ADVERTISEMENT

ದಲಿತ ಸಮುದಾಯ ಬಿಜೆಪಿ ಬೆಂಬಲಿಸಿ: ಅನ್ನದಾನಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:21 IST
Last Updated 6 ಏಪ್ರಿಲ್ 2024, 15:21 IST
   

ಮೈಸೂರು: ‘ಲೋಕಸಭಾ ‌ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ಎಸ್.ಬಾಲರಾಜ್ ಅವರಿಗೆ‌ ದಲಿತ ಸಮುದಾಯದವರು ಮತ ನೀಡಬೇಕು’ ಎಂದು ಮುಖಂಡ ಅನ್ನದಾನಿ ಮನವಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ದಲಿತ ಸಮುದಾಯಕ್ಕೆ ಮೀಸಲಾತಿ ನೀಡಿದ್ದ ಏಕೈಕ ರಾಜರಾಗಿದ್ದಾರೆ. ಅಂತಹ ವಂಶಸ್ಥರಿಗೆ ನಾವು ಮತ ನೀಡಬೇಕು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಎಷ್ಟು ಅವಮಾನ‌ ಮಾಡಿದ್ದಾರೆ ಎಂಬುದು ಎಲ್ಲವೂ ಇತಿಹಾಸದಲ್ಲಿದೆ. ಅದನ್ನು ವಿದ್ಯಾವಂತ ದಲಿತರು ತಿಳಿದುಕೊಳ್ಳಬೇಕು’ ಎಂದರು.

‘ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅಭಿವೃದ್ಧಿ ಎಂದು ಹೇಳಿಕೊಂಡು ಸರ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಐದು ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಎಷ್ಟು ಜನರಿಗೆ ತಲುಪಿದೆ ಎಂಬುದು ತಿಳಿಸಲಿ. ಅಲ್ಲದೆ, ಗ್ಯಾರಂಟಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಸಿಕೊಂಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಯಾವುದೇ ಪಕ್ಷ, ನಾಯಕರಾದರೂ ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಸಂವಿಧಾನ ತಿದ್ದುಪಡಿ ಬಗ್ಗೆ ಅನಂತಕುಮಾರ ಹೆಗಡೆ ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಸುತ್ತುತ್ತಾ ಇದ್ದಾರೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅನೇಕ‌ ಬಾರಿ ತಿದ್ದುಪಡಿ ಮಾಡಿದೆ ಇದು ಅರಿವಿಲ್ಲ’ ಎಂದು ಕಿಡಿಕಾರಿದರು.

ಮುಖಂಡರಾದ ಅಶ್ವಿನ್ ಕುಮಾರ್, ಬಿ.ಭಾಗ್ಯವತಿ, ಕೃಷ್ಣ, ಮಂಜು, ಶಿವಕುಮಾರ್, ಮುದ್ದುರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.