ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಅರಮನೆಯಲ್ಲಿ ಅ.10 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.
ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸಂಜೆ 7.30 ರಿಂದ ಕಾರ್ಯಕ್ರಮ ನಡೆಯಲಿದೆ. ಜಯಚಾಮರಾಜ ಒಡೆಯರ್ ರಚಿಸಿರುವ 94 ಸಂಗೀತ ಕೃತಿಗಳನ್ನು ಒಳಗೊಂಡ ಸಮಗ್ರ ಗ್ರಂಥ ‘ಶ್ರೀವಿದ್ಯಾ ಸಂಕೀರ್ತನ ಸುಧಾಲಹರಿ’ಯನ್ನು ರಾಷ್ಟ್ರಪತಿ ಬಿಡುಗಡೆ ಮಾಡಲಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಯಚಾಮರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೀಡಿದ್ದ ಜಾಗದಲ್ಲಿ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ನಿರ್ಮಿಸಲಾಗುವ ನೂತನ ಕ್ಯಾಂಪಸ್‌ಗೆ ‘ಜಯಚಾಮರಾಜ ಒಡೆಯರ್ ಉನ್ನತ ಅಧ್ಯಯನ ಶಿಕ್ಷಣ ಕೇಂದ್ರ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ನೂತನ ಕೇಂದ್ರದ ನಾಮಫಲಕವನ್ನು ರಾಷ್ಟ್ರಪತಿ ಅನಾವರಣಗೊಳಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಅರಮನೆ ಆವರಣದಲ್ಲಿ ಬೆಂಗಳೂರಿನ ಎಂಇಜಿ ಮತ್ತು ಸೆಂಟರ್, ತಮಿಳುನಾಡಿನ ವೆಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟಲ್ ಸೆಂಟರ್, ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಒಳಗೊಂಡಂತೆ ಎಂಟು ವಾದ್ಯ ತಂಡಗಳಿಂದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜನ್ಮಶತಮಾನೋತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಅ.13 ರಂದು ಸಂಜೆ 6.30 ರಿಂದ ರಘು ದೀಕ್ಷಿತ್ ಅವರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.