ಮೈಸೂರು: ‘ಜನೌಷಧಿ ಕೇಂದ್ರಗಳಿಗೆ ಮೈಸೂರಿನಲ್ಲಿ ಮೋದಿ ಮೆಡಿಕಲ್ಸ್ ಎನ್ನಲಾಗುತ್ತಿದೆ’ ಎಂದು ನಗರದ ಉದಯಗಿರಿಯ ಗೃಹಿಣಿ ಬಬಿತಾ ಕೆ.ರಾವ್, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸೋಮವಾರ ಇಲ್ಲಿ ತಿಳಿಸಿದರು.
ಜನೌಷಧಿ ದಿವಸ್ ಅಂಗವಾಗಿ ಆರೋಗ್ಯ ಇಲಾಖೆ ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಟ್ಟಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಬಬಿತಾ, ಪ್ರಧಾನಿಯೊಟ್ಟಿಗೆ ಮಾತನಾಡುವಾಗ ಈ ಮಾತು ಹೇಳುತ್ತಿದ್ದಂತೆ; ಮೋದಿ ಮಂದಸ್ಮಿತರಾದರು.
‘ನನ್ನ ಪತಿಗೆ ₹ 15 ಸಾವಿರ ಸಂಬಳವಿದೆ. ಮನೆಯಲ್ಲಿ ಐವರಿದ್ದೇವೆ. ಹೃದಯ ಸಮಸ್ಯೆ, ಥೈರಾಯ್ಡ್, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿದ್ದಾರೆ. ಮೊದಲು ಔಷಧಿಗೆ ಸಾಕಷ್ಟು ವೆಚ್ಚ ಮಾಡಬೇಕಿತ್ತು. ಇದೀಗ ತಿಂಗಳಿಗೆ ₹ 400ರಿಂದ ₹ 500 ಸಾಕಾಗುತ್ತಿದೆ. ಜನೌಷಧಿ ಕೇಂದ್ರ ನಮಗೆ ಅನುಕೂಲವಾಗಿದೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ‘ಕರ್ನಾಟಕದಲ್ಲಿ ಐಟಿ, ಡಿಜಿಟಲ್ ದುನಿಯಾ ಬಲವಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಚಿಕ್ಕ ಚಿಕ್ಕ ವಿಡಿಯೊ ತುಣುಕುಗಳನ್ನು ಮಾಡಿ, ಜನೌಷಧಿ ಕೇಂದ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಿ. ಮಧ್ಯಮ ವರ್ಗದವರು, ಬಡವರಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳಿ’ ಎಂದು ಬಬಿತಾರನ್ನು ಹುರಿದುಂಬಿಸಿದರು.
ಸಂವಾದ ಮುಗಿದ ಬಳಿಕ ಮೋದಿ ಮಾತನಾಡುವ ವೇಳೆ ನೆಟ್‌ವರ್ಕ್ ಸಮಸ್ಯೆ ತಲೆದೋರಿತು. ಕೆಲ ಹೊತ್ತು ಭಾಷಣ ಪ್ರಸಾರವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.