ADVERTISEMENT

ದಸರೋತ್ತರ ಮೈಸೂರು ‘ಪ್ಲಾಸ್ಟಿಕ್‌ಮಯ’! 22 ಟನ್ ಪ್ಲಾಸ್ಟಿಕ್‌ ತೆರವು!

ಎಚ್‌.ಕೆ. ಸುಧೀರ್‌ಕುಮಾರ್
Published 14 ಅಕ್ಟೋಬರ್ 2024, 7:19 IST
Last Updated 14 ಅಕ್ಟೋಬರ್ 2024, 7:19 IST
<div class="paragraphs"><p>ಮೈಸೂರಿನ ಅರಮನೆ ಆವರಣದಲ್ಲಿ ನಡೆದ ವಿಜಯದಶಮಿ ಮೆರವಣಿಗೆ ವೇಳೆ ಅರಮನೆ ಆವರಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರು ಭಾನುವಾರ ತೆರವುಗೊಳಿಸಿದರು </p></div>

ಮೈಸೂರಿನ ಅರಮನೆ ಆವರಣದಲ್ಲಿ ನಡೆದ ವಿಜಯದಶಮಿ ಮೆರವಣಿಗೆ ವೇಳೆ ಅರಮನೆ ಆವರಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರು ಭಾನುವಾರ ತೆರವುಗೊಳಿಸಿದರು

   

–ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

ಮೈಸೂರು: ಜಂಬೂಸವಾರಿ ಮೆರವಣಿಗೆ ಬಳಿಕ ಇಡೀ ನಗರ, ಅದರಲ್ಲೂ ಮೆರವಣಿಗೆ ಆವರಣ ಹಾಗೂ ರಾಜಮಾರ್ಗ ಪ್ಲಾಸ್ಟಿಕ್‌ಮಯವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿಯೇ ಕಂಡುಬರುತ್ತಿದೆ. ಶನಿವಾರ ತಡರಾತ್ರಿಯಿಂದಲೇ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಸಿಬ್ಬಂದಿ ಬರೋಬ್ಬರಿ 80 ಟನ್‌ಗಳಷ್ಟು ಕಸ ಸಂಗ್ರಹಿಸಿದ್ದಾರೆ. ಇದರಲ್ಲಿ 22 ಟನ್‌ ಪ್ಲಾಸ್ಟಿಕ್‌ ಕಸ.

ADVERTISEMENT

ಅರಮನೆ ಆವರಣ, ಮೆರವಣಿಗೆ ಮಾರ್ಗ, ಮಹಾರಾಜ ಕಾಲೇಜು ಮೈದಾನದಲ್ಲಿನ ಆಹಾರ ಮೇಳ, ಪುಷ್ಪ ಪ್ರದರ್ಶನ ನಡೆಯುತ್ತಿರುವ ಕುಪ್ಪಣ್ಣ ಉದ್ಯಾನ ಮುಂತಾದ ಕಡೆಯಿಂದ ಬಹಳಷ್ಟು ಕಸ ಸಂಗ್ರಹವಾಗಿದೆ.

ಭಾನುವಾರ ಮುಂಜಾನೆ ಆರಂಭವಾದ ಮತ್ತೊಂದು ಸುತ್ತಿನ ಕಸ ಸಂಗ್ರಹವೂ ಮುಖ್ಯವಾಗಿ ಅರಮನೆ ಆವರಣ ಮತ್ತು ಬನ್ನಿಮಂಟಪದಲ್ಲಿ ನಡೆಯಿತು. ಬೆಳಕಿನ ವ್ಯವಸ್ಥೆ ಸೂಕ್ತವಾಗಿಲ್ಲದ ಕಾರಣ ಬನ್ನಿಮಂಟಪದಲ್ಲಿ ರಾತ್ರಿ ಪಾಳಿಯ ಕೆಲಸಗಾರರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಅರಮನೆ ಆವರಣದ ಪುಷ್ಪಾರ್ಚನೆ ಮಾರ್ಗದಲ್ಲಿ ಕುರ್ಚಿ ಹಾಗೂ ಟೇಬಲ್‌ಗಳಿದ್ದ ಕಾರಣ ಕಸ ತೆರವು ಮಾಡಲಾಗಿರಲಿಲ್ಲ.

ಕಸದ ನಡುವೆ ಸಾಗಿದ ಪ್ರವಾಸಿಗರು: ಭಾನುವಾರ ಮುಂಜಾನೆ ಅರಮನೆ ಆವರಣವು ಸ್ವಚ್ಛತಾ ಸಿಬ್ಬಂದಿ, ಚೇರ್‌ ಹಾಗೂ ಶಾಮಿಯಾನ ತೆರವು ಮಾಡುವ ಕೆಲಸಗಾರರು ಹಾಗೂ ಪ್ರವಾಸಿಗರಿಂದ ತುಂಬಿಹೋಗಿತ್ತು. ಚೇರ್‌ಗಳ ತೆರವುಗೊಳಿಸುವುದು, ಸ್ವಚ್ಛತೆಯೂ ಏಕಕಾಲದಲ್ಲಿ ನಡೆದವು. ತಿಂಡಿ ತಿನಿಸುಗಳ ಪಾಕೆಟ್, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಅರಮನೆ ಆವರಣದಲ್ಲಿ ತುಂಬಿಕೊಂಡಿತ್ತು. ಕಸದ ನಡುವೆಯೇ ಪ್ರವಾಸಿಗರೂ ಅರಮನೆಯತ್ತ ಸಾಗಿದರು.

