ಮೈಸೂರು: ಬೆಂಗಳೂರಿನಲ್ಲಿ ನಡೆಸುವ ‘ಜನತಾದರ್ಶನ’ಕ್ಕೆಂದು ಜನರು ಹಣ ಖರ್ಚು ಮಾಡಿಕೊಂಡು ಬರುವುದನ್ನು ತಪ್ಪಿಸಬೇಕು. ಅವರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಸೂಚಿಸಬೇಕು. ಇದಕ್ಕಾಗಿ ‘ತಾಲ್ಲೂಕುವಾರು ಜನಸ್ಪಂದನ’ ಕಾರ್ಯಕ್ರಮವನ್ನು ನಡೆಸಬೇಕು. ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದೇಶಕ್ಕೆ ಅವರ ತವರಿನಲ್ಲೇ ಅಧಿಕಾರಿಗಳಿಂದ ಕಿಮ್ಮತ್ತು ದೊರೆತಿಲ್ಲ!
ಜಿಲ್ಲೆಯಲ್ಲಿ ತಾಲ್ಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮ ವೇಳಾಪಟ್ಟಿಯಂತೆ ನಡೆಯುತ್ತಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ಮೈಸೂರು ತಾಲ್ಲೂಕು ನಂತರ ಇತರ ತಾಲ್ಲೂಕುಗಳಲ್ಲಿ ಕಾರ್ಯಕ್ರಮವನ್ನು ನಡೆಸಿ, ಜನರ ಅಹವಾಲು ಆಲಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾಡಳಿತದಿಂದ ನೀಡಿದ ವೇಳಾಪಟ್ಟಿಯನ್ನು ಪಾಲಿಸಿಲ್ಲ! ಮುಂದೂಡಿರುವುದಾದರೂ ಏಕೆ ಎಂಬ ಪ್ರಶ್ನೆಗೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ.
‘ಸಾರ್ವಜನಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್ಪಿ ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಸಂಬಂಧಪಟ್ಟ ತಾಲ್ಲೂಕಿನ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಜಿಲ್ಲಾಡಳಿತದಿಂದ ಪ್ರಕಟಣೆ ನೀಡಲಾಗಿತ್ತು. ಅಂತೆಯೇ ವೇಳಾಪಟ್ಟಿಯನ್ನೂ ಪ್ರಕಟಿಸಿ ಯಾವ್ಯಾವ ತಾಲ್ಲೂಕು ಕೇಂದ್ರದಲ್ಲಿ ಯಾವ್ಯಾವಾಗ ಕಾರ್ಯಕ್ರಮ ನಡೆಸಲಾಗುತ್ತದೆ ಎಂಬುದನ್ನೂ ಪ್ರಚಾರ ಮಾಡಲಾಗಿತ್ತು. ಇದು ಪಾಲನೆಯಾಗಿಲ್ಲ.
ಮೈಸೂರಿನಲ್ಲಿ ನಡೆಸಿದ್ದ ಡಿಸಿ: ಮೈಸೂರು ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅದರಲ್ಲಿ ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ವಿವೇಕಾನಂದ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಮಹಾನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಪಾಲ್ಗೊಂಡಿದ್ದರು.
ಸಿದ್ಧಾರ್ಥ ನಗರದ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ನಗರ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ನಾಗರಿಕರು ಅಹವಾಲುಗಳನ್ನು ಸಲ್ಲಿಸಿದ್ದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂದರೆ 65 ಸೇರಿದಂತೆ ಒಟ್ಟು 108 ಅರ್ಜಿಗಳನ್ನು ಸ್ವೀಕರಿಸಿದ್ದರು. ಸತತ ಐದು ತಾಸಿಗೂ ಹೆಚ್ಚು ಕಾಲ ಅಹವಾಲು ಆಲಿಸಿದ್ದ ಜಿಲ್ಲಾಧಿಕಾರಿ, ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಇಂತಿಷ್ಟು ದಿನಗಳ ಗಡುವನ್ನು ನೀಡಿದ್ದರು. ಪ್ರತಿ ನಾಗರಿಕರ ಅರ್ಜಿಯನ್ನೂ ಖುದ್ದು ಪರಿಶೀಲಿಸಿದ್ದರು. ಜುಲೈ 1ರಂದು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವುದಾಗಿಯೂ ತಿಳಿಸಿದ್ದರು. ತಾಲ್ಲೂಕುವಾರು ವೇಳಾಪಟ್ಟಿ ಪ್ರಕಾರ ಕಾರ್ಯಕ್ರಮ ನಡೆಸಿ ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದರು.
‘ಜುಲೈ 2ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ತಿ.ನರಸೀಪುರ ತಹಶೀಲ್ದಾರ್ ಕಚೇರಿ, ಜುಲೈ 3ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಂಜನಗೂಡಿನ ಅಂಬೇಡ್ಕರ್ ಭವನ, ಜೂನ್ 4ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹುಣಸೂರಿನ ಅಂಬೇಡ್ಕರ್ ಭವನ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಪಿರಿಯಾಪಟ್ಟಣದ ಅರಸು ಭವನದಲ್ಲಿ ಜನಸ್ಪಂದನ ನಡೆಸಲಾಗುವುದು’ ಎಂದು ಜಿಲ್ಲಾಡಳಿತ ತಿಳಿಸಿತ್ತು. ಇದು ಪಾಲನೆ ಆಗುವುದೇ ಎನ್ನುವುದು ಅಲ್ಲಿನ ಜನರ ಪ್ರಶ್ನೆಯಾಗಿದೆ.
ಎಚ್.ಡಿ.ಕೋಟೆ, ಸರಗೂರು, ಸಾಲಿಗ್ರಾಮ, ಕೆ.ಆರ್.ನಗರದಲ್ಲಿ ನಡೆಯಬೇಕಿತ್ತು ಹಲವು ಕುಂದುಕೊರತೆ ಎದುರಿಸುತ್ತಿರುವ ಜನರು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು ಸಿಎಂ ಸೂಚಿಸಿದ್ದರು
ಜುಲೈ ಮೊದಲ ವಾರದಲ್ಲಿ ಎಲ್ಲ ತಾಲ್ಲೂಕುಗಳಲ್ಲೂ ಜನಸ್ಪಂದನ ಕಾರ್ಯಕ್ರಮ ಪೂರ್ಣಗೊಳಿಸಲಾಗುವುದುಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.