ಮೈಸೂರು: ‘ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ಅಧಿಕಾರಿಗಳ ಮನೋಭಾವವೂ ಬದಲಾಗಬೇಕು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜನರನ್ನು ಅಲೆಸಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜನತಾ ದರ್ಶನ’ ಸಾರ್ವಜನಿಕರ ಅಹವಾಲುಗಳ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನೀವು ಹಳ್ಳಿಗಳಿಗೆ ಹೋಗದಿದ್ದರೆ, ಜನರೊಂದಿಗೆ ಬೆರೆಯದಿದ್ದರೆ ಮಧ್ಯವರ್ತಿಗಳು ಹಾಗೂ ಶೋಷಣೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಭಿಯಾನ ನಡೆಸಬೇಕು. ಇದಕ್ಕಾಗಿ ಗಡುವು ವಿಧಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಜನಸ್ನೇಹಿಯಾಗಿರಬೇಕು: ‘ಅಧಿಕಾರಿಗಳು ಹಾಗೂ ಜನರ ಮುಖಾಮುಖಿಗೆ ವ್ಯವಸ್ಥೆ ಮಾಡಬೇಕು. ಜನರನ್ನು ಹೊರಗಡೆ ನಿಲ್ಲಿಸಿ ಅಧಿಕಾರಿಗಳು ಸಭಾಂಗಣದ ಒಳಗೆ ಕುಳಿತುಕೊಳ್ಳುವುದು ಸರಿಯಲ್ಲ. ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ, ಜಿಲ್ಲಾಡಳಿತ ಜನಸ್ನೇಹಿ ಆಗಿರಬೇಕು. ಕಾನೂನು ಪ್ರಕಾರ ಕೆಲಸ ಮಾಡಿದರೆ ಅವರನ್ನು ಒಳ್ಳೆಯ ಅಧಿಕಾರಿಗಳು ಎಂದು ಹೇಳಬಹುದು. ಬಡವರಿಗೆ ಸಹಾಯ ಮಾಡಲು ಕ್ರಮ ಕೈಗೊಂಡರೆ ಅಂಥವರನ್ನು ಮೆಚ್ಚಬಹುದು’ ಎಂದರು.
‘ಸೌಲಭ್ಯಕ್ಕಾಗಿ ಹಣ ಖರ್ಚು ಮಾಡಬೇಕಿಲ್ಲ ಎಂಬ ಸಂದೇಶವನ್ನು ಜನರಿಗೆ ರವಾನಿಸಬೇಕು. ನಮ್ಮ ಆಡಳಿತ ಜನರ ಬಳಿಗೆ ಹೋಗಬೇಕು. ಜನಸ್ನೇಹಿ ಕಾರ್ಯನಿರ್ವಹಣೆಯಲ್ಲಿ ಜಿಲ್ಲೆಯು ಮಾದರಿಯಾಗಬೇಕು. ಮುಂದೆ ಅಧಿಕಾರಿಗಳು ಹಾಗೂ ಜನರ ಮುಖಾಮುಖಿಗೆ ಸಭಾಂಗಣದಲ್ಲೇ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.
‘ಜನರು ತಾಲ್ಲೂಕು ಕಚೇರಿಗೆ, ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯಿತಿ ಕಚೇರಿಗೆ ಅಲೆಯುವಂತೆ ಮಾಡಬಾರದು. ಜನರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಬಡ ಜನರು ತಮ್ಮ ತಾಳಿ, ಓಲೆಗಳನ್ನು ಅಡವಿಟ್ಟು ಸರ್ಕಾರದ ಸೌಲಭ್ಯ ಪಡೆಯುಂತಹ ಉದಾಹರಣೆಗಳನ್ನು ಕಂಡಿದ್ದೇವೆ. ಇದ್ಯಾವುದಕ್ಕೂ ಅವಕಾಶ ನೀಡದೇ ಆಡಳಿತ ಯಂತ್ರವನ್ನು ನೇರವಾಗಿ ಜನರ ಬಳಿಗೆ ಕರೆದೊಯ್ಯುವುದು ನಮ್ಮ ಸರ್ಕಾರದ ಉದ್ದೇಶ ಮತ್ತು ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.
ಪ್ರತ್ಯೇಕ ಸಭೆ: ‘ಅಧಿಕಾರಿಗಳು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಸಕ್ತಿಗೆ ಸರ್ಕಾರಿ ಸೇವೆಯನ್ನು ದುರುಪಯೋಗ ಮಾಡಿಕೊಳ್ಳಬಾರದು. ತಾಲ್ಲೂಕು ವ್ಯಾಪ್ತಿಯಲ್ಲಿ ಜನತಾ ದರ್ಶನ ಮಾಡಬೇಕು’ ಎಂದು ತಿಳಿಸಿದರು.
‘ಆಶ್ರಯ ಯೋಜನೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪ್ರತ್ಯೇಕವಾಗಿ ಸಭೆ ಕರೆಯಬೇಕು’ ಎಂದು ಶಾಸಕರಾದ ತನ್ವೀರ್ ಸೇಠ್ ಹಾಗೂ ಟಿ.ಎಸ್. ಶ್ರೀವತ್ಸ ಕೋರಿದರು.
‘ಅಂಗವಿಕಲರ ಸಮಸ್ಯೆಗಳ ಬಗ್ಗೆ ಚರ್ಚೆಗಾಗಿ ಪ್ರತ್ಯೇಕವಾಗಿ ಸಭೆ ಕರೆಯಲಾಗುವುದು’ ಎಂದು ಸಚಿವರು ತಿಳಿಸಿದರು.
‘ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳ ಗಮನಕ್ಕೆ ತಂದೇ ಅವರ ಹೆಸರು ಹಾಕಬೇಕು. ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದ ಮೇಲೆ ತಲುಪಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಸೂಚಿಸಿದರು.
‘ಸಭೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮ ಕೈಗೊಳ್ಳಬೇಕು. ಹೂಗುಚ್ಛಗಳಲ್ಲಿ ಪ್ಲಾಸ್ಟಿಕ್ ಬಳಸುವವರ ಮೇಲೆ ದಾಳಿ ಮಾಡಿ, ಗರಿಷ್ಠ ದಂಡ ವಿಧಿಸಿ ಸಂದೇಶ ರವಾನಿಸಬೇಕು. ಸಭೆಗಳಲ್ಲಿ, ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಬಳಸಬಾರದು’ ಎಂದು ತಾಕೀತು ಮಾಡಿದರು.
ಶಾಸಕ ಕೆ. ಹರೀಶ್ ಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಜಿ. ರೂಪಾ, ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಹಾಗೂ ಎಸ್ಪಿ ಸೀಮಾ ಲಾಟ್ಕರ್ ಇದ್ದರು.
ಕಾರ್ಯಕ್ರಮವು ಮುಕ್ಕಾಲು ತಾಸು ತಡವಾಗಿ ಶುರುವಾಯಿತು.
ಜಿಲ್ಲಾಡಳಿತ ಹಾಗೂ ಕಾರ್ಯಾಂಗ ಇನ್ನಷ್ಟು ಕ್ರಿಯಾಶೀಲವಾಗಬೇಕು. ಪ್ರತಿ ಇಲಾಖೆಯಲ್ಲಿ ಸಲ್ಲಿಕೆ ಆಗುವ ಅರ್ಜಿಗಳನ್ನು ವಿಲೇವಾರಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.ತನ್ವೀರ್ ಸೇಠ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.