ದಸರಾದಲ್ಲಿ ದಿನವೂ 45 ಟನ್‌ನಿಂದ 50 ಟನ್‌ ಕಸ: ‍‘ಅ.3ರಿಂದ ಆರಂಭಗೊಂಡ ದಸರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮ ಸ್ಥಳಗಳಿಂದ ಪ್ರತಿ ದಿನವೂ 45 ಟನ್‌ನಿಂದ 50 ಟನ್‌ ಕಸ ಸಂಗ್ರಹವಾಗಿದೆ. ಪಾಲಿಕೆಯ ದೈನಂದಿನ ಕಾರ್ಮಿಕರನ್ನು ಹೊರತುಪಡಿಸಿ ದಸರೆಯ ಸ್ವಚ್ಛತೆಗೆಂದು 500 ಮಂದಿಯನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗಿದೆ. ದಸರೆಯ ಅಷ್ಟೂ ದಿನ 24 ಗಂಟೆಯೂ ಎರಡು ಪಾಳಿಗಳಲ್ಲಿ ಈ ವಿಶೇಷ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಅ.15ರವರೆಗೂ ಅವರ ಸೇವೆಯನ್ನು ಬಳಸಿಕೊಳ್ಳಲು ಅವಕಾಶವಿದ್ದು, ನಗರವನ್ನು ಪೂರ್ಣ ಸ್ವಚ್ಛಗೊಳಿಸಲಿದ್ದೇವೆ’ ಎಂದು ಪಾಲಿಕೆಯ ಪರಿಸರ ವಿಭಾಗದ ಎಇಇ ಕೆ.ಎಸ್‌.ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರಿನ ಅರಮನೆ ಆವರಣದಲ್ಲಿ ನಡೆದ ವಿಜಯದಶಮಿ ಮೆರವಣಿಗೆ ವೇಳೆ ಅರಮನೆ ಆವರಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರು ಭಾನುವಾರ ತೆರವುಗೊಳಿಸಿದರು–

‘ಕಸ ವಿಲೇವಾರಿಗೆ ಅಂದಾಜು ₹44 ಲಕ್ಷ ವೆಚ್ಚವಾಗಿದ್ದು, ಒಟ್ಟು 55 ಕಸ ವಿಲೇವಾರಿ ಆಟೊಗಳು ಹಾಗೂ 7 ಕಾಂಪ್ಯಾಕ್ಟರ್‌ಗಳನ್ನು ಸ್ವಚ್ಛತೆಗೆ ಬಳಸಿಕೊಳ್ಳಲಾಗಿದೆ. ದಿನದ ಪಾಳಿಯಲ್ಲಿ ಪಾಲಿಕೆಯ ದೈನಂದಿನ ಕಾರ್ಮಿಕರೂ ಕಾರ್ಯ ನಿರ್ವಹಿಸಿದ್ದಾರೆ. ಕಸವನ್ನು ರಾಯನಕೆರೆ, ವಿದ್ಯಾರಣ್ಯಪುರ ಹಾಗೂ ಕೆಸರೆ ಘಟಕಗಳಲ್ಲಿ ವಿಲೇವಾರಿ ಮಾಡಿದ್ದೇವೆ’ ಎಂದರು.

1.5 ಟನ್‌ ಪ್ಲಾಸ್ಟಿಕ್‌ ಬಾಟಲಿ ಸಂಗ್ರಹ

ದಸರಾ ಸ್ವಚ್ಛತಾ ಉಪಸಮಿತಿಯೊಂದಿಗೆ ಕೈ ಜೋಡಿಸಿದ್ದ ಪೆಪ್ಸಿಕೊ ಕಂಪನಿಯಿಂದ ಪ್ರಾಯೋಜಿತರಾದ 50 ಸ್ವಯಂಸೇವಕರು ಪ್ಲಾಸ್ಟಿಕ್‌ ಬಾಟಲಿ ತ್ಯಾಜ್ಯವನ್ನು ಸಂಗ್ರಹಿಸಿದರು. ದಸರೆಯ ಅಷ್ಟು ದಿನಗಳಲ್ಲಿ ಹಗಲು ವೇಳೆ ಕಾರ್ಯನಿರ್ವಹಿಸಿದ ಅವರು ಒಟ್ಟು 1.5 ಟನ್‌ ತೂಕದಷ್ಟು ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.