ಮೈಸೂರು: ‘ಹಾವುಗಳೊಂದಿಗೆ ಹೇಗೆ ಬದುಕಬೇಕು ಎಂಬುದರ ಬಗ್ಗೆ ಮನುಷ್ಯನಿಗೆ ತಿಳಿವಳಿಕೆ ಕೊರತೆ ಇದೆ’ ಎಂದು ಉರಗ ಸಂಶೋಧಕ ಜೆರ್ರಿ ಮಾರ್ಟಿನ್ ಹೇಳಿದರು.
ನಗರದ ಸುರುಚಿ ರಂಗಮನೆಯಲ್ಲಿ ಕಲಾಸುರುಚಿ, ಕುತೂಹಲಿ ಕನ್ನಡ, ದಿ ಅಕಾಡೆಮಿ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತದಲ್ಲಿ ಹಾವುಗಳು ಹಾಗೂ ಹಾವು ಕಡಿತ’ ವಿಷಯ ಕುರಿತ ಸೈನ್ಸ್ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಹಾವು ಕಡಿತದಿಂದ ಪ್ರತಿ ವರ್ಷ 58 ಸಾವಿರ ಜನರು ಸಾಯುತ್ತಿದ್ದಾರೆ. ಹಾವು ಕಡಿತದ ಸಂಘರ್ಷ ತಪ್ಪಿಸಲು ಅವುಗಳ ಬಗೆಗಿನ ತಿಳಿವಳಿಕೆ ಅಗತ್ಯವಾಗಿದ್ದು, ಹಾವುಗಳನ್ನು ಸಂರಕ್ಷಿಸುವ ಏಕೈಕ ಮಾರ್ಗವೆಂದರೆ ಅವುಗಳೊಂದಿಗೆ ವಾಸಿಸುವುದಾಗಿದೆ’ ಎಂದರು.
‘ಹಾವುಗಳು ಸಾಮಾನ್ಯವಾಗಿ ಭಯಪಡುತ್ತವೆ. ಅವು ವಿಷಕಾರಿ. ನಾಯಿಗಳು, ಬೆಕ್ಕುಗಳು ಮತ್ತು ಹುಲಿಗಳಂತಹ ಸಾಮಾನ್ಯ ಪ್ರಾಣಿಗಳಂತಲ್ಲ. ಭಾರತದಲ್ಲಿ ಹಾವುಗಳ ಬಗ್ಗೆ ನಡೆಸಿದ ವಿಜ್ಞಾನ ಬಹಳ ಕಡಿಮೆಯಾಗಿದ್ದು, ನಾವು ಯೋಚಿಸುವುದಕ್ಕಿಂತ ಹೆಚ್ಚು ಹಾವುಗಳು ನಮ್ಮ ಸುತ್ತಲೂ ಇದ್ದು, ಭಾರತದಲ್ಲಿ 300ಕ್ಕೂ ಹೆಚ್ಚು ಪ್ರಭೇದಗಳಿವೆ’ ಎಂದು ತಿಳಿಸಿದರು.
ಹಾವು ಕಡಿತ ಸಂದರ್ಭ: ‘ಹಾವು ಕಡಿತದ ಸಂದರ್ಭದಲ್ಲಿ ನೇರವಾಗಿ ಆಸ್ಪತ್ರೆ, ಕ್ಲಿನಿಕ್‌ಗೆ ಹೋಗಬೇಕು. ಅದರ ಲಕ್ಷಣ, ಸಮಯದ ಬಗ್ಗೆ ವೈದ್ಯರಿಗೆ ವರದಿ ಮಾಡಬೇಕು. ಗಾಯದ ಜಾಗಕ್ಕೆ ಹಗ್ಗ ಅಥವಾ ಬಟ್ಟೆಯಿಂದ ಕಟ್ಟಬಾರದು. ಗಾಯವಾದ ಜಾಗವನ್ನು ಕತ್ತರಿಸುವುದಾಗಲಿ, ರಕ್ತ ಹೀರಲು ಪ್ರಯತ್ನಿಸುವುದಾಗಲಿ ಮಾಡಬಾರದು. ಯಾವುದೇ ಔಷಧ, ಮದ್ಯ, ಕಾಫಿ, ಟೀ ಅಥವಾ ಉತ್ತೇಜಿಸುವ ಪಾನೀಯ ತೆಗೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.
‘ಹಾವು ಕಡಿತದ ಪ್ರಮಾಣ ತಗ್ಗಿಸಲು ಸೋಂಕುಶಾಸ್ತ್ರದ ಸಮೀಕ್ಷೆ ಹೆಚ್ಚಾಗಬೇಕು. ವಿಷದ ಸಂಶೋಧನೆ ನಡೆಯಬೇಕು. ಹಾವುಗಳೆಂದರೆ ಜನಸಾಮಾನ್ಯರಲ್ಲಿ ಅಪಾರ ಭಯ ಹಾಗೂ ಮೂಢನಂಬಿಕೆ ಇದೆ. ಹೀಗಾಗಿ ಅನೇಕ ಜನರು ಹಾವುಗಳನ್ನು ಕೊಲ್ಲುತ್ತಿದ್ದಾರೆ. ಹಾವುಗಳು ಪರಿಸರದ ಸಮತೋಲನಕ್ಕೆ ಅತ್ಯಗತ್ಯ’ ಎಂದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.