ಮೈಸೂರು: ‘ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಎಚ್.ಡಿ. ದೇವೇಗೌಡರು ಕರೆದಿಲ್ಲ. ಕರೆದಿದ್ದೆ ಎಂದು ಅವರು ಹೇಳಿದರೆ, ನಾನು ಅಂದೇ ರಾಜಕಾರಣ ಬಿಟ್ಟು ಬಿಡುತ್ತೇನೆ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
‘ಜಿಟಿಡಿ ಅವರನ್ನು ದೇವೇಗೌಡರೆ ಕರೆ ಮಾಡಿ ಕರೆದಿದ್ದರು’ ಎಂಬ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ಇಲ್ಲಿ ಸೋಮವಾರ ತಿರುಗೇಟು ನೀಡಿದ ಅವರು, ‘ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಪ್ರಮಾಣ ಮಾಡುತ್ತೇನೆ ಚಾಮುಂಡಿಬೆಟ್ಟಕ್ಕೆ ಬಾ, ಅಲ್ಲಿಗೆ ಬಾ ಅಂದರೆ ಹೋಗಲಾಗುತ್ತದೆಯೇ?’ ಎಂದು ಖಾರವಾಗಿ ಕೇಳಿದರು.
‘ಈ ಹಿಂದೆ ಎಚ್. ವಿಶ್ವನಾಥ್ ಜೊತೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು? ಅದೇ ನನಗೂ ಆಗಬೇಕಾ’ ಎಂದು ಪ್ರಶ್ನಿಸಿದರು.
‘ನಾನು ಹೇಳುತ್ತಿರುವುದೇ ಸತ್ಯ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ಅಂದು ಸಂಜೆಯೇ ನನ್ನ ತಾಯಿ ಬಳಿ ಹೋಗಿ ತಪ್ಪೊಪ್ಪಿಕೊಂಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ; ಸುಳ್ಳು ಹೇಳುವವನೂ ಅಲ್ಲ’ ಎಂದರು.
‘ಯಾರೋ ಒಬ್ಬರ ಹೆಸರು ಇಟ್ಟುಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ನನಗಿಲ್ಲ. ಯಾರು ಇಲ್ಲದಿದ್ದರೂ ನಾನು ರಾಜಕಾರಣ ಮಾಡಿದ್ದೇನೆ. ನನಗೆ ರಾಜಕೀಯ ಮಾಡುವುದು ಗೊತ್ತು. ನಾನು ಯಾರ ಕತ್ತನ್ನೂ ಕೊಯ್ದಿಲ್ಲ. ನನ್ನನ್ನು ಯಾರೂ ಯಾವ ಪಕ್ಷಕ್ಕೂ ಕರೆದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು’ ಎಂದು ಹೇಳಿದರು.
‘ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ನನ್ನನ್ನು ಭೇಟಿಯಾಗಿದ್ದರು. ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟುವ ಉತ್ಸಾಹ ಅವರಿಗಿದೆ. ಅದನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ರಾಜ್ಯ ಪ್ರವಾಸ ಮುಗಿಸಿ, ಮತ್ತೆ ಬರುತ್ತೇನೆ ಎಂದು ತಿಳಿಸಿ ಹೋಗಿದ್ದಾರೆ. ಶಾಸಕರನ್ನು ಕಟ್ಟಿಕೊಂಡು ಪಕ್ಷಗಳನ್ನು ಕಟ್ಟಲು ಆಗುವುದಿಲ್ಲ. ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ’ ಎಂದು ಪ್ರತಿಕ್ರಿಯಿಸಿದರು.
‘ನಾನು, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಈವರೆಗೂ ಜೆಡಿಎಸ್‌ನ ಯಾವ ಶಾಸಕರ ಜೊತೆಯೂ ಮಾತನಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ಅವರಾಗಿಯೇ ಕರೆ ಮಾಡಿದರೆ ಮಾತನಾಡುತ್ತೇನೆ. ಸಿ.ಪಿ. ಯೋಗೇಶ್ವರ್ ಜೊತೆ ಉಪ ಚುನಾವಣೆಗೂ ಮುಂಚೆಯೇ ಮಾತನಾಡಿದ್ದೆ. ಜೆಡಿಎಸ್‌ನಲ್ಲಿ ನನಗೆ ನೋವು ಹೊಸದೇನಲ್ಲ. ಹಲವು ಬಾರಿ ಇಂತಹ ನೋವು ಆಗಿವೆ. ಈಗಲೂ ಮತ್ತೊಂದು ನೋವು ಆಗುತ್ತಿದೆ. ಏನು ಮಾಡುವುದು?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.