪರಿಸರದ ಕುರಿತಾದ ಕಾರ್ಯಕ್ರಮದಲ್ಲಿ ರೈತ ಸಂಘವೂ ಜೊತೆಯಾಗುತ್ತದೆ. ಈ ಕಾರ್ಯಕ್ರಮ ಬೆಂಗಳೂರಿನಲ್ಲೂ ನಡೆಯಲಿ’ ಎಂದರು. ‘ಬೀಜದ ನಂಟು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕೈಲಾಸಮೂರ್ತಿ ರೈತ ಮಹಿಳೆ ಹೇಮಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.