ಮೈಸೂರು: ‘ನಮ್ಮ ಪರಂಪರೆ ಹಾಗೂ ಪಾರಂಪರಿಕ ಕಟ್ಟಡಗಳನ್ನು ಉಳಿಸುವುದು ಯುವ ಪೀಳಿಗೆಯ ಕರ್ತವ್ಯವಾಗಿದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದರು.
ದಸರಾ ಅಂಗವಾಗಿ ನಗರದ ಪುರಭವನದ ಬಳಿಯಿಂದ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ಪಾರಂಪರಿಕ ನಡಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿರಿಯರು ಕಷ್ಟಪಟ್ಟು ನಿರ್ಮಾಣ ಮಾಡಿರುವಂತಹ ಹಲವು ಪಾರಂಪರಿಕ ಕಟ್ಟಡಗಳಿವೆ. ಅವುಗಳನ್ನು ಉಳಿಸುವ–ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜೊತೆಗೆ ಯುವ ಪೀಳಿಗೆಯದ್ದೂ ಆಗಿದೆ. ಇದಕ್ಕಾಗಿ ಕೈಜೋಡಿಸೇಕು’ ಎಂದು ಕೋರಿದರು.
‘ರಾಜ್ಯದಲ್ಲಿ ಸಂರಕ್ಷಣೆ ಮಾಡಲಾಗಿಲ್ಲದ ಹಲವು ಕಟ್ಟಡಗಳಿವೆ ಹಾಗೂ ವಾಸ್ತುಶಿಲ್ಪಗಳಿವೆ. ಇದರ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಚಾಮರಾಜನರ ವಿಶ್ವವಿದ್ಯಾಲಯದ ಕುಲಪತಿ ಗಂಗಾಧರ್ ಮಾತನಾಡಿ, ‘ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದಾಗಲೂ ಮೈಸೂರು ಎಂದಾಕ್ಷಣ ನೆನಪಾಗುವುದೆ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವ ವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಸಂರಕ್ಷಣೆಯ ಬಗ್ಗೆ ಜಾಗೃತಿಯೂ ಮೂಡಬೇಕಾಗಿದೆ’ ಎಂದು ಹೇಳಿದರು.
ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ, ‘ವಿಶ್ವಕ್ಕೆ ಪಾರಂಪರಿಕ ಜ್ಞಾನ ನೀಡಿದ ನಾಡು ಮೈಸೂರು. ಪಾರಂಪರಿಕ ಕಟ್ಟಡಗಳು ಕೂಡ ರಾಜ್ಯಕ್ಕೆ ಕೀರ್ತಿ ತರುತ್ತವೆ’ ಎಂದರು.
ಪಾರಂಪರಿಕ ನಡಿಗೆಯು ದೊಡ್ಡ ಗಡಿಯಾರ– ಕೆ.ಆರ್. ವೃತ್ತ– ಚಿಕ್ಕ ಗಡಿಯಾರ–, ದೇವರಾಜ ಮಾರುಕಟ್ಟೆ–ಕೃಷ್ಣರಾಜೇಂದ್ರ ಆಸ್ಪತ್ರೆ– ಮೈಸೂರು ಮೆಡಿಕಲ್ ಕಾಲೇಜು– ಸರ್ಕಾರಿ ಆಯುರ್ವೇದ ಕಾಲೇಜು– ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ– ಗಾಂಧಿ ವೃತ್ತದಲ್ಲಿ ಸಾಗಿ ಪುರಭವನದ ಬಳಿ ಕೊನೆಗೊಂಡಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350 ಮಂದಿ ಪಾಲ್ಗೊಂಡಿದ್ದರು. ಅವರಿಗೆ ಪಾರಂಪರಿಕ ಕಟ್ಟಡಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